ADVERTISEMENT

ಗೃಹೋಪಕರಣ ವಿತರಣೆ: ವ್ಯಾಪಾರವಲ್ಲ

ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 15:28 IST
Last Updated 29 ನವೆಂಬರ್ 2019, 15:28 IST
ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಕೋಲಾರದಲ್ಲಿ ಶುಕ್ರವಾರ ಮಹಿಳಾ ಸಂಘಗಳ ಸದಸ್ಯರಿಗೆ ಗೃಹೋಪಯೋಗಿ ಉಪಕರಣ ವಿತರಿಸಿದರು.
ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಕೋಲಾರದಲ್ಲಿ ಶುಕ್ರವಾರ ಮಹಿಳಾ ಸಂಘಗಳ ಸದಸ್ಯರಿಗೆ ಗೃಹೋಪಯೋಗಿ ಉಪಕರಣ ವಿತರಿಸಿದರು.   

ಕೋಲಾರ: ‘ಸೇವಾ ಮನೋಭಾವದಿಂದ ಸಹಕಾರ ವ್ಯವಸ್ಥೆ ಮೂಲಕ ಗೃಹೋಪಯೋಗಿ ಉಪಕರಣಗಳನ್ನು ಬಡ್ಡಿರಹಿತ ಸುಲಭ ಸಾಲ ಕಂತುಗಳಲ್ಲಿ ವಿತರಿಸಲಾಗುತ್ತಿದೆ. ಇದು ವ್ಯಾಪಾರವಲ್ಲ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಹೇಳಿದರು.

ಡಿಸಿಸಿ ಬ್ಯಾಂಕ್‌ ಹಾಗೂ ದಕ್ಷಿಣ ಕಸಬಾ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಸಹಯೋಗದಲ್ಲಿ ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಸಂಘಗಳ ಸದಸ್ಯರಿಗೆ ಸಾಲ ಹಾಗೂ ಗೃಹೋಪಕರಣ ವಿತರಿಸಿ ಮಾತನಾಡಿದರು.

‘ಶ್ರೀಮಂತ ಹಾಗೂ ನಗರವಾಸಿಗಳಿಗೆ ಸೀಮಿತವಾದ ಗೃಹೋಪಕರಣಗಳನ್ನು ಗ್ರಾಮೀಣ ಭಾಗದ ಬಡ, ಮಧ್ಯಮ ವರ್ಗದ ಮಹಿಳೆಯರಿಗೂ ಖರೀದಿಸಿ ಬಳಸುವ ಆಸೆ ಇರುತ್ತದೆ. ಆ ಮಹಿಳೆಯರ ಆಸೆಗೆ ಆರ್ಥಿಕ ಸ್ಥಿತಿ ಅಡ್ಡಿಯಾಗಿರುತ್ತದೆ. ಹೀಗಾಗಿ ಬ್ಯಾಂಕ್‌ನಿಂದ ಗೃಹೋಪಕರಣ ನೀಡಿ ಮಹಿಳೆಯರ ಕನಸು ನನಸಾಗಿಸುತ್ತಿದ್ದೇವೆ’ ಎಂದರು.

ADVERTISEMENT

‘ಬ್ಯಾಂಕಿನಿಂದ ಸಾಲ ಪಡೆದು ಪ್ರಾಮಾಣಿಕತೆಯಿಂದ ಮರುಪಾವತಿಸಿರುವ ಮಹಿಳೆಯರ ಆಸೆ ಈಡೇರಿಸುವ ಪ್ರಾಮಾಣಿಕ ಪ್ರಯತ್ನವೇ ಈ ಯೋಜನೆ ಉದ್ದೇಶ. ಮಹಿಳೆಯರು ಕುಟುಂಬಕ್ಕೆ ಅಗತ್ಯವಾದ ಗೃಹೋಪಕರಣ ಮಾತ್ರ ಖರೀದಿಸಬೇಕು. ವಿನಾಕಾರಣ ಉಪಕರಣ ಕೊಂಡು ಆರ್ಥಿಕ ಸಮಸ್ಯೆಗೆ ಸಿಲುಕಬಾರದು’ ಎಂದು ಸಲಹೆ ನೀಡಿದರು.

‘ಪ್ರತಿಷ್ಠಿತ ಕಂಪನಿಗಳ ಉಪಕರಣ ಮಾತ್ರ ನೀಡುತ್ತಿದ್ದು, ಗುಣಮಟ್ಟ, ಗ್ಯಾರೆಂಟಿ, ದರದಲ್ಲಿ ವ್ಯತ್ಯಾಸವಿದ್ದರೆ ನಮ್ಮ ಗಮನಕ್ಕೆ ತನ್ನಿ. ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಉಪಕರಣಗಳ ಸರ್ವಿಸ್‌ ಕೇಂದ್ರಗಳಿದ್ದು, ಗ್ರಾಹಕ ಸೇವೆಯೂ ಸಿಗಲಿದೆ. ಈ ಯೋಜನೆಗೆ ಹೆಚ್ಚಿನ ಸ್ಪಂದನೆ ಸಿಕ್ಕಿದೆ. 200ಕ್ಕೂ ಹೆಚ್ಚು ವಾಷಿಂಗ್ ಮೆಷಿನ್, 120ಕ್ಕೂ ಹೆಚ್ಚು ಟಿ.ವಿ, ಗ್ರೈಂಡರ್ ಖರೀದಿಗೆ ಮಹಿಳೆಯರು ಬೇಡಿಕೆ ಸಲ್ಲಿಸಿದ್ದಾರೆ’ ಎಂದು ವಿವರಿಸಿದರು.

ಆರ್ಥಿಕ ನೆರವು: ‘ಗ್ರಾಮೀಣ ಜನರೂ ಇತ್ತೀಚಿನ ವರ್ಷಗಳಲ್ಲಿ ಆಧುನಿಕ ಗೃಹೋಪಕರಣ ಖರೀದಿಗೆ ಒತ್ತು ನೀಡುತ್ತಿದ್ದಾರೆ, ಆರ್ಥಿಕವಾಗಿ ಸಬಲರಲ್ಲದವರೂ ಕೊರಗುವ ಅಗತ್ಯವಿಲ್ಲ. ಡಿಸಿಸಿ ಬ್ಯಾಂಕ್ ಸಹಕಾರಿ ವ್ಯವಸ್ಥೆ ಮೂಲಕ ಉಪಕರಣ ಖರೀದಿಗೆ ಆರ್ಥಿಕ ನೆರವು ನೀಡುತ್ತಿದ್ದು, ಸದುಪಯೋಗಪಡಿಸಿಕೊಳ್ಳಿ’ ಎಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಂ.ಎಲ್.ಅನಿಲ್‌ಕುಮಾರ್‌ ಸಲಹೆ ನೀಡಿದರು.

‘ಡಿಸಿಸಿ ಬ್ಯಾಂಕ್ ಮಹಿಳೆಯರನ್ನು ನಂಬಿ ಸಾವಿರಾರು ಕೋಟಿ ಸಾಲ ನೀಡಿದೆ. ಬ್ಯಾಂಕ್‌ ಜಿಲ್ಲೆಯ ಬಡ ಕುಟುಂಬಗಳ ಪಾಲಿಗೆ ದೇವಾಲಯ. ಮಹಿಳೆಯರು ಸಕಾಲಕ್ಕೆ ಬದ್ಧತೆಯಿಂದ ಸಾಲ ಹಿಂದಿರುಗಿಸಬೇಕು’ ಎಂದು ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ರಮೇಶ್ ಮನವಿ ಮಾಡಿದರು.

ಮಹಿಳಾ ಸಂಘಗಳ ಸದಸ್ಯರಿಗೆ ₹ 1 ಕೋಟಿ ಸಾಲ ವಿತರಿಸಲಾಯಿತು. ತಾಲ್ಲೂಕು ಪಂಚಾಯಿತಿ ಸದಸ್ಯ ಮಂಜುನಾಥ್, ಕಸಬಾ ಸೊಸೈಟಿ ಅಧ್ಯಕ್ಷ ಸೀನಪ್ಪ, ಉಪಾಧ್ಯಕ್ಷ ಸೀನಪ್ಪ, ನಿರ್ದೇಶಕರಾದ ಶ್ರೀರಾಮರೆಡ್ಡಿ, ನಾರಾಯಣಸ್ವಾಮಿ, ವೆಂಕಟೇಶಪ್ಪ, ಮುನಿವೆಂಕಟಪ್ಪ, ಪದ್ಮಾವತಿ, ಸರೋಜಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.