ADVERTISEMENT

ಮನೆಬಾಗಿಲಿಗೆ ಬ್ಯಾಂಕಿಂಗ್ ಸೌಲಭ್ಯ

ಮೊಬೈಲ್ ಬ್ಯಾಂಕಿಂಗ್ ವಾಹನದಲ್ಲಿ ಮೈಕ್ರೋ ಎಟಿಎಂ ವಹಿವಾಟಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 1:47 IST
Last Updated 7 ಫೆಬ್ರುವರಿ 2021, 1:47 IST
ಕೋಲಾರ ಡಿಸಿಸಿ ಬ್ಯಾಂಕ್ ಮುಂಭಾಗ ಮೊಬೈಲ್ ಬ್ಯಾಂಕಿಂಗ್ ವಾಹನದಲ್ಲಿ ಮೈಕ್ರೋ ಎಟಿಎಂ ಹಾಗೂ ವಹಿವಾಟಿಗೆ ಶಾಸಕ ಕೆ.ಶ್ರೀನಿವಾಸಗೌಡ ಚಾಲನೆ ನೀಡಿದರು
ಕೋಲಾರ ಡಿಸಿಸಿ ಬ್ಯಾಂಕ್ ಮುಂಭಾಗ ಮೊಬೈಲ್ ಬ್ಯಾಂಕಿಂಗ್ ವಾಹನದಲ್ಲಿ ಮೈಕ್ರೋ ಎಟಿಎಂ ಹಾಗೂ ವಹಿವಾಟಿಗೆ ಶಾಸಕ ಕೆ.ಶ್ರೀನಿವಾಸಗೌಡ ಚಾಲನೆ ನೀಡಿದರು   

ಕೋಲಾರ: ಮನೆಬಾಗಿಲಿಗೆ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ತಲುಪಿಸುತ್ತಿರುವ ಡಿಸಿಸಿ ಬ್ಯಾಂಕ್ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಅಲ್ಲದೆ ಜಿಲ್ಲೆಯ ಪಾಲಿಗೆ ಹೆಮ್ಮೆ ಮತ್ತು ಗೌರವ ತಂದಿದೆ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅಭಿಪ್ರಾಯಪಟ್ಟರು.

ನಗರದಲ್ಲಿ ಮೊಬೈಲ್ ಬ್ಯಾಂಕಿಂಗ್ ವಾಹನದಲ್ಲಿ ಮೈಕ್ರೋ ಎಟಿಎಂ ಹಾಗೂ ವಹಿವಾಟಿಗೆ ಚಾಲನೆ ನೀಡಿ ಮಾತನಾಡಿ, ಗ್ರಾಹಕರ
ಮನೆಬಾಗಿಲಿಗೆ ಬ್ಯಾಂಕಿಂಗ್ ಸೇವೆ ಒದಗಿಸಿದ ಮೊದಲ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಡಿಸಿಸಿ ಬ್ಯಾಕ್ ಪಾತ್ರವಾಗಿದೆ ಎಂದರು.

ಆರ್ಥಿಕ ವಹಿವಾಟು ಡಿಜಿಟಲೀಕರಣಗೊಳ್ಳುತ್ತಿದೆ. ಕೈಬೆರಳ ತುದಿಯಲ್ಲಿ ಬ್ಯಾಂಕಿಂಗ್ ಸೇವೆ ಒದಗಿಸುವಷ್ಟು ವೇಗದಲ್ಲಿ ತಾಂತ್ರಿಕತೆ ಬೆಳೆದಿದೆ. ಇಂತಹ ಸಂದರ್ಭ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮನೆಬಾಗಿಲಿಗೆ ಸೌಲಭ್ಯ ಕಲ್ಪಿಸಿರುವುದು ಮಾತ್ರವಲ್ಲ, ಹಣ ಡ್ರಾ, ಸಂದಾಯಕ್ಕೆ ರಸೀದಿಯನ್ನು ನೀಡಿ ಪಾರದರ್ಶಕತೆ ನಿರ್ವಹಿಸುತ್ತಿರುವುದು ಮಾದರಿ ಎಂದರು.

ADVERTISEMENT

ಲಕ್ಷ್ಮೀ ಬಾಂಡ್‌ಗೆ ಹೆಚ್ಚಿನ ಬಡ್ಡಿ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ‘ಮಹಿಳೆಯರು ಡಿಸಿಸಿ ಬ್ಯಾಂಕಿನಲ್ಲೇ ವೈಯಕ್ತಿಕ ಖಾತೆ ತೆರೆದು ಉಳಿತಾಯದ ಹಣ ಠೇವಣಿ ಇಡಿ, ಲಕ್ಷ್ಮಿ ಬಾಂಡ್ ಖರೀದಿಸಿ ಹೆಚ್ಚಿನ ಬಡ್ಡಿಯ ಲಾಭ ಪಡೆಯಿರಿ’ ಎಂದು ಮನವಿ
ಮಾಡಿದರು.

‘ಡಿಸಿಸಿ ಬ್ಯಾಂಕ್ ಮಹಿಳೆಯರ ತವರು ಮನೆ ಇದ್ದಂತೆ, ನಿಮಗೆ ಅರಿಶಿನ, ಕುಂಕುಮ, ಹೂವಿನೊಂದಿಗೆ ಸಾಲ ನೀಡುತ್ತೇವೆ ಅಲೆದಾಡಿಸುವುದಿಲ್ಲ. ನಿಮ್ಮ ಉಳಿತಾಯದ ಹಣ ವಾಣಿಜ್ಯ ಬ್ಯಾಂಕುಗಳಲ್ಲಿ ಇದ್ದರೆ ಕೂಡಲೇ ಡಿಸಿಸಿ ಬ್ಯಾಂಕಿಗೆ ತನ್ನಿ’ ಎಂದರು.

ಹೋಳೂರಿನ ಎಚ್.ಕೆ.ನಾಗರಾಜ್, ಬ್ಯಾಂಕಿನ ನಿರ್ದೇಶಕ ಕೆ.ವಿ. ದಯಾನಂದ್, ಕೆ.ಎಂ.ಮುನಿರಾಜು, ಸಹಕಾರಿ ಯೂನಿಯನ್ ನಿರ್ದೇಶಕ ಅಣ್ಣಿಹಳ್ಳಿ ನಾಗರಾಜ್, ರೈತ ನೆನುಮನಹಳ್ಳಿ ಚಂದ್ರಶೇಖರ್, ಆಟೊ ನಾರಾಯಣಸ್ವಾಮಿ, ಶಾಖಾ ವ್ಯವಸ್ಥಾಪಕ ಅಂಬರೀಷ್, ಅಮೀನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.