ADVERTISEMENT

ಕೆಜಿಎಫ್‌ | ಕೆರೆಯಲ್ಲಿ ರಾಜಕಾಲುವೆ, ರಸ್ತೆ: ಕಣ್ಮುಚ್ಚಿ ಕುಳಿತ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 7:09 IST
Last Updated 30 ಏಪ್ರಿಲ್ 2025, 7:09 IST
ಕೆಜಿಎಫ್‌ ತಾಲ್ಲೂಕು ಘಟ್ಟಕಾಮಧೇನಹಳ್ಳಿ ಪಂಚಾಯಿತಿಯ ಕೃಷ್ಣಾಪುರದ ಕೆರೆಯಲ್ಲಿ ರಾಜಕಾಲುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿರುವುದು
ಕೆಜಿಎಫ್‌ ತಾಲ್ಲೂಕು ಘಟ್ಟಕಾಮಧೇನಹಳ್ಳಿ ಪಂಚಾಯಿತಿಯ ಕೃಷ್ಣಾಪುರದ ಕೆರೆಯಲ್ಲಿ ರಾಜಕಾಲುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿರುವುದು   

ಕೆಜಿಎಫ್‌: ತಾಲ್ಲೂಕಿನ ಘಟ್ಟಕಾಮಧೇನಹಳ್ಳಿ ಗ್ರಾಮಪಂಚಾಯಿತಿಗೆ ಸೇರುವ ಎರಡು ಕೆರೆಗಳಲ್ಲಿ ಅಕ್ರಮವಾಗಿ ರಸ್ತೆ ಮತ್ತು ರಾಜಕಾಲುವೆಯನ್ನು ಮಾಡುವ ಪ್ರಯತ್ನ ನಡೆದಿದ್ದು, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.

ಪಂಚಾಯಿತಿಯ ಕೃಷ್ಣಾಪುರದಲ್ಲಿ 70.35 ಎಕರೆ ಬೃಹತ್‌ ಕೆರೆ ಇದೆ. ಅದಕ್ಕೆ ಹೊಂದಿಕೊಂಡಂತೆ ಕೃಷ್ಣರಾಜಪುರ ಕೆರೆ ಇದ್ದು, ಅದರ ವಿಸ್ತೀರ್ಣ 12.33 ಎಕರೆ ಇದೆ. ಇದಕ್ಕೆ ಆತುಕೊಂಡಂತೆ ಸರ್ವೆ ನಂಬರ್‌ 34ರಲ್ಲಿ ಮತ್ತೊಂದು ಕೆರೆ ಇದ್ದು, ಕೆಜಿಎಫ್ ಹಿಂದಿನ ಸ್ಯಾನಿಟರಿ ಬೋರ್ಡ್‌ ಹೆಸರಿನಲ್ಲಿ 6 ಎಕರೆ ಮತ್ತು ರಾಷ್ಟ್ರಪತಿಗಳ ಹೆಸರಿನಲ್ಲಿ 2. 13 ಎಕರೆ ಇದೆ. ಎಲ್ಲಾ ಕೆರೆಗಳು ಒಂದಕ್ಕೊಂದು ಅಂಟಿಕೊಂಡಿರುವುದರಿಂದ ದೊಡ್ಡ ವಿಸ್ತೀರ್ಣವನ್ನು ಹೊಂದಿದೆ. ಸಮೀಪದ ಬಡಮಾಕನಹಳ್ಳಿ ಕಾಡಿನಲ್ಲಿರುವ ಕೃಷ್ಣಮೃಗಗಳು ಸೇರಿದಂತೆ ಹಲವಾರು ಪ್ರಾಣಿಗಳಿಗೆ ನೀರಿನ ಆಶ್ರಯವಾಗಿದೆ.

ಕೆರೆಯಲ್ಲಿ ಕೆಲವು ದಿನಗಳಿಂದ ಜೆಸಿಬಿ ಮೂಲಕ ರಸ್ತೆ ನಿರ್ಮಾಣ ಮಾಡುವ ಕಾಮಗಾರಿ ನಡೆದಿದೆ. ಸ್ಥಳೀಯರ ಪ್ರಕಾರ ಅದು ರಾಜಕಾಲುವೆ. ಕೆರೆಯ ಅಚ್ಚುಕಟ್ಟು ಪ್ರದೇಶದಿಂದ ಕೆರೆಗೆ ನೀರನ್ನು ಸಾಗಿಸುವುದು ರಾಜಕಾಲುವೆ. ಆದರೆ ಕೆರೆಯೊಳಗೆ ರಾಜಕಾಲುವೆಯನ್ನು ನಿರ್ಮಾಣ ಮಾಡುತ್ತಿರುವ ಔಚಿತ್ಯವನ್ನು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ. ಜೊತೆಗೆ ರಾಜಕಾಲುವೆ ಪಕ್ಕದಲ್ಲಿಯೇ ರಸ್ತೆ ನಿರ್ಮಾಣಕ್ಕೆ ಕೂಡ ತಯಾರಿ ನಡೆದಿದೆ. ರಸ್ತೆಯಲ್ಲಿ ಈಗಾಗಲೇ ಕಟ್ಟಡ ತ್ಯಾಜ್ಯವನ್ನು ತಂದು ಸುರಿಯಲಾಗಿದೆ. ಜಂಟಿಯಾಗಿರುವ ಘಟ್ಟಕಾಮಧೇನಹಳ್ಳಿ ಕೆರೆ ಮತ್ತು ಕೃಷ್ಣಾಪುರ ಕೆರೆಯನ್ನು ಬೇರ್ಪಡಿಸುವ ಹುನ್ನಾರ ಇಲ್ಲಿ ನಡೆದಿದೆ ಎನ್ನುವ ಆರೋಪವೂ ಕೇಳಿ ಬರುತ್ತಿದೆ.

ADVERTISEMENT

ಕೆರೆಯನ್ನು ಎಲ್ಲಾ ಕಡೆಯಿಂದಲೂ ಒತ್ತುವರಿ ಮಾಡುವ ಯತ್ನಕ್ಕೆ ಹಿಂದೆ ಪಂಚಾಯಿತಿ ಅಧಿಕಾರಿಗಳು ಕೂಡ ಕೈ ಜೋಡಿಸಿದ್ದಾರೆ. ನರೇಗಾ ಯೋಜನೆಯಲ್ಲಿ ಕೆರೆಯಲ್ಲಿಯೇ ರಸ್ತೆ ಮಾಡಿ ಕೆರೆಯ ಒಂದು ಅಂಚನ್ನು ಈಗಾಗಲೇ ಮುಚ್ಚಿದ್ದಾರೆ. ಈಗಾಗಲೇ ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಿಂದಾಗಿ ಮಾನವ ದಿನಗಳನ್ನು ಸೃಷ್ಟಿಸಲಾಗಿದೆ ಎಂದು ನಾಮಫಲಕವನ್ನು ಕೂಡ ಹಾಕಲಾಗಿದೆ. ಅದು ಇಂದಿಗೂ ಪಂಚಾಯಿತಿ ಕೆರೆಯಲ್ಲಿ ನಡೆಸಿರುವ ಕಾಮಗಾರಿಯ ಬಗ್ಗೆ ಸಾಕ್ಷಿ ಹೇಳುತ್ತಿದೆ.

ಪ್ರಸ್ತುತ ಕಾಮಗಾರಿ ನಡೆದಿರುವ ಕೆರೆಯು ವಸತಿ ಪ್ರದೇಶದಿಂದ ದೂರದಲ್ಲಿದೆ. ಅಲ್ಲಿಗೆ ಸಣ್ಣ ಕಾಲು ದಾರಿ ಮೂಲಕ ಹೋಗಬೇಕು. ಇದನ್ನೇ ದುರುಪಯೋಗ ಮಾಡಿಕೊಂಡಿರುವ ಒತ್ತುವರಿದಾರರು ಕಾಮಗಾರಿಯನ್ನು ಯಾವುದೇ ಇಲಾಖೆಯ ಅನುಮತಿ ಪಡೆಯದೆ ರಾಜಾರೋಷವಾಗಿ ನಡೆಸಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ. ಕೆರೆಯಲ್ಲಿ ಈ ಹಿಂದೆ ನರೇಗಾ ಯೋಜನೆಯಲ್ಲಿ ಕಾಮಗಾರಿ ನಡೆಸಿದ್ದ ಅಧಿಕಾರಿಗಳು ಮತ್ತು ತಾಂತ್ರಿಕ ಅನುಮೋದನೆ ನೀಡಿದ್ದ ಎಂಜಿನಿಯರ್‌ ಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕೆರೆಯಲ್ಲಿ ಕಾಮಗಾರಿ ನಡೆಸಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದರ ಹಿಂದೆ ಯಾರ ಕೃತ್ಯವಿದೆಯೋ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗುವುದು ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.

ಬಾಕ್ಸ್‌

ಪಂಚಾಯಿತಿಯ ಗಮನಕ್ಕೆ ಬಾರದೆ ಕಾಮಗಾರಿ ನಡೆದಿದೆ. ಪಂಚಾಯಿತಿಯಿಂದ ಯಾವುದೇ ಅನುಮತಿಯನ್ನು ನೀಡಿಲ್ಲ. ಹಿಂದೆ ಪಂಚಾಯಿತಿಯಲ್ಲಿ ನಡೆದಿದ್ದ ಅಕ್ರಮಗಳಿಗೆ ತಡೆ ಹಾಕಲಾಗಿದೆ. ಕಟ್ಟಡ ತ್ಯಾಜ್ಯವನ್ನು ತೆರವು ಮಾಡಲು ಕ್ರಮ ವಹಿಸಲಾಗುವುದು. ಕೆರೆಯಲ್ಲಿ ಯಾವುದೇ ಕಾಮಗಾರಿ ನಡೆಸದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಲಾಗಿದೆ ಎಂದು ಘಟ್ಟಕಾಮಧೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ತಿಳಿಸಿದ್ದಾರೆ.

ಕೆರೆಯಲ್ಲಿಯೇ ರಸ್ತೆ ಕಾಮಗಾರಿ ನಡೆಸಿರುವ ಬಗ್ಗೆ ಹಾಕಲಾಗಿರುವ ನರೇಗಾ ನಾಮಫಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.