ಕೆಜಿಎಫ್: ನರೇಗಾ ಯೋಜನೆ ಕಾಮಗಾರಿ ನಡೆಸುತ್ತಿರುವುದನ್ನು ತಡೆಗಟ್ಟಲು ಕೆಲ ವ್ಯಕ್ತಿಗಳು ಪ್ರಯತ್ನಿಸುತ್ತಿದ್ದು, ಕೆಲಸ ಮಾಡಿದ ಕೂಲಿಗಳಿಗೆ ಕೂಡಲೇ ಹಣ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಪಾರಾಂಡಹಳ್ಳಿ ಕೂಲಿ ಮಹಿಳೆಯರು ಸೋಮವಾರ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ನರೇಗಾ ಯೋಜನೆಯಡಿ ನಡೆಯುತ್ತಿರುವ ಕೆಲ ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ ಎಂದು ಗ್ರಾಮಸ್ಥರು ಈಚೆಗೆ ಪಂಚಾಯಿತಿ ಕಚೇರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ನರೇಗಾ ಕಾಮಗಾರಿಯನ್ನು ಪಂಚಾಯಿತಿ ಅಧಿಕಾರಿಗಳು ನಿಲ್ಲಿಸಿದ್ದರು.
‘ಯಾರೋ ದೂರು ಕೊಟ್ಟ ಮಾತ್ರಕ್ಕೆ ನರೇಗಾ ಕೂಲಿ ನಿಲ್ಲಿಸಿದ್ದರಿಂದ ಬಡವರ ಹೊಟ್ಟೆ ಮೇಲೆ ಹೊಡೆದಂತಾಗಿದೆ. ಸರ್ಕಾರ ಬಡವರಿಗೆ ಕೂಲಿ ಕೊಟ್ಟು ಅವರಿಗೆ ಬದುಕಲು ದಾರಿ ತೋರಿದೆ. 250 ಕೂಲಿ ಮಾಡಲು ಕೂಡ ಬಿಡುತ್ತಿಲ್ಲ. ಹಣವಂತರು ತಮ್ಮ ವೈಯಕ್ತಿಕ ಕಾರಣಗಳಿಂದಾಗಿ ದೂರು ನೀಡಿದ್ದಾರೆ. ಇದರಿಂದಾಗಿ ಬಡವರಿಗೆ ಅನ್ಯಾಯವಾಗಿದೆ’ ಎಂದು ಮಹಿಳೆಯರು ದೂರಿದರು.
ದಲಿತ ಮುಖಂಡರಾದ ಎಪಿಎಲ್ ರಂಗನಾಥ್ ಮತ್ತು ಲಕ್ಷ್ಮಯ್ಯ ಮಾತನಾಡಿ, ನರೇಗಾ ಯೋಜನೆಯನ್ನು ಜೆಸಿಬಿ ಮೂಲಕ ಕೆಲಸ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ. ದೂರು ಖಚಿತವಾಗಿದ್ದರೆ ಸಂಬಂಧ ಪಟ್ಟವರ ಮೇಲೆ ಕ್ರಮ ಕೈಗೊಳ್ಳಲಿ. ಆದರೆ, ಕೆಲಸ ಮಾಡಿದ ಬಡವರಿಗೆ ಕೂಲಿ ಕೊಡದೆ ಮೋಸ ಮಾಡುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಮಾತನಾಡಿ, ನರೇಗಾ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂದು ಗ್ರಾಮದ ಕೆಲವರು ದೂರು ನೀಡಿದ್ದಾರೆ. ದೂರನ್ನು ಪರಿಶೀಲಿಸಲಾಗುತ್ತಿದೆ. ಕೂಲಿ ನೀಡಲು ಇನ್ನೂ ಮೂರು ದಿನಗಳ ಸಮಯಾವಕಾಶ ಇದೆ. ಮೂರು ಹಂತದಲ್ಲಿ ಕಾಮಗಾರಿ ಗುಣಮಟ್ಟದ ಪರಿಶೀಲನೆ ನಡೆಯುತ್ತಿದೆ. ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.