ADVERTISEMENT

ದೇವನಹಳ್ಳಿ: ಕೆ.ಎಚ್.ಮುನಿಯಪ್ಪ ಸ್ಪರ್ಧೆಗೆ ಸಹಕರಿಸಲು ಮನವಿ

ರಾಜೀನಾಮೆ ವಾಪಸ್ಸಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2023, 5:59 IST
Last Updated 25 ಮಾರ್ಚ್ 2023, 5:59 IST
ವಿಜಯಪುರದ ಪ್ರವಾಸಿಮಂದಿರದಲ್ಲಿ ಕಾಂಗ್ರೆಸ್ ಮುಖಂಡರು ಸುದ್ದಿಗೋಷ್ಠಿ ನಡೆಸಿದರು
ವಿಜಯಪುರದ ಪ್ರವಾಸಿಮಂದಿರದಲ್ಲಿ ಕಾಂಗ್ರೆಸ್ ಮುಖಂಡರು ಸುದ್ದಿಗೋಷ್ಠಿ ನಡೆಸಿದರು   

ವಿಜಯಪುರ (ದೇವನಹಳ್ಳಿ): ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡುವಂತೆ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರ ಹೆಸರು ಅಂತಿಮಗೊಳಿಸಿರುವ ಸುಳಿವು ದೊರೆಯುತ್ತಿದ್ದಂತೆ ಕ್ಷೇತ್ರದಲ್ಲಿನ ಪಕ್ಷದ ಬ್ಲಾಕ್ ಅಧ್ಯಕ್ಷರು ಹಾಗೂ ಪುರಸಭೆ ಸದಸ್ಯರು ಸೇರಿದಂತೆ ಸಾಮೂಹಿಕವಾಗಿ ರಾಜೀನಾಮೆ ನೀಡುವುದಾಗಿ ಹೇಳಿಕೆ ನೀಡಿರುವುದರಿಂದ ಪಕ್ಷಕ್ಕೆ ಹಿನ್ನಡೆಯಾಗಲಿದೆ. ಎಲ್ಲರ ಶ್ರಮ ವ್ಯರ್ಥವಾಗಲಿದ್ದು, ಇದಕ್ಕೆ ಯಾರೂ ಅವಕಾಶ ಮಾಡಿಕೊಡಬಾರದು ಎಂದು ಕಾಂಗ್ರೆಸ್ ಮುಖಂಡ ಚೊಕ್ಕನಹಳ್ಳಿ ಚಂದ್ರಪ್ಪ ಹೇಳಿದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆ.ಎಚ್.ಮುನಿಯಪ್ಪ ಅವರು 7 ಬಾರಿ ಸಂಸದರಾಗಿದ್ದಾರೆ. 2 ಬಾರಿ ಕೇಂದ್ರ ಸಚಿವರಾಗಿದ್ದಾರೆ. ಎಲ್ಲಾ ಸಮುದಾಯಗಳನ್ನು ಸಮಾನವಾಗಿ ತೆಗೆದುಕೊಂಡು ಹೋಗಿದ್ದಾರೆ. ಅವರು ಕೇಂದ್ರ ಮಂತ್ರಿಯಾಗಿದ್ದಾಗ, ದೇವನಹಳ್ಳಿ ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿಗೆ ಅನುದಾನ ಕೊಟ್ಟಿದ್ದಾರೆ. ಯಾವ ಕಾರಣಕ್ಕಾಗಿ ಅವರಿಗೆ ಟಿಕೆಟ್ ಕೊಡಬಾರದು ಎಂದು ಮುಖಂಡರು ರಾಜೀನಾಮೆಗೆ ಮುಂದಾಗಿದ್ದಾರೋ ಗೊತ್ತಾಗುತ್ತಿಲ್ಲ. ಕ್ಷೇತ್ರವು ಮೀಸಲು ಕ್ಷೇತ್ರವಾದಾಗಿನಿಂದಲೂ ಕಾಂಗ್ರೆಸ್ ಪಕ್ಷದಿಂದ ಎಡಗೈ ಸಮುದಾಯಕ್ಕೆ ಅವಕಾಶ ಸಿಕ್ಕಿಲ್ಲ. ಈ ಬಾರಿ ಆಕಾಂಕ್ಷಿಗಳೆಲ್ಲರೂ ಒಮ್ಮತವಾಗಿ ಕೆ.ಎಚ್.ಮುನಿಯಪ್ಪ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯ ಮಾಡಿದ್ದೇವೆ. ಕ್ಷೇತ್ರದ ಆಕಾಂಕ್ಷಿಗಳು ಕೂಡಾ ಹೈಕಮಾಂಡ್ ತೀರ್ಮಾನಕ್ಕೆ ಬದ್ಧವೆಂದು ಹೇಳಿದ್ದಾರೆ. ಈಗ ಅವರಿಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಂದೇನಹಳ್ಳಿ ಮುನಿಯಪ್ಪ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಾನೂ ಸೇರಿದಂತೆ 14 ಮಂದಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದೇವೆ. ಕೆ.ಎಚ್.ಮುನಿಯಪ್ಪ ಅವರೂ ಕೂಡಾ ಅರ್ಜಿ ಸಲ್ಲಿಸಿದ್ದು, ಅವರು ಕ್ಷೇತ್ರದ ಆಯ್ಕೆಯನ್ನು ಹೈಕಮಾಂಡ್‌ಗೆ ಬಿಟ್ಟಿದ್ದರು. ಪಕ್ಷದ ಉಸ್ತುವಾರಿಗಳು ಹಾಗೂ ಸ್ಥಳೀಯ ನಾಯಕರ ಸಭೆ ಕರೆದಿದ್ದಾಗ ಎಲ್ಲ ಆಕಾಂಕ್ಷಿಗಳು, ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮವೆಂದು ಹೇಳಿದ್ದರು ಎಂದರು.

ADVERTISEMENT

ಆದರೆ, ಹೈಕಮಾಂಡ್ ತೆಗೆದು ಕೊಂಡಿರುವ ತೀರ್ಮಾನಕ್ಕೆ ವಿರುದ್ಧವಾಗಿ ತೀರ್ಮಾನ ತೆಗೆದುಕೊಳ್ಳುವುದು ಉತ್ತಮವಲ್ಲ. ಕೆ.ಎಚ್.ಮುನಿಯಪ್ಪ ಅವರು ಕ್ಷೇತ್ರದಲ್ಲಿ ಗುಂಪುಗಾರಿಕೆ ಮಾಡಲಿಲ್ಲ. ಹೈಕಮಾಂಡ್ ಸೂಚನೆ ಕೊಟ್ಟರೆ ಮಾತ್ರ ಸ್ಪರ್ಧಿಸುವುದಾಗಿ ಹೇಳಿದ್ದರು. ಸ್ಥಳೀಯವಾಗಿಯೂ ಹಲವು ಮಂದಿ ಆಕಾಂಕ್ಷಿಗಳಿದ್ದಾರೆ. ಅವರೆಲ್ಲ ರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಗೆಲ್ಲಿಸುವ ಕೆಲಸ ಮಾಡಲಿ ದ್ದಾರೆ. ಬ್ಲಾಕ್ ಅಧ್ಯಕ್ಷರು ರಾಜೀನಾಮೆ ಹಿಂಪಡೆಯಬೇಕು ಎಂದರು.

ದೇವನಹಳ್ಳಿ ಮಾಜಿ ಪುರಸಭಾ ಅಧ್ಯಕ್ಷ ಎಂ.ನಾರಾಯಣಸ್ವಾಮಿ ಮಾತನಾಡಿ, ‘ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಗಟ್ಟಿಗೊಳ್ಳಲು ನಾವೆಲ್ಲರೂ ದುಡಿದಿದ್ದೇವೆ. ಈಗ ಎಡಗೈ ಸಮುದಾಯದ ನಾಯಕನಿಗೆ ಅವಕಾಶ ಸಿಕ್ಕಿದಾಗ ವಿರೋಧ ವ್ಯಕ್ತಪಡಿಸುವುದು ಬೇಡ. ಎಲ್ಲರೂ ಒಗ್ಗಟ್ಟಿನಿಂದ ಸಾಗೋಣ, ಪಕ್ಷದಿಂದ ಯಾರಿಗೆ ಟಿಕೆಟ್ ಕೊಟ್ಟರೂ ಎಲ್ಲರೂ ಪಕ್ಷಕ್ಕಾಗಿ ಕೆಲಸ ಮಾಡೋಣ’ ಎಂದರು.

ಮುಖಂಡ ಎಂ.ಮುನಿರಾಜು, ಭಟ್ರೇನಹಳ್ಳಿ ನಾರಾಯಣಪ್ಪ, ಸುಬ್ರ ಮಣ್ಯ, ವೆಂಕಟೇಶ್, ನಾರಾಯಣ ಸ್ವಾಮಿ, ನರಸಿಂಹಮೂರ್ತಿ, ಕೃಷ್ಣಪ್ಪ, ಮುನಿಯಪ್ಪ, ಮುನಿನಾರಾಯಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.