ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಭೇಟಿ ಮಾಡಲು ತೆರಳಿದ್ದ ಸಚಿವ ಕೆ.ಎಚ್.ಮುನಿಯಪ್ಪ ನೇತೃತ್ವ ನಿಯೋಗ. ಎಸ್.ಎನ್.ನಾರಾಯಣಸ್ವಾಮಿ, ಸಿ.ಲಕ್ಷ್ಮಿನಾರಾಯಣ, ಊರುಬಾಗಿಲು ಶ್ರೀನಿವಾಸ್, ಪ್ರಸಾದ್ ಬಾಬು, ಶೇಷಾಪುರ ಗೋಪಾಲ್ ಸೇರಿದಂತೆ ಹಲವು ಪಾಲ್ಗೊಂಡಿದ್ದರು
ಕೋಲಾರ: ಕೋಲಾರ ಹಾಲು ಒಕ್ಕೂಟದ (ಕೋಮುಲ್) ಅಧ್ಯಕ್ಷ ಸ್ಥಾನದ ಚುನಾವಣೆಗೆ ಕೇವಲ ಒಂದು ದಿನ ಬಾಕಿ ಇರುವಂತೆಯೇ ಹೊಸ ಬೆಳವಣಿಗೆ ನಡೆದಿದ್ದು, ಶಾಸಕ ಕೆ.ವೈ.ನಂಜೇಗೌಡರಿಗೆ ಅಧ್ಯಕ್ಷ ಪಟ್ಟ ನೀಡುವುದು ಹಾಗೂ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರನ್ನು ಕೆಎಂಎಫ್ ನಿರ್ದೇಶಕರನ್ನಾಗಿ ಮಾಡುವ ಬಗ್ಗೆ ಸಂಧಾನ ಏರ್ಪಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಸಮ್ಮುಖದಲ್ಲಿ ಈ ಸಂಧಾನ ನಡೆದಿರುವುದು ಗೊತ್ತಾಗಿದೆ.
ಕೋಮುಲ್ ಅಧ್ಯಕ್ಷ ಸ್ಥಾನದ ಚುನಾವಣೆ ಶನಿವಾರ (ಜುಲೈ 5) ನಡೆಯಲಿದ್ದು, ವೇದಿಕೆ ಸಜ್ಜುಗೊಳ್ಳುತ್ತಿದೆ. ಈ ಹಂತದಲ್ಲಿ ಕೋಲಾರ ಕಾಂಗ್ರೆಸ್‌ನ ಚಟುವಟಿಕೆಗಳು ಸಂಪೂರ್ಣ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದು, ಗುರುವಾರ ಇಡೀ ದಿನ ಕೆ.ಆರ್.ರಮೇಶ್ ಕುಮಾರ್ ಬಣ (ಘಟಬಂಧನ್) ಹಾಗೂ ಕೆ.ಎಚ್.ಮುನಿಯಪ್ಪ ಬಣ ಜೋರು ಲಾಬಿ ನಡೆಸಿದವು.ಎರಡೂ ಬಣದ ಮುಖಂಡರು ಬೇರೆ ಬೇರೆ ಸಮಯದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಕೋಮುಲ್ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ.
ಕೆ.ಎಚ್.ಮುನಿಯಪ್ಪ ಬಣದ ಮುಖಂಡರು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರಿಗೇ ಅಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕೆಂದು ಪಟ್ಟು ಹಿಡಿದರೆ, ರಮೇಶ್ ಕುಮಾರ್ ಬಣದವರು ಮಾಲೂರು ಶಾಸಕ ಕೆ.ವೈ.ನಂಜೇಗೌಡರಿಗೆ ನೀಡಬೇಕೆಂದು ಒತ್ತಡ ಹೇರಿದ್ದಾರೆ.
ಈ ಸಂದರ್ಭದಲ್ಲಿ ಮಾತಿನ ಚಕಮಕಿ, ರಾಜೀನಾಮೆ ಬೆದರಿಕೆ ಬೆಳವಣಿಗೆಗಳು ನಡೆದಿ ರುವುದು ಕುತೂಹಲ ಮೂಡಿಸಿದೆ. ಅದರಲ್ಲೂ ನಾರಾಯಣಸ್ವಾಮಿ ಆಕ್ರೋಶಗೊಂಡು ಶಾಸಕ ಸ್ಥಾನ ಹಾಗೂ ನಿಗಮ ಮಂಡಳಿಗೆ ರಾಜೀನಾಮೆ ಕೊಡುತ್ತೇನೆ ಎಂದಿದ್ದಾರೆ. ಆಗ ಮುಖ್ಯಮಂತ್ರಿಯೇ ಮಧ್ಯ ಪ್ರವೇಶಿಸಿ ‘ಯಾರೂ ರಾಜೀನಾಮೆ ಮಾತು ಎತ್ತಬೇಡಿ, ಯಾವ ಸಂದರ್ಭದಲ್ಲಿ ಯಾರಿಗೆ ಯಾವ ಸ್ಥಾನಮಾನ ನೀಡ ಬೇಕೆಂಬುದು ನಮಗೆ ಗೊತ್ತಿದೆ’ ಎಂದು ಸಮಾಧಾನಪಡಿಸಿದ್ದಾರೆ ಎಂಬುದು ಗೊತ್ತಾಗಿದೆ.
ಕೆ.ಎಚ್.ಮುನಿಯಪ್ಪ ನೇತೃತ್ವದ ನಿಯೋಗದಲ್ಲಿ ಶಾಸಕರಾದ ನಾರಾಯಣಸ್ವಾಮಿ, ರೂಪಕಲಾ ಶಶಿಧರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ, ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು, ಕೋಮುಲ್ ನೂತನ ನಿರ್ದೇಶಕಿ ಮಹಾಲಕ್ಷ್ಮಿ, ಮುಖಂಡ ಶೇಷಾಪುರ ಗೋಪಾಲ್ ಸೇರಿದಂತೆ ಹಲವರು ಇದ್ದರು. ಮುಖ್ಯಮಂತ್ರಿ ಮನೆಯಲ್ಲಿ ಮಧ್ಯಾಹ್ನ 3 ಗಂಟೆಗೆ ಸಭೆ ನಡೆದಿದೆ.
ಮುನಿಯಪ್ಪ ಅವರಂತೂ ಈ ಬಾರಿ ಅಹಿಂದ ವರ್ಗಕ್ಕೆ ಅಧ್ಯಕ್ಷ ಸ್ಥಾನ ನೀಡಲೇಬೇಕೆಂದು ಖಡಕ್ ಆಗಿ ಮುಖ್ಯಮಂತ್ರಿ ಮುಂದೆ ಬೇಡಿಕೆ ಇಟ್ಟಿದ್ದಾರೆ.‘ಇಷ್ಟು ದಿನ ಕೋಲಾರದ ಕಾಂಗ್ರೆಸ್‌ನ ಕೆಲವರ ಆಟ ನೋಡಿ ಸಾಕಾಗಿದೆ. ಇನ್ನಾದರೂ ನಮ್ಮವರ ಕಡೆ ಗಮನ ಹರಿಸಿ, ಕೋಮುಲ್‌ಗೆ ಅವಕಾಶ ಮಾಡಿಕೊಡಿ’ ಎಂದು ಅವರು ಕಡ್ಡಿಮುರಿದಂತೆ ಹೇಳಿದ್ದಾರೆ.
ಆಗ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮಾತನಾಡಿ, ‘ಕೋಮುಲ್ ಚುನಾವಣೆಗೆ ಚಿಹ್ನೆ ಇಲ್ಲ. ಹೀಗಾಗಿ, ಇಂಥವರ ಪರವೇ ನಿಲ್ಲಬೇಕೆಂದು ನಿರ್ದೇಶಕರಿಗೆ ಹೇಳಲು ಆಗದು. ತಾವೇ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಪಕ್ಷಕ್ಕೆ ಯಾವುದೇ ತೊಂದರೆ ಆಗಬಾರದು’ ಎಂದು ಸಂಧಾನ ಸೂತ್ರ ಮುಂದಿಟ್ಟಿದ್ದಾರೆ. ಅದಕ್ಕೆ ಎರಡೂ ಬಣದವರು ಒಪ್ಪಿಗೆ ನೀಡಿದರು ಎಂಬುದನ್ನು ಮೂಲಗಳು ‘ಪ್ರಜಾವಾಣಿಗೆ ತಿಳಿಸಿವೆ. ಘಟಬಂಧನ್ ಪರ ಏಳು ನಿರ್ದೇಶಕರು ಇರುವುದು ನಂಜೇಗೌಡರ ಅವರಿಗೆ ಅಧ್ಯಕ್ಷ ಸ್ಥಾನಕ್ಕೆ ಅವಕಾಶ ಮಾಡಿಕೊಡಲು ಪ್ರಮುಖ ಕಾರಣ ಎಂಬುದು ಗೊತ್ತಾಗಿದೆ. ಅಲ್ಲದೇ, ಜೆಡಿಎಸ್–ಬಿಜೆಪಿ ಮೈತ್ರಿಕೂಟದ ಕಾರ್ಯತಂತ್ರಕ್ಕೆ ತಿರುಗೇಟು ನೀಡುವುದೂ ಕೈ ವರಿಷ್ಠರ ಯೋಜನೆ ಎಂಬುದು ತಿಳಿದುಬಂದಿದೆ.
ಘಟಬಂಧನ್‌ನಿಂದಲೂ ಭಾರಿ ಲಾಬಿ
ಶಾಸಕ ಕೆ.ವೈ.ನಂಜೇಗೌಡರಿಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ನೀಡಬೇಕು ಇಲ್ಲವೇ ಕೋಮುಲ್ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ನೇತೃತ್ವದ ಘಟಬಂಧನ್ ಪಟ್ಟು ಹಿಡಿಯಿತು.
ರಮೇಶ್ ಕುಮಾರ್ ನೇತೃತ್ವದಲ್ಲಿ ಮುಖಂಡರು ಗುರುವಾರ ಬೆಳಿಗ್ಗೆಯೇ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರನ್ನು ಭೇಟಿಯಾದರು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ತಮ್ಮ ಬೇಡಿಕೆ ಮಂಡಿಸಿದರು.
ಈ ವೇಳೆ ನಂಜೇಗೌಡ ಅಲ್ಲದೇ; ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಕೋಮುಲ್‌ಗೆ ಹೊಸದಾಗಿ ಆಯ್ಕೆಯಾಗಿರುವ ಘಟಬಂಧನ್ ಬೆಂಬಲಿತ ನಿರ್ದೇಶಕರೂ ಇದ್ದರು.
ಬೈರತಿ –ಎಸ್ಎನ್ಎನ್ ಚಕಮಕಿ
ಮುಖ್ಯಮಂತ್ರಿ ಸಮ್ಮುಖದಲ್ಲೇ ಸಚಿವ ಬೈರತಿ ಸುರೇಶ್ ಹಾಗೂ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತಿನ ಚಕಮಕಿ ನಡೆಸಿದ್ದಾರೆ. ನಮ್ಮ ವಿಚಾರದಲ್ಲಿ ಏಕೆ ತಾರತಮ್ಯ ಅನುಸರಿಸುತ್ತಿದ್ದೀರಿ ಎಂದು ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ. ಅಲ್ಲದೇ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಗೆ ಬೈರತಿ ಎದುರೇ ದೂರಿದರು. ಆಗ ಬೈರತಿ ಸುರೇಶ್ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. ಆಗ ಮುಖ್ಯಮಂತ್ರಿಯೇ ಖುದ್ದಾಗಿ ಇಬ್ಬರಿಗೂ ಸಿಹಿ ತಿನ್ನಿಸಿ ರಾಜೀ ಮಾಡಿದರು ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಕೋಚಿಮುಲ್ ಭ್ರಷ್ಟಾಚಾರ: ದೂರು
ಹಿಂದಿನ ಕೋಚಿಮುಲ್‌ನಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಮುಖ್ಯಮಂತ್ರಿಗೆ ಮತ್ತೆ ದೂರು ನೀಡಿದ ಎಸ್.ಎನ್.ನಾರಾಯಣಸ್ವಾಮಿ, ದಾಖಲೆಗಳನ್ನು ಎದುರಿಟ್ಟರು. ಅದಕ್ಕೆ ಕೆ.ಎಚ್.ಮುನಿಯಪ್ಪ ಕೂಡ ಧ್ವನಿಗೂಡಿದರು ಎಂದು ಮೂಲಗಳು ತಿಳಿಸಿವೆ. ತನಿಖೆಗೂ ಒತ್ತಾಯಿಸಿದ್ದು, ಈ ಬಗ್ಗೆ ಭರವಸೆ ಸಿಕ್ಕಿದೆ ಎನ್ನಲಾಗಿದೆ. ಜುಲೈ 27ಕ್ಕೆ ಲೋಕಾಯುಕ್ತದಿಂದ ತನಿಖೆ ಶುರುವಾಗುವ ಸಾಧ್ಯತೆ ಇದು ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.