ADVERTISEMENT

ಕಾರ್ಖಾನೆ ಮುಚ್ಚದಂತೆ ಕಾರ್ಮಿಕರ ಪ್ರತಿಭಟನೆ

ಸಿಐಟಿಯು ಮುಖಂಡರ ನೇತೃತ್ವದಲ್ಲಿ ಬೈಕ್‌ ರ‍್ಯಾಲಿ, ಮಾಲೀಕರ ಧೋರಣೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 2:27 IST
Last Updated 24 ಜುಲೈ 2025, 2:27 IST
ಕೋಲಾರದ ಜಿಲ್ಲಾಡಳಿತ ಭವನದ ಮುಂದೆ ಕಾರ್ಮಿಕರು ಹಾಗೂ ಸಿಐಟಿಯು ಮುಖಂಡರು ಬುಧವಾರ ಪ್ರತಿಭಟನೆ ನಡೆಸಿದರು
ಕೋಲಾರದ ಜಿಲ್ಲಾಡಳಿತ ಭವನದ ಮುಂದೆ ಕಾರ್ಮಿಕರು ಹಾಗೂ ಸಿಐಟಿಯು ಮುಖಂಡರು ಬುಧವಾರ ಪ್ರತಿಭಟನೆ ನಡೆಸಿದರು   

ಕೋಲಾರ: ‘ಜಿಲ್ಲೆಯ ಮಾಲೂರು ಕೈಗಾರಿಕಾ ಪ್ರದೇಶದ ವರ್ಗಾ ಅಟ್ಯಾಚ್ಮೆಂಟ್ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು’ ಎಂದು ಒತ್ತಾಯಿಸಿ ಕಾರ್ಖಾನೆಯ ಕಾರ್ಮಿಕರು ಹಾಗೂ ಸಿಐಟಿಯು ಮುಖಂಡರು ಬುಧವಾರ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿದರು.

ಮಾಲೂರು ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಯಿಂದ ಬೈಕ್ ರ‍್ಯಾಲಿ ಮೂಲಕ ಜಿಲ್ಲಾಡಳಿತ ಭವನಕ್ಕೆ ಬಂದ ಕಾರ್ಮಿಕರು, ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ ಮಾಲೀಕರ ಧೋರಣೆ ಖಂಡಿಸಿದರು.

ಸಿಐಟಿಯು ರಾಜ್ಯ ಉಪಾಧ್ಯಕ್ಷ ಎಚ್.ಎನ್ ಗೋಪಾಲಗೌಡ ಮಾತನಾಡಿ, ‘19 ವರ್ಷಗಳಿಂದ ಕಾರ್ಮಿಕರು ವರ್ಗಾ ಕಾರ್ಖಾನೆಯಲ್ಲಿ ದುಡಿಯುತ್ತಿದ್ದಾರೆ. ಕೈಗಾರಿಕೆ ಮುಚ್ಚುವುದಾಗಿ ಮಾಲೀಕರು ಕಾರ್ಮಿಕರಿಗೆ ಏಕಾಏಕಿ ನೋಟಿಸ್ ನೀಡಿದ್ದಾರೆ. 81 ಕಾಯಂ ಕಾರ್ಮಿಕರನ್ನು ಕೆಲಸದಿಂದ ಹೊರಹಾಕಲು ಮುಂದಾಗಿದ್ದು, ಇದು ಕಾರ್ಮಿಕ ವಿರೋಧಿ ನೀತಿಯಾಗಿದೆ. ಕೂಡಲೇ ಕಾರ್ಖಾನೆ ಮುಚ್ಚುವ ಆದೇಶ ವಾಪಸು ಪಡೆದು ಕಾರ್ಮಿಕರ ಹಿತ ಕಾಯಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಈ ಕೈಗಾರಿಕೆಯಲ್ಲಿ ಬುಲ್ಡೋಜರ್‌ಗೆ ಬೇಕಾಗುವ ವಿಧ ವಿಧವಾದ ಸಾಮಗ್ರಿಗಳನ್ನು ತಯಾರಿಸಿ ವಿದೇಶಕ್ಕೆ ಕಳುಹಿಸಲಾಗುತ್ತದೆ. ಇದರಿಂದಾಗಿ ಲಾಭದಾಯಕವಾಗಿ ಕಂಪನಿ ನಡೆಯುತ್ತಿದ್ದು, ಕಾರ್ಮಿಕರಿಗೆ ಯಾವುದೇ ರೀತಿಯಲ್ಲಿ ಸೌಲಭ್ಯ ನೀಡಿಲ್ಲ. ಬೇಡಿಕೆಗಳಿಗೆ ಸಂಬಂಧಿಸಿದಂತೆ ಹಲವಾರು ಬಾರಿ ಮನವಿ ಮಾಡಿದ್ದರೂ ಮಾಲೀಕರು ಮಾತ್ರ ಕಾರ್ಮಿಕರ ಹಿತಕಾಪಾಡಲಿಲ್ಲ. ಎಷ್ಟೋ ಬಾರಿ ಸಭೆಗಳು ಆಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ದೂರಿದರು.

‘ಹೆಸರು ಬದಲಾವಣೆ ಮಾಡಲು ಹೊರಟಿದ್ದರು. ಇದರಿಂದಾಗಿ ಕಂಪನಿಯ ಹೆಸರಿನ ಗೊಂದಲದಿಂದಾಗಿ ಕಾರ್ಮಿಕರಿಗೆ ತೊಂದರೆಯಾಗಿದೆ. ಕೂಡಲೇ ಜಿಲ್ಲಾಧಿಕಾರಿಯು ಮಾಲೀಕರನ್ನು ಕರೆಸಿ ಕಾರ್ಖಾನೆಯಲ್ಲಿ ದುಡಿಯುತ್ತಿರುವ ಕಾಯಂ ಕಾರ್ಮಿಕರು ಕೆಲಸ ಮುಂದುವರಿಸಲು ಕ್ರಮ ವಹಿಸಬೇಕು’ ಮನವಿ ಮಾಡಿದರು.

ವರ್ಗಾ ಅಟ್ಯಾಚ್ಮೆಂಟ್ ಕಾರ್ಮಿಕರ ಸಂಘದ ಪದಾಧಿಕಾರಿಗಳಾದ ಪ್ರಭಾಕರನ್, ಶ್ರೀಧರ ರಾವ್, ಆಂಜಿನಪ್ಪ, ಅಶ್ವಥ್, ಸುರೇಶ್ ಕುಮಾರ್, ಹರೀಶ್, ಸಿಐಟಿಯುನ ಗಾಂಧಿನಗರ ನಾರಾಯಣಸ್ವಾಮಿ, ಪಿ.ಆರ್ ಸೂರ್ಯನಾರಾಯಣ, ಎಂ.ವಿಜಯಕೃಷ್ಣ, ಎಚ್.ಬಿ ಕೃಷ್ಣಪ್ಪ, ಅಶೋಕ್, ಭೀಮರಾಜ್, ಚಲಪತಿ, ವೀರಭದ್ರ, ಶಿವಾನಂದ್, ವೆಂಕಟಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.