ADVERTISEMENT

ಕುರ್ಕಿ ಗ್ರಾಮ; ಸಂಭ್ರಮದ ಬಂಡಿ ದ್ಯಾವರ

ಗ್ರಾಮದ ಸಂಸ್ಕೃತಿ ಅನಾವರಣ; ಕಾಲ ಬದಲಾದರೂ ಬಾಂಧವ್ಯ ಬದಲಾಗದು: ಕೃಷ್ಣಬೈರೇಗೌಡ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 13:28 IST
Last Updated 30 ಏಪ್ರಿಲ್ 2025, 13:28 IST
ಕೋಲಾರ ತಾಲ್ಲೂಕಿನ ಕುರ್ಕಿ ಗ್ರಾಮದಲ್ಲಿ ಬುಧವಾರ ಆರಂಭವಾದ ಬಂಡಿದ್ಯಾವರ ಕಾರ್ಯಕ್ರಮಕ್ಕೆ ಕಂದಾಯ ಸಚಿವ ಕೃಷ್ಣಬೈರೇಗೌಡ ಚಾಲನೆ ನೀಡಿದರು. ಶಾಸಕ ಕೆ.ವೈ.ನಂಜೇಗೌಡ, ವಿಧಾನ ಪರಿಷತ್ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌, ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ ಪಾಲ್ಗೊಂಡಿದ್ದರು
ಕೋಲಾರ ತಾಲ್ಲೂಕಿನ ಕುರ್ಕಿ ಗ್ರಾಮದಲ್ಲಿ ಬುಧವಾರ ಆರಂಭವಾದ ಬಂಡಿದ್ಯಾವರ ಕಾರ್ಯಕ್ರಮಕ್ಕೆ ಕಂದಾಯ ಸಚಿವ ಕೃಷ್ಣಬೈರೇಗೌಡ ಚಾಲನೆ ನೀಡಿದರು. ಶಾಸಕ ಕೆ.ವೈ.ನಂಜೇಗೌಡ, ವಿಧಾನ ಪರಿಷತ್ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌, ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ ಪಾಲ್ಗೊಂಡಿದ್ದರು    
  • 43 ವರ್ಷಗಳ ನಂತರ ನಡೆಯುತ್ತಿರುವ ಊರಹಬ್ಬ

  • ಕುರ್ಕಿ ಗ್ರಾಮದಲ್ಲಿ ಮಹಿಳೆಯರಿಂದ ಸಂಭ್ರಮದ ಪೂಜೆ

  • ಶಾಸಕ ನಂಜೇಗೌಡ ನೇತೃತ್ವದಲ್ಲಿ ಬಂಡಿ ದ್ಯಾವರ

    ADVERTISEMENT

ಕೋಲಾರ: ‘ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಿ ಒಕ್ಕಲಿಗ ಸಮಾಜದಲ್ಲಿ ದೊಡ್ಡದ್ಯಾವರ ಆಚರಿಸುವುದು ಬಹಳ ಹಳೇ ಪದ್ಧತಿ. ಊರಹಬ್ಬ, ಬಂಡಿದ್ಯಾವರ ಆಚರಣೆಯು ಸಂಸ್ಕೃತಿಯ ಭಾಗ. ಧಾರ್ಮಿಕ ಎನ್ನುವುದಕ್ಕಿಂತ ಒಕ್ಕಲುತನ ಮಾಡುವ ಶೂದ್ರ ಸಮಾಜದ ಪರಂಪರೆ. ಈ ರೀತಿ ಸಂಪ್ರದಾಯ, ಸಂಸ್ಕೃತಿ, ಪರಂಪರೆಯನ್ನು ಉಳಿಸಿಕೊಂಡು ಹೋಗಬೇಕು’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ತಾಲ್ಲೂಕಿನ ನರಸಾಪುರ ಹೋಬಳಿಯ ಕುರ್ಕಿ ಗ್ರಾಮದಲ್ಲಿ ಬುಧವಾರ ಆರಂಭವಾದ ಬಂಡಿ ದ್ಯಾವರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರತಿ ಪೀಳಿಗೆಯಲ್ಲಿ ಒಂದು ಬಾರಿ ಮಕ್ಕಳಿಗೆ ಕಿವಿ ಚುಚ್ಚುವುದು, ಹೂವು ಮುಡಿಸುವುದು, ಸೊಸೆಯಂದಿರಿಗೆ ದೀಪ ಕೊಡುವುದು ಈ ಭಾಗದ ಸಂಸ್ಕೃತಿ. ಕಾಲ ಬದಲಾದರೂ ಬಾಂಧವ್ಯ ಬದಲಾಗದು’ ಎಂದರು. 

‘ಕೆಲ ಊರುಗಳಲ್ಲಿ ಪೀಳಿಗೆಗೆ ಒಮ್ಮೆ ಮಾತ್ರ ಇಂಥ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಕುರ್ಕಿ ಗ್ರಾಮದಲ್ಲಿ ಶಾಸಕ ನಂಜೇಗೌಡರ ನೇತೃತ್ವದಲ್ಲಿ ಬಂಡಿ ದ್ಯಾವರ ನಡೆಯುತ್ತಿದೆ. 43 ವರ್ಷಗಳ ನಂತರ ಊರಹಬ್ಬ ಆಚರಿಸಲಾಗುತ್ತಿದೆ. ಕುಟುಂಬದ ಎಲ್ಲರೂ, ನೆಂಟರು, ಸ್ನೇಹಿತರು, ಊರಿನವರು ಜೊತೆಗೂಡಿ ಆಚರಿಸಲು ಇದೊಂದು ಸಂದರ್ಭ. ಬಸವ ಜಯಂತಿ ದಿನ ಆರಂಭವಾಗಿದ್ದು, ಆರು ದಿನ ನಡೆಯಲಿದೆ’ ಎಂದು ಹೇಳಿದರು.

‘ನಮ್ಮೂರು ಚೌಡದೇನಹಳ್ಳಿಯಲ್ಲಿ ಕೂಡ ಊರಹಬ್ಬ ಹಾಗೂ ದೊಡ್ಡದ್ಯಾವರವನ್ನು ಈಚೆಗೆ ಸಂಭ್ರಮದಿಂದ ಆಚರಿಸಿದೆವು. ದ್ಯಾವರ ಆಚರಿಸಿ 29 ವರ್ಷ ಆಗಿತ್ತು. ನಮ್ಮ ತಂದೆ ಸಿ.ಬೈರೇಗೌಡರು ಇದ್ದಾಗ 1996ರಲ್ಲಿ ಆಚರಿಸಿದ್ದೆವು. ನಾನು ಕೂಡ ಊರಿನಲ್ಲೇ ಆರು ದಿನ ಇದ್ದು ಜನರ ಜೊತೆ ಬೆರೆತೆ. ಬಹಳ ಸಂತೋಷ ಉಂಟಾಯಿತು’ ಎಂದರು.

ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ‘ಕುರ್ಕಿ ಗ್ರಾಮದಲ್ಲಿ ಬಂಡಿ ದ್ಯಾವರ ನಡೆದು 43 ವರ್ಷಗಳಾಗಿತ್ತು. ಕುರ್ಕಿ ವೀರಣ್ಣಸ್ವಾಮಿ ನಮ್ಮ ದೇವರು. ಈಗ ಏ.30ರಿಂದ ಮೇ 5ವರೆಗೆ ನಮ್ಮ ಸಮುದಾಯದವರೆಲ್ಲಾ ಸೇರಿ ಹಬ್ಬ ಆಚರಿಸುತ್ತಿದ್ದೇವೆ. ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಸಹಕಾರ ನೀಡಿದ್ದಾರೆ’ ಎಂದು ಹೇಳಿದರು.

‘ಶಾಸಕನಾಗಿರುವುದು ನನಗೆ ತೃಪ್ತಿ ತಂದಿದೆ. ಸಚಿವ ಸ್ಥಾನಕ್ಕೆ ನಾನು ಆಸೆಪಟ್ಟವನಲ್ಲ. ತಿರುಕನ ಕನಸು ಕಂಡವನಲ್ಲ. ಆ ಸಂದರ್ಭ ಬಂದಾಗ ನೋಡೋಣ. ಈಗ ನಮ್ಮದೇ ಸರ್ಕಾರವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌, ಕಂದಾಯ ಸಚಿವ ಕೃಷ್ಣಬೈರೇಗೌಡ ಸಹಕಾರ ನೀಡುತ್ತಿದ್ದಾರೆ’ ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌, ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌, ಮುಖಂಡರಾದ ಮುನಿರಾಜು, ಸೋಮಣ್ಣ, ಮೈಲಾಂಡ ಮುರಳಿ, ನಂಜೇಗೌಡ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಕುರ್ಕಿ ಗ್ರಾಮದ ಹೊರಗೆ ಇರುವ ದೇಗುಲಗಳಲ್ಲಿ ನೂರಾರ ಜನರು ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಬಳಿಕ ದೇವರ ಮೂರ್ತಿಯ ಮೆರವಣಿಗೆ ನಡೆಯಿತು. ಊರಿನಲ್ಲಿ ಸಂಭ್ರಮ ನೆಲೆಸಿತ್ತು, ಯುವಕರು ಬಂಡಿಗಳನ್ನು ಸಿಂಗರಿಸುವುದರಲ್ಲಿ ನಿರತರಾಗಿದ್ದರು. ಅನ್ನ ಸಂತರ್ಪಣೆಯೂ ನಡೆಯಿತು. ಮುಂದಿನ ಐದೂ ದಿನ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಊರಹಬ್ಬದ ಪೂಜಾ ಕಾರ್ಯಕ್ರಮದಲ್ಲಿ ಗ್ರಾಮದ ಮಹಿಳೆಯರು ಪಾಲ್ಗೊಂಡಿದ್ದರು
ಕಾಲ ಬದಲಾಗಿದೆ ಎಂದು ಸಂಪ್ರದಾಯ ಮರೆಯಬಾರದು. ಈ ರೀತಿಯ ಜಾತ್ರೆ ಹಬ್ಬಗಳನ್ನು ಉಳಿಸಿಕೊಳ್ಳಬೇಕು. ಜೀವನದ ಜಂಜಾಟದಿಂದ ಹೊರಬರಲು ಇಂಥ ಹಬ್ಬಗಳು ಅಗತ್ಯ
ಕೃಷ್ಣಬೈರೇಗೌಡ ಕಂದಾಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.