ಕೋಲಾರ: ಕನ್ನಡ ಭಾಷೆ ಕುರಿತು ಚಿತ್ರ ನಟ ಕಮಲ್ ಹಾಸನ್ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ನಗರದ ಬಸ್ ನಿಲ್ದಾಣದ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ನಟನ ಭಾವಚಿತ್ರವನ್ನು ತುಳಿದು ಆಕ್ರೋಶ ವ್ಯಕ್ತಪಡಿಸಿ, ಬೆಂಕಿ ಹಚ್ಚಲು ಮುಂದಾಗುತ್ತಿದ್ದಂತೆಯೇ ಪೊಲೀಸರು ತಡೆದರು.
ಕರವೇ ಜಿಲ್ಲಾಧ್ಯಕ್ಷ ಮೇಡಿಹಾಳ ಎಂ.ಕೆ.ರಾಘವೇಂದ್ರ ಮಾತನಾಡಿ, ‘ನಟ ಕಮಲ್ ಹಾಸನ್ ತಮಿಳು ಭಾಷೆಯಿಂದ ಕನ್ನಡ ಭಾಷೆಯ ಉಗಮವಾಯಿತು ಎಂದು ತಪ್ಪು ಹೇಳಿಕೆ ನೀಡುವ ಮೂಲಕ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತೆ ಮಾಡಿರುವುದು ದುರುದ್ದೇಶಪೂರಿತ’ ಎಂದು ದೂರಿದರು.
‘ವೇದಿಕೆಗಳಲ್ಲಿ ಮಾತನಾಡುವಾಗ ಜವಾಬ್ದಾರಿಯುತವಾಗಿ ಹೇಳಿಕೆ ನೀಡಬೇಕು. ಭಾಷೆಯನ್ನು ಗುರಿಯಾಗಿಸಿಕೊಂಡು ಮಾತನಾಡಿದರೆ ಸುಮ್ಮನಿರಲು ಅಸಾಧ್ಯ’ ಎಂದು ಎಚ್ಚರಿಸಿದರು.
‘ಕಮಲ್ ಹಾಸನ್ ನಟಿಸಿರುವ ಹೊಸ ಚಿತ್ರ ಥಗ್‌ಲೈಫ್ ಬಿಡುಗಡೆಗೆ ಸಿದ್ಧವಾಗಿದ್ದು, ರಾಜ್ಯದಲ್ಲಿ ಬಿಡುಗಡೆಯಾಗದಂತೆ ತಡೆಯುವ ನಿರ್ಧಾರವನ್ನು ಕರವೇ ಕೈಗೊಂಡಿದೆ. ಈ ಚಿತ್ರದ ವಿತರಕರು ತಮ್ಮ ಹೂಡಿಕೆಯನ್ನು ರಕ್ಷಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಕರ್ನಾಟಕದಲ್ಲಿ ಈ ಚಿತ್ರದ ಬಿಡುಗಡೆಗೆ ಯಾವುದೇ ರೀತಿ ಸಹಕಾರ ನೀಡಬಾರದು’ ಎಂದು ಕೋರಿದರು.
ಪ್ರತಿಭಟನೆಯಲ್ಲಿ ವೇದಿಕೆಯ ಪದಾಧಿಕಾರಿಗಾಳದ ವಿ.ಮುನಿರಾಜು, ತಾಲ್ಲೂಕು ಅಧ್ಯಕ್ಷರಾದ ಮಾಲೂರು ಎಂ.ಶ್ರೀನಿವಾಸ, ಕೋಲಾರ ಶಶಿಕುಮಾರ್, ಬಂಗಾರಪೇಟೆ ರಾಮಪ್ರಸಾದ್, ಮಹಬೂಬ್, ಮಂಜುನಾಥ, ಶೆಂಕರ್ ರೆಡ್ಡಿ, ಡಿ.ವಿ.ಮಂಜುನಾಥ, ಹುಸೇನ್, ಕೋದಂಡರಾಮಯ್ಯ, ಗಣೇಶ್, ಲೋಕೇಶ್, ಕೆ.ನವೀನ್, ಸಂತೋಷ್, ರಾಮಕೃಷ್ಣಪ್ಪ, ನವೀನ್, ರಂಜಿತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.