ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ಆಡಳಿತ ಮಂಡಳಿ ಚುನಾವಣೆಯ ಹಿಂದಿನ ದಿನವಾದ ಮಂಗಳವಾರ ಡಿಸಿಸಿ ಬ್ಯಾಂಕ್‌ನ ಮುಖ್ಯ ಕಚೇರಿ, ಚಿಂತಾಮಣಿ ಶಾಖೆ ಹಾಗೂ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ನಿವಾಸ ಸೇರಿದಂತೆ ಒಂಬತ್ತು ಕಡೆ ಲೋಕಾಯುಕ್ತ ಪೊಲೀಸರು ಶೋಧ ನಡೆಸಿದ್ದಾರೆ. ಹಲವಾರು ಕಡತ, ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಬುಧವಾರ (ಮೇ 28) ಕೋಲಾರ ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ 12 ನಿರ್ದೇಶಕರ ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಗೋವಿಂದಗೌಡ ಕೂಡ ಇತರೆ ಸಹಕಾರ ಸಂಘಗಳ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ಅವರು ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಶಾಖೆಯಲ್ಲಿ ರಾಜ್ಯ ಸರ್ಕಾರದ ಸಾಲಮನ್ನಾದ ಸುಮಾರು ₹ 11 ಕೋಟಿ ದುರ್ಬಳಕೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಈ ಕ್ರಮ ವಹಿಸಿದ್ದಾರೆ.
ಗೋವಿಂದಗೌಡ ವಿರುದ್ಧದ ಈ ಪ್ರಕರಣದ ತನಿಖೆ ನಡೆಸಲು ಮೂರು ದಿನಗಳ ಹಿಂದೆಯಷ್ಟೇ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಹಾಗೂ ಡಿಸಿಸಿ ಬ್ಯಾಂಕ್‌ನ ಆಡಳಿತಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್, ಲೋಕಾಯುಕ್ತ ಪೊಲೀಸರಿಗೆ ಅನುಮತಿ ನೀಡಿದ್ದಾರೆ. ಬ್ಯಾಂಕ್‌ನ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯವಾಗಿ ಈ ನಿರ್ಧಾರಗಳು ಕುತೂಹಲ ಮೂಡಿಸಿವೆ.
ಲೋಕಾಯುಕ್ತ ಪೊಲೀಸ್‌ನ 15ಕ್ಕೂ ಅಧಿಕ ಸಿಬ್ಬಂದಿ ದಿನವಿಡೀ ದಾಖಲೆ ಪತ್ರಗಳು, ಕಡತಗಳನ್ನು ಶೋಧಿಸಿದರು. ತಡರಾತ್ರಿವರೆಗೆ ಶೋಧ ಕಾರ್ಯಾಚರಣೆ ಮುಂದುವರಿದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.