ಕೋಲಾರ: ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಮುಲ್) ಆಡಳಿತ ಮಂಡಳಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಭರ್ಜರಿ ಮೇಲುಗೈ ಸಾಧಿಸುತ್ತಿದ್ದಂತೆ ಅಧ್ಯಕ್ಷ ಸ್ಥಾನದ ಚರ್ಚೆಗಳು ಗರಿಗೆದರಿವೆ.
ಕಳೆದ ಐದು ವರ್ಷ ಒಕ್ಕೂಟದ ಅಧ್ಯಕರಾಗಿದ್ದ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಮೂರನೇ ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿದ್ದು, ಮತ್ತೆ ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟಿದ್ದಾರೆ. ಅವರ ವಿರುದ್ಧ ಪದೇಪದೇ ಮಾತಿನ ವಾಗ್ದಾಳಿ ನಡೆಸುತ್ತಿರುವ ಸ್ವಪಕ್ಷೀಯ ಶಾಸಕ ಬಂಗಾರಪೇಟೆಯ ಎಸ್.ಎನ್.ನಾರಾಯಣಸ್ವಾಮಿ ಕೂಡ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಯಾಗುವ ಸಾಧ್ಯತೆಗಳಿವೆ.
ಕಾಂಗ್ರೆಸ್‌ನ ಎರಡು ಬಣಗಳಲ್ಲಿ ಗುರುತಿಸಿಕೊಂಡಿರುವ ಇವರಿಬ್ಬರು ಅಗತ್ಯವಿರುವ ನಿರ್ದೇಶಕರ ಬೆಂಬಲ ಗಿಟ್ಟಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಕಸ್ಮಾತ್ ಒಬ್ಬರ ಸ್ಪರ್ಧೆಗೆ ಕಾಂಗ್ರೆಸ್‌ನ ಯಾವುದೇ ಬಣದಿಂದ ವಿರೋಧ ವ್ಯಕ್ತವಾದರೆ ಜೆಡಿಎಸ್–ಬಿಜೆಪಿ ಮೈತ್ರಿಕೂಟ ಬೆಂಬಲಿತ ಸದಸ್ಯರನ್ನು ತಮ್ಮ ಕಡೆಗೆ ಸೆಳೆದು ನೆರವು ಗಿಟ್ಟಿಸಿಕೊಂಡರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.
ಈ ನಡುವೆ ಸಚಿವ ಕೆ.ಎಚ್.ಮುನಿಯಪ್ಪ ತಾವು ಸೂಚಿಸುವ ಅಭ್ಯರ್ಥಿಗೆ ಅವಕಾಶ ಮಾಡಿಕೊಡಬೇಕೆಂದು ಕೋರಿದ್ದಾರೆ ಎಂಬ ಮಾತುಗಳು ಆ ಬಣದಿಂದ ಕೇಳಿ ಬರುತ್ತಿದೆ.
ತಮ್ಮ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿರುವ ನಂಜೇಗೌಡ, ‘ಅಧ್ಯಕ್ಷ ಸ್ಥಾನ ಅಭ್ಯರ್ಥಿ ಆಯ್ಕೆ ವಿಚಾರ ಕಾಂಗ್ರೆಸ್ ವರಿಷ್ಠರಿಗೆ ಬಿಟ್ಟಿದ್ದು. ರಾಜ್ಯ ಹಾಗೂ ಕೋಲಾರ ನಾಯಕರ ಸೂಚನೆಯಂತೆ ನಡೆಯುತ್ತೇವೆ. ಕಾಂಗ್ರೆಸ್ ಬೆಂಬಲಿತ 9 ನಿರ್ದೇಶಕರು ಗೆದ್ದಿದ್ದು, ನಾವು ಮೇಲುಗೈ ಹೊಂದಿದ್ದೇವೆ’ ಎಂದಿದ್ದಾರೆ.
ಈ ಬಗ್ಗೆ ಮಾತನಾಡಿರುವ ನಾರಾಯಣಸ್ವಾಮಿ, ‘ಪಕ್ಷದ ವರಿಷ್ಠರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ನನ್ನ ಅಹವಾಲು ಹೇಳುತ್ತೇನೆ. ಅವರು ಏನು ತೀರ್ಮಾನ ಮಾಡುತ್ತಾರೆಯೋ ಅದಕ್ಕೆ ಬದ್ಧ’ ಎಂದು ನುಡಿದಿದ್ದಾರೆ.
ಕಾಂಗ್ರೆಸ್ ಬೆಂಬಲದಲ್ಲಿ ನಂಜೇಗೌಡ ಸೇರಿದಂತೆ ಘಟಬಂಧನ್ ಏಳು ನಿರ್ದೇಶಕರು ಗೆದ್ದಿದ್ದಾರೆ. ಕೆ.ಎಚ್.ಮುನಿಯಪ್ಪ ಬಣದ ಮಹಾಲಕ್ಷ್ಮಿ, ಇನ್ನು ಸ್ವತಃ ಎಸ್.ಎನ್.ನಾರಾಯಣಸ್ವಾಮಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಕೋಮುಲ್ ಅಧ್ಯಕ್ಷ ಸ್ಥಾನಕ್ಕೆ ಸದ್ಯದಲ್ಲೇ ಚುನಾವಣಾ ಪ್ರಕ್ರಿಯೆ ನಡೆಯಲಿದೆ. ಜೆಡಿಎಸ್–ಬಿಜೆಪಿ ಮೈತ್ರಿಕೂಟದ ನಾಲ್ವರು ಗೆದ್ದಿದ್ದು, ಅವರ ಪಾತ್ರ ಏನಿರಬಹುದು ಎಂಬ ಚರ್ಚೆಯೂ ನಡೆಯುತ್ತಿದೆ. ಕಾಂಗ್ರೆಸ್ ಗುಂಪುಗಾರಿಯನ್ನೇ ಮುಂದಿಟ್ಟುಕೊಂಡಿರುವ ಮೈತ್ರಿ ನಾಯಕರು ಒಳಗೊಳಗೆ ತಂತ್ರಗಾರಿಕೆ ರೂಪಿಸುತ್ತಿದ್ದಾರೆ.
ಚುನಾವಣೆ ವೇಳೆಗೆ ಏನೆಲ್ಲಾ ಬೆಳವಣಿಗೆ ನಡೆಯಬಹುದು, ಯಾರು ಯಾರನ್ನು ಸೆಳೆಯಲು ಪ್ರಯತ್ನಿಸಬಹುದು ಎಂಬ ಕುತೂಹಲ ಮೂಡಿಸಿದೆ.
ಕೋಮುಲ್‌ನಲ್ಲಿ ಚುನಾಯಿತ 13 ನಿರ್ದೇಶಕರು ಹಾಗೂ ಸರ್ಕಾರದ 5 ಪ್ರತಿನಿಧಿಗಳು ಸೇರಿ 18 ಸ್ಥಾನ ಇವೆ. ಹೀಗಾಗಿ, ಅಧ್ಯಕ್ಷ ಸ್ಥಾನ ಗೆಲ್ಲಲು 10 ನಿರ್ದೇಶಕರ ಬೆಂಬಲ ಬೇಕಾಗುತ್ತದೆ. ಹಾಗೆ ನೋಡಿದರೆ 9 ನಿರ್ದೇಶಕ ಸ್ಥಾನಗಳನ್ನು ಈಗಾಗಲೇ ಗೆದ್ದಿರುವ ಕಾಂಗ್ರೆಸ್ ಬೆಂಬಲಿತರೇ ಆಡಳಿತ ಚುಕ್ಕಾಣಿ ಹಿಡಿಯುವ ಸಾಧ್ಯತೆ ಹೆಚ್ಚಿದ್ದು, ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ ಎಂಬುದು ಸದ್ಯದ ಕುತೂಹಲ.
- ಹೈಕಮಾಂಡ್ ಸೂಚನೆಯಂತೆ ನಡೆ
ಕೋಮುಲ್ ಅಧ್ಯಕ್ಷ ಸ್ಥಾನಕ್ಕೆ ನಾನು ಸೇರಿದಂತೆ ಯಾರೂ ಆಕಾಂಕ್ಷಿಗಳು ಅಲ್ಲ. ಅವಕಾಶ ಮಾಡಿಕೊಟ್ಟರೆ ಎಲ್ಲರೂ ಸ್ಪರ್ಧಿಸಲು ಸಿದ್ಧರಿದ್ದೇವೆ. ಹೈಕಮಾಂಡ್ ಯಾರನ್ನೇ ಸೂಚಿಸಿದರೂ ಅವರಿಗೆ ಬೆಂಬಲ ನೀಡುತ್ತೇವೆ. ಎಸ್.ಎನ್.ನಾರಾಯಣಸ್ವಾಮಿ ಈಗ ನಿರ್ದೇಶಕರಾಗಿದ್ದಾರೆ ಅವರನ್ನು ಸ್ವಾಗತಿಸುತ್ತೇನೆ ಕೆ.ವೈ.ನಂಜೇಗೌಡ ಶಾಸಕ ಕೋಮುಲ್ ನಿರ್ದೇಶಕ
ಸಿ.ಎಂ ಭೇಟಿಯಾದ ನಾರಾಯಣಸ್ವಾಮಿ
ನಿರ್ದೇಶಕರಾಗಿ ಕೋಮುಲ್‌ಗೆ ಪದಾರ್ಪಣೆ ಮಾಡುತ್ತಿದ್ದಂತೆಯೇ ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವುದು ಜಿಲ್ಲೆಯಲ್ಲಿ ಕುತೂಹಲ ಮೂಡಿಸಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿರುವುದನ್ನು ವಿವರಿಸಿರುವ ಅವರು ಹಲವು ವಿಚಾರಗಳ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ. ಕೋಮುಲ್ ಅಧ್ಯಕ್ಷ ಗಾದಿಗೆ ಸ್ಪರ್ಧಿಸುವ ಸಾಧ್ಯತೆ ಇದ್ದು ಈ ಭೇಟಿಯು ಘಟಬಂಧನ್ ನಾಯಕರಲ್ಲಿ ತಳಮಳ ಉಂಟು ಮಾಡಿದೆ. ಎಲ್ಲರಿಗೂ ಕಾಲ ಕೂಡಿ ಬರಲಿದೆ ಎಂದು ಅವರು ಬುಧವಾರ ಸೂಚ್ಯವಾಗಿ ಹೇಳಿರುವುದು ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಜಟಾಪಟಿಯ ಸುಳಿವು ನೀಡಿದೆ.
- ಯಾರು ಯಾರನ್ನು ಬೆಂಬಲಿಸುತ್ತಾರೋ?
ಕಾಂಗ್ರೆಸ್‌ನಲ್ಲಿ ಮನೆಯೊಂದು ಬಾಗಿಲು ಮೂರು ಎನ್ನುವಂತಾಗಿದೆ. ಕಾಂಗ್ರೆಸ್ ಸಭೆ ನಡೆದರೆ ಹೊರಗಡೆ ರಿಸರ್ವ್ ಪೊಲೀಸ್ ಹಾಕಬೇಕಾದ ಪರಿಸ್ಥಿತಿ ಇದೆ. ಕೆ.ಎಚ್.ಮುನಿಯಪ್ಪ ಬಣ ಎಸ್.ಎನ್.ನಾರಾಯಣಸ್ವಾಮಿ ಬಣ ರಮೇಶ್ ಕುಮಾರ್ ಬಣಗಳಿವೆ. ಈ ಲೆಕ್ಕಾಚಾರದಲ್ಲಿ ಕೋಮುಲ್ ಅದ್ಯಕ್ಷ ಸ್ಥಾನದ ಚುನಾವಣೆಗೆ ಯಾರು ಯಾರನ್ನು ಬೆಂಬಲಿಸುತ್ತಾರೋ ಗೊತ್ತಿಲ್ಲ. ಜೆಡಿಎಸ್–ಬಿಜೆಪಿ ಬೆಂಬಲಿತ ನಿರ್ದೇಶಕರಲ್ಲಿ ಒಬ್ಬರಿಗೆ ಅಧ್ಯಕ್ಷ ಪಟ್ಟ ಕಟ್ಟಿದರೆ ಕೋಲಾರ ಜಿಲ್ಲೆಗೆ ಒಳ್ಳೆಯದಾಗುತ್ತದೆ ಎಸ್.ಮುನಿಸ್ವಾಮಿ ಮಾಜಿ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.