ಕೋಲಾರ: ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಸೋಮವಾರ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ದಲಿತ ಸಂಘಟನೆಗಳ ಕೆಲ ನಾಯಕರು ಘೋಷಣೆ ಕೂಗಿದರು.
ಹೋರಾಟಗಾರ ಬೀರಮಾನಹಳ್ಳಿ ಆಂಜನಪ್ಪ ಎಂಬುವರು ವೇದಿಕೆ ಮುಂಭಾಗ ಬಂದು ಅಂಬೇಡ್ಕರ್ ಕಾರ್ಯಕ್ರಮದಲ್ಲಿ ಕೊತ್ತೂರು ಮಂಜುನಾಥ್ ಪಾಲ್ಗೊಳ್ಳಬಾರದು ಎಂದು ಪಟ್ಟು ಹಿಡಿದರು.
‘2013ರಲ್ಲಿ ಮುಳಬಾಗಿಲು ವಿಧಾನಸಭೆ ಮೀಸಲು ಕ್ಷೇತ್ರದಲ್ಲಿ ಕೊತ್ತೂರು ಮಂಜುನಾಥ್ ಎಸ್‌ಸಿ ಪ್ರಮಾಣಪತ್ರ ಪಡೆದು ಮೀಸಲಾತಿ ದುರುಪಯೋಗ ಪಡಿಸಿಕೊಂಡು ಗೆದ್ದಿದ್ದರು. ಮೀಸಲಾತಿ ಕದ್ದವರು ಅಂಬೇಡ್ಕರ್ ಅವರಿಗೆ ಪುಷ್ಪನಮನ ಸಲ್ಲಿಸಬಾರದು. ಅವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಾರದು’ ಎಂದು ಧಿಕ್ಕಾರ ಕೂಗಿದರು.
ತಕ್ಷಣವೇ ಪೊಲೀಸರು ಮಧ್ಯ ಪ್ರವೇಶಿಸಿ ವಶಕ್ಕೆ ಪಡೆದು ಹೊರಗೆ ಕರೆದುಕೊಂಡು ಹೋದರು. ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿಗೆ ಭಂಗ ಉಂಟು ಮಾಡಿದ್ದಾರೆ ಎಂದು ಅವರ ಮೇಲೆ ಗಲ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಲಾಗಿದೆ. ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಪೊಲೀಸರು ನೋಟಿಸ್ ಕೂಡ ನೀಡಿದ್ದಾರೆ
ಇನ್ನೊಂದೆಡೆ ರಮೇಶ್ ಹಾರೋಹಳ್ಳಿ ಸೇರಿದಂತೆ ಕೆಲ ಮುಖಂಡರು ಶಾಸಕರನ್ನು ಬೆಂಬಲಿಸಿ ಘೋಷಣೆ ಕೂಗಿದರು. ಅವರನ್ನೂ ಪೊಲೀಸರು ಸಭಾಂಗಣದಿಂದ ಹೊರಗೆ ಕಳುಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.