ADVERTISEMENT

ಕೋಲಾರ: ಲೋಕಾ ಬಲೆಗೆ ಡಿ.ಸಿ ಕಚೇರಿಯ ಮೂವರು

ಭೂಪರಿವರ್ತನೆ ಮಾಡಿಕೊಡಲು ಹಣ ಪಡೆಯುವಾಗ ಟ್ರ್ಯಾಪ್‌, ಇಬ್ಬರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 15:47 IST
Last Updated 10 ಜೂನ್ 2025, 15:47 IST
ಕೋಲಾರ ಜಿಲ್ಲಾಡಳಿತ ಭವನ
ಕೋಲಾರ ಜಿಲ್ಲಾಡಳಿತ ಭವನ   

ಕೋಲಾರ: ಭೂಪರಿವರ್ತನೆ ಹಾಗೂ ಖಾತೆ ಮಾಡಿಕೊಡಲು ಹಣ ಪಡೆಯುತ್ತಿದ್ದ ಜಿಲ್ಲಾಧಿಕಾರಿ ಕಚೇರಿಯ ಮೂವರು ಸಿಬ್ಬಂದಿ ಮಂಗಳವಾರ ಸಂಜೆ ಜಿಲ್ಲಾ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಶಿರಸ್ತೇದಾರ್‌ ಚಂದ್ರಪ್ಪ, ಎಫ್‌ಡಿಎ ಅಜಯ್‌ ಹಾಗೂ ‘ಡಿ’ ದರ್ಜೆಯ ನೌಕರ ಮುನಿರಾಜು ಟ್ರ್ಯಾಪ್‌ ಆದವರು.

ಮೂವರ ಮೇಲೆ ಭ್ರಷ್ಟಾಚಾರ ನಿಗ್ರಹದ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು ಚಂದ್ರಪ್ಪ ಹಾಗೂ ಮುನಿರಾಜು ಅವರನ್ನು ವಶಕ್ಕೆ ಪಡೆದಿದ್ದಾರೆ. ಅಜಯ್‌ ಎಂಬುವರು ಈ ಸಂದರ್ಭದಲ್ಲಿ ಕೋರ್ಟ್‌ ಕೆಲಸಕ್ಕೆಂದು ಹೊರ ಹೋಗಿದ್ದರು ಎಂಬುದು ಗೊತ್ತಾಗಿದೆ.

ADVERTISEMENT

ಬೆಂಗಳೂರಿನಲ್ಲಿ ನೆಲೆಸಿರುವ ಕೋಲಾರದ ಮಂಜುನಾಥ್‌ ಎಂಬುವರು ತಮ್ಮ ಜಮೀನಿನ ಭೂಪರಿವರ್ತನೆ ಹಾಗೂ ಖಾತೆ ವಿಚಾರಕ್ಕೆ ಅರ್ಜಿ ಸಲ್ಲಿಸಿ ಬಹಳ ತಿಂಗಳಾಗಿದ್ದವು. ಕೆಲಸ ಮಾಡಿಕೊಡಲು ₹ 25 ಸಾವಿರ ಕೇಳಿದ್ದರು ಎನ್ನಲಾಗಿದೆ. ಅವರಿಂದ ಆರೋಪಿಗಳು ಒಮ್ಮೆ ₹ 5 ಸಾವಿರ, ಮತ್ತೊಮ್ಮೆ ₹ 10 ಸಾವಿರ ಪಡೆದಿದ್ದಾರೆ. ಇನ್ನುಳಿದ ಹಣ ನೀಡುವಂತೆ ಒತ್ತಾಯಿಸುತ್ತಿದ್ದರು. ಈ ಸಂಬಂಧದ ಆಡಿಯೋ ಕೂಡ ಇದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ಈ ನಡುವೆ ಅರ್ಜಿದಾರ ಈ ವಿಚಾರವನ್ನು ಲೋಕಾಯುಕ್ತರ ಗಮನಕ್ಕೆ ತಂದಿದ್ದಾರೆ. ಅದರಂತೆ ಲೋಕಾಯುಕ್ತ ಪೊಲೀಸರು ಬಲೆಗೆ ಕೆಡವಲು ಕಾರ್ಯಾಚರಣೆ ಕೈಗೊಂಡಿದ್ದಾರೆ.

ಅರ್ಜಿದಾರ ನೀಡಿದ ₹ 22 ಸಾವಿರದಲ್ಲಿ ಸ್ವಲ್ಪ ಮೊತ್ತವನ್ನು ತನ್ನ ಬಳಿ ಇಟ್ಟುಕೊಂಡ ‘ಡಿ’ ದರ್ಜೆ ನೌಕರ ಮುನಿರಾಜು, ಇನ್ನುಳಿದ ಹಣವನ್ನು ಶಿರಸ್ತೇದಾರ ಚಂದ್ರಪ್ಪ ಎಂಬುವರಿಗೆ ಕೊಡಲು ಹೋಗುವಾಗ ಬಲೆಗೆ ಕೆಡವಿದ್ದಾರೆ.  ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.

ಜಿಲ್ಲಾ ಲೋಕಾಯುಕ್ತ ಅಧೀಕ್ಷಕ ವಿ.ಧನಂಜಯ, ಡಿವೈಎಸ್ಪಿ ಸುಧೀರ್‌ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.