ADVERTISEMENT

ಗ್ರಾಮೀಣ ಜನರ ಆದಾಯ ಮೂಲ ಹುಣಸೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2024, 6:16 IST
Last Updated 28 ಏಪ್ರಿಲ್ 2024, 6:16 IST
ಮರದಿಂದ ಉದುರಿಸಿದ ಹುಣಸೇಹಣ್ಣನ್ನು ಆಯ್ದುಕೊಳ್ಳುತ್ತಿರುವುದು
ಮರದಿಂದ ಉದುರಿಸಿದ ಹುಣಸೇಹಣ್ಣನ್ನು ಆಯ್ದುಕೊಳ್ಳುತ್ತಿರುವುದು   

ಬಂಗಾರಪೇಟೆ: ತಾಲ್ಲೂಕಿನ ಗ್ರಾಮೀಣರಲ್ಲಿ ಬಹುತೇಕರು ಹುಣಸೆ ಹಣ್ಣನ್ನು ಆಯ್ದು, ಬಿಡಿಸಿ, ಹದಮಾಡಿ ಮಾರಾಟ ಮಾಡುವ ಮೂಲಕ ಜೀವನೋಪಾಯ ರೂಪಿಸಿಕೊಂಡಿದ್ದಾರೆ.

ಹುಣಸೆ ಹಣ್ಣು ರುಚಿಯಲ್ಲಿ ಹುಳಿಯಾದರೂ ಆರೋಗ್ಯಕ್ಕೆ ಸಿಹಿ ಎಂದರೆ ತಪ್ಪಲ್ಲ. ನೈಸರ್ಗಿಕವಾಗಿ ಬೆಳೆಯುವ ಹುಣಸೆಗೆ ಸದ್ಯ ಮಾರುಕಟ್ಟೆಯಲ್ಲಿ ಬೇಡಿಕೆ ಬಂದಿದೆ.  

ತಾಲ್ಲೂಕಿನ ಹಲವೆಡೆ ವ್ಯಾಪಾರಿಗಳು ಮತ್ತು ರೈತರು ಹುಣಸೆ ಬೆಳೆಗಾರರಿಂದ ಹುಣಸೆಕಾಯಿಯನ್ನು ಖರೀದಿಸಿ, ರಾಶಿ ಹಾಕಿ, ಸಂಸ್ಕರಿಸಿ ಹುಣಸೆ ಹಣ್ಣನ್ನು ಮಾರಾಟ ಮಾಡುತ್ತಿದ್ದಾರೆ. ಹಾಗಾಗಿ ನೈಸರ್ಗಿಕವಾಗಿ ಬಂಗಾರಪೇಟ ತಾಲ್ಲೂಕಿನ ಕಾಮಸಮುದ್ರ ಮತ್ತು ಬೂದಿಕೋಟೆ ಹೋಬಳಿಯಲ್ಲಿ ಹೆಚ್ಚಾಗಿ ಸಿಗುವ ಹುಣಸೆ ಮರಗಳಿಂದ ಹುಣಸೆಹಣ್ಣನ್ನು ಬಿಡಿಸಿ ಅದನ್ನು ಹಣ್ಣು ಮಾಡುವ ವ್ಯಾಪಾರ ಜೋರಾಗಿಯೇ ನಡೆಯುತ್ತಿದೆ.

ADVERTISEMENT

ಟೊಮೆಟೊಗೆ ಪರ್ಯಾಯವಾಗಿರುವ ಹುಣಸೆಗೆ ಈಚೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕುದುರಿದೆ. ಮರವೊಂದರ ಹುಣಸೆ ಕಾಯಿಗಳನ್ನು ₹ 5 ಸಾವಿರಕ್ಕೆ ಖರೀದಿಸಿದರೆ, ಅದರಲ್ಲಿ ಕನಿಷ್ಠ 500ರಿಂದ 1000 ಕೆಜಿಯವರೆಗೆ ಹುಣಸೆಕಾಯಿಗಳು ಸಿಗುತ್ತವೆ. ಈ ಕಾಯಿಗಳನ್ನು ಸಕಾಲಕ್ಕೆ ಉದುರಿಸಿ ಹಣ್ಣು  ಮಾಡಿದರೆ, ಕೆಜಿ ಹುಣಸೆ ಹಣ್ಣಿಗೆ ₹ 30ರಿಂದ ₹ 60ರವರೆಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗುತ್ತದೆ.

ಜಿಲ್ಲೆಯಿಂದ ವ್ಯಾಪಾರಿಗಳು ಮರದಿಂದ ಹಣ್ಣನ್ನು ಮಾಡಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮತ್ತು ತಮಿಳುನಾಡಿನ ಕೃಪ್ಣಗಿರಿಯ ಮಾರುಕಟ್ಟೆಗೆ ಹಾಕುತ್ತಾರೆ. ಅಲ್ಲಿಂದ ಬೇರೆ ಬೇರೆ ರಾಜ್ಯಗಳಿಗೆ ಹುಣಸೆ ಹಣ್ಣು ರಫ್ತಾಗುತ್ತದೆ. ಹುಣಸೆ ಹಣ್ಣಿನ ವ್ಯಾಪಾರವು ಬಂಗಾರಪೇಟೆ ರೈತರಿಗೆ ಬದಲಿ ಆದಾಯದ ಮೂಲವಾಗಿದೆ.

ಹುಣಸೆಹಣ್ಣಿಗೆ ಬೇಡಿಕೆ ಇದ್ದರೂ ರೈತರಿಗೆ ಸಿಗುವ ಲಾಭ ಕಡಿಮೆಯೇ. ಮರದಲ್ಲಿನ ಹುಣಸೆಕಾಯಿಗಳನ್ನು ಕೀಳಲು ಕೂಲಿಕಾರ್ಮಿಕರಿಗೆ ₹ 600ರಿಂದ ₹ 700ರವರೆಗೆ ಕೂಲಿ  ನೀಡಬೇಕು. ಕೆಲವೆಡೆ ದುಬಾರಿ ಮೊತ್ತದ ಕೂಲಿ ಭರಿಸಲಾಗದೇ ಮರದಲ್ಲೇ ಹುಣಸೆಕಾಯಿಗಳನ್ನು ಹಣ್ಣಾಗಲು ಬಿಡಲಾಗಿದೆ.

ಮತ್ತೊಂದೆಡೆ ಮರಗಳಿಂದ ಉದುರಿಸಿದ ಹುಣಸೆಕಾಯಿಗಳನ್ನು ಹಣ್ಣು ಮಾಡಲು ಕೂಲಿ ಕಾರ್ಮಿಕರ ಕೊರತೆ ಎದುರಾಗಿದೆ. ನಮಗೆ ಇದು ಕಸುಬಾಗಿದ್ದು, ಅನಿವಾರ್ಯವಾಗಿ ರೈತರೇ ಕಾರ್ಮಿಕರ ಕೆಲಸವನ್ನೂ ಮಾಡುವಂತಾಗಿದೆ. ವರ್ಷಕ್ಕೆ ಒಮ್ಮೆ ಮಾತ್ರ ಆದಾಯ ತರುವ ಬೆಳೆಯಾಗಿರುವ ಹುಣಸೆ ಮಳೆ ಕಡಿಮೆ ಬೀಳುವ ಪ್ರದೇಶಗಳಿಗೆ ಸೂಕ್ತ ಬೆಳೆಯಾಗಿದೆ ಎನ್ನುತ್ತಾರೆ ಹುಣಸೆ ಬೆಳೆಗಾರರು.

ಸಂಗ್ರಹಿಸಿದ ಹುಣಸೇ ಹಣ್ಣನ್ನು ಹದಮಾಡಿ ಮಾರಾಟಕ್ಕೆ ಸಿದ್ಧಪಡಿಸುತ್ತಿರುವುದು
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ 

ಬಹುಪಯೋಗಿ ಹುಣಸೆಹಣ್ಣು

ಹುಣಸೆ ಹಣ್ಣು ಹಾಕಿದ ಸಾರಿನ ರುಚಿ ಹೆಚ್ಚು ಎನ್ನುವ ಕಾರಣಕ್ಕಾಗಿ ಅಡುಗೆಯಲ್ಲಿ ಹುಣಸೆ ಹಣ್ಣಿನ ಬಳಕೆ ಹೆಚ್ಚಿದೆ. ಬರೀ ಸಾಂಬಾರು  ಮಾತ್ರವಲ್ಲ ಥರೇವಾರಿ ಚಟ್ನಿ ರಸಂ ರೈಸ್ ಬತ್ ಹೀಗೆ ಅನೇಕ ಅಡುಗೆಗಳಲ್ಲಿ ಹುಣಸೆಹಣ್ಣಿನ ರಸಕ್ಕೆ ಕಾಯಂ ಸ್ಥಾನವಿದೆ. ಅಂತೆಯೇ  ಮಾಂಸಾಹಾರದಲ್ಲೂ ಹುಣಸೆ ಹಣ್ಣಿನ ಪಾಲು ಇದೆ. ಚಿಕನ್ ಮಟನ್ ಖಾದ್ಯಗಳಿಗಷ್ಟೇ ಅಲ್ಲ ಮೀನು ಸ್ವಚ್ಛ ಮಾಡಲು ಹುಣಸೆ ಬಳಸುವುದು ವಾಡಿಕೆ. ಅಂತೆಯೇ ಮೀನಿನ ಸಾರಿಗೆ ಹುಣಸೆ ಹಣ್ಣು ಹಾಕಿದರೆ ಅದರ ರುಚಿಯೇ ಬೇರೆ ಅನ್ನುತ್ತಾರೆ ಗೃಹಣಿಯರು.  ಹುಣಸೆಯ ರಸ ಜೀರ್ಣಕ್ರಿಯೆಗೆ ಸಹಕಾರಿ. ಹಾಗಾಗಿ ತಂಪು ಪಾನೀಯಗಳ ತಯಾರಿಕೆಯಲ್ಲೂ ಇದನ್ನು ಬಳಸುತ್ತಾರೆ. ಹುಣಸೆ ಹಣ್ಣಿನ ಸೇವನೆಯಿಂದ ಕೊಬ್ಬಿನಂಶ ಮಟ್ಟವನ್ನು ನಿಯಂತ್ರಣ ಹೃದಯ ರಕ್ತನಾಳದ ಆರೋಗ್ಯಕ್ಕೂ ಪೂರಕ. ಹುಣಸೆ ಹಣ್ಣಿನಲ್ಲಿ ನಾರಿನಾಂಶ ಹೆಚ್ಚಾಗಿರುವುದರಿಂದ ದೇಹದಲ್ಲಿ ಕೆಟ್ಟ ಕೊಬ್ಬಿನಂಶವನ್ನು ಹೊರಹಾಕಿ ರಕ್ತ ಸಂಚಾರವನ್ನು ಸುಗಮಗೊಳಿಸಿ ಹೃದಯ ಬಡಿತವನ್ನು ಸರಾಗವಾಗಿಸುತ್ತದೆ. ಹುಣಸೆ ಹಣ್ಣಿನಷ್ಟೇ ಅದರ ಬೀಜಗಳೂ ಆರೋಗ್ಯಕಾರಿಯಾಗಿವೆ ಎನ್ನುತ್ತಾರೆ ಆರ್ಯುವೇದ ವೈದ್ಯರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.