ADVERTISEMENT

ಕೋಲಾರ: ಚಾಮುಂಡೇಶ್ವರಿ ವರ್ಧಂತಿ, ಭಕ್ತ ಸಾಗರ

ಕೋಲಾರಮ್ಮ ದೇಗುಲದಲ್ಲಿ ವಿಶೇಷ ಪೂಜೆ, ಪ್ರಸಾದ ವಿನಿಯೋಗ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 2:05 IST
Last Updated 18 ಜುಲೈ 2025, 2:05 IST
ಕೋಲಾರದಲ್ಲಿ ಗುರುವಾರ ಕೋಲಾರಮ್ಮ ದೇವಿಯ ದರ್ಶನ ಪಡೆಯಲು ಬಂದಿದ್ದ ಭಕ್ತರು
ಕೋಲಾರದಲ್ಲಿ ಗುರುವಾರ ಕೋಲಾರಮ್ಮ ದೇವಿಯ ದರ್ಶನ ಪಡೆಯಲು ಬಂದಿದ್ದ ಭಕ್ತರು   

ಕೋಲಾರ: ಚಾಮುಂಡೇಶ್ವರಿ ವರ್ಧಂತಿ ಪ್ರಯುಕ್ತ ಕೋಲಾರಮ್ಮ ದೇಗುಲ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ ವಿಶೇಷ ಪೂಜೆ ನಡೆಯಿತು. ಹಲವೆಡೆ ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.

ಭಕ್ತರು ಬೆಳಗ್ಗಿನಿಂದಲೇ ಸರತಿ ಸಾಲಿನಲ್ಲಿ ಶಕ್ತಿ ದೇವತೆ ಕೋಲಾರಮ್ಮನ ದರ್ಶನ ಪಡೆದರು. ವಿಶೇಷ ಪೂಜಾ ನಡೆದಿದ್ದು, ಭಕ್ತ ಸಾಗರವೇ ಹರಿದು ಬಂದಿತು. ದೇವಾಲಯದ ಒಳಾಂಗಣ ಹಾಗೂ ಹೊರಾಂಗಣವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಅಮ್ಮನವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ರಾತ್ರಿ ವಿದ್ಯುತ್‌ ದೀಪಾಲಂಕಾರ ಗಮನ ಸೆಳೆಯಿತು.

ದೇಗುಲದಲ್ಲಿ ಮುಂಜಾನೆಯಿಂದಲೇ ಪೂಜಾ ಕೈಂಕರ್ಯಗಳು ಆರಂಭವಾದವು. ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಸಹಸ್ರನಾಮ, ಅಷ್ಟಾವಧಾನ ಸೇವೆ ಇತರ ಸೇವೆಗಳು ನಡೆದವು. ಮಹಿಳೆಯರು ದೀಪ ಬೆಳಗಿದರು.

ADVERTISEMENT

ಕೋಲಾರಮ್ಮ ದೇವಾಲಯಕ್ಕೆ ಸಚಿವ ಕೆ.ಎಚ್.ಮುನಿಯಪ್ಪ, ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‍ಕುಮಾರ್, ಜೆಡಿಎಸ್ ಮುಖಂಡ ಸಿಎಂಆರ್.ಶ್ರೀನಾಥ್ ಸೇರಿದಂತೆ ಹಲವರು ತಾಯಿಯ ದರ್ಶನ ಪಡೆದರು.

ನಗರದ ಜಯನಗರದ 7ನೇ ಕ್ರಾಸ್‍ನಲ್ಲಿರುವ ಸಫಲಮ್ಮ ದೇವಾಲಯದಲ್ಲಿ ಚಾಮುಂಡೇಶ್ವರಿ ಜಯಂತಿ ಅಂಗವಾಗಿ ತಾಯಿಗೆ ವಿಶೇಷ ಪೂಜೆ, ಅಭಿಷೇಕ, ಹೋಮ, ಹವನ ಕಾರ್ಯಕ್ರಮಗಳು ಪ್ರಧಾನ ಅರ್ಚಕ ಸತ್ಯನಾರಾಯಣ ನೇತೃತ್ವದಲ್ಲಿ ನಡೆದವು. ವಿಶಿಷ್ಟ ರೀತಿಯಲ್ಲಿ ಹೂವಿನ ಅಲಂಕಾರ ಮನಡಲಾಗಿತ್ತು.

ಮುಂಜಾನೆಯಿಂದಲೇ ದೇವರ ದರ್ಶನಕ್ಕೆ ನೂರಾರು ಮಂದಿ ಬಂದರು. ಸಫಲಮ್ಮ ದೇವಿ ಭಕ್ತ ಮಂಡಳಿ ಉತ್ತಮ ವ್ಯವಸ್ಥೆ ಮಾಡಿತ್ತು.

ಕೋಲಾರ ತಾಲ್ಲೂಕಿನ ನರಸಾಪುರ ಹೋಬಳಿ ಲಕ್ಷ್ಮಿಸಾಗರ ಗ್ರಾಮದ ಚಾಮುಂಡೇಶ್ವರಿ ದೇವಾಲಯದಲ್ಲಿ ತಾಯಿಗೆ ವಿಶೇಷ ಪೂಜೆ ನಡೆಯಿತು. ಹೂವಿನ ಅಲಂಕಾರ ಮಾಡಿದ್ದು, ಉತ್ಸವ ಮೂರ್ತಿಯ ಮೆರವಣಿಗೆ ಸಾಗಿ ಬಂದಾಗ ಕೊತ್ತೂರು ಮಂಜುನಾಥ್ ಹಾಗೂ ಎಂ.ಎಲ್.ಅನಿಲ್ ಕುಮಾರ್ ದೇವರ ಮೂರ್ತಿಯನ್ನು ಹೆಗಲ ಮೇಲೆ ಹೊತ್ತರು.

ನಲ್ಲಗಂಗಮ್ಮ ದೇವಾಲಯಕ್ಕೆ ಮತ್ತು ಡಿ.ಆರ್.ಪೊಲೀಸ್ ಕಚೇರಿ ಆವರಣದಲ್ಲಿರುವ ಚಾಮುಂಡೇಶ್ವರಿ ದೇವಾಲಯಕ್ಕೆ ಸಾವಿರಾರು ಮಂದಿ ಭಕ್ತರು ಭೇಟಿ ನೀಡಿದರು.

ನಗರದ ಕಿಲಾರಿಪೇಟೆಯಲ್ಲಿ ಸತ್ಯಮ್ಮ ದೇವಿಗೆ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು. ಇದೇ ರೀತಿ ಅಮ್ಮವಾರಿಪೇಟೆಯ ಗಂಗಮ್ಮ ದೇವಸ್ಥಾನ, ಗಲ್‍ಪೇಟೆಯ ಚಾಮುಂಡೇಶ್ವರಿ ದೇವಾಲಯ, ನಗರದ ಅಮ್ಮವಾರಿಪೇಟೆಯ ನಲ್ಲಗಂಗಮ್ಮ ದೇವಾಲಯ, ಟೇಕಲ್ ರಸ್ತೆಯಲ್ಲಿರುವ ರೇಣುಕಾ ಯಲ್ಲಮ್ಮ, ಮಾರೆಮ್ಮ ದೇವಸ್ಥಾನ ಸೇರಿದಂತೆ ಎಲ್ಲ ಶಕ್ತಿದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿತು.

ಪೇಟೆಚಾಮನಹಳ್ಳಿ ಚೌಡೇಶ್ವರಿ ನಗರದಲ್ಲಿ ನೆಲೆಸಿರುವ ಚೌಡೇಶ್ವರಿ ಅಮ್ಮನವರಿಗೆ ಶ್ರೀಚೌಡೇಶ್ವರಿ ದೇವಾಲಯ ಸೇವಾ ಸಮಿತಿ ಟ್ರಸ್ಟ್‌ನಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.

ಕೋಲಾರಮ್ಮ ದೇವಿಯನ್ನು ಹೂಗಳಿಂದ ಅಲಂಕರಿಸಲಾಗಿತ್ತು
ಕೋಲಾರ ತಾಲ್ಲೂಕಿನ ಲಕ್ಷ್ಮಿಸಾಗರ ಗ್ರಾಮದ ಚಾಮುಂಡೇಶ್ವರಿ ದೇವಾಲಯದಲ್ಲಿ ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ಶಾಸಕ ಕೊತ್ತೂರು ಮಂಜುನಾಥ್‌ ಎಂಎಲ್‌ಸಿ ಎಂ.ಎಲ್‌.ಅನಿಲ್‌ ಕುಮಾರ್‌ ಪಾಲ್ಗೊಂಡರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.