ADVERTISEMENT

ಕೋಲಾರ: ಎಂಥದ್ದೇ ಆಪತ್ತು ನಿಭಾಯಿಸಲು ಸಿದ್ಧ!

‘ಆಪರೇಷನ್ ಅಭ್ಯಾಸ್’: ಅಣುಕು ಪ್ರದರ್ಶನದ ಮೂಲಕ ಸಾಮರ್ಥ್ಯ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 16 ಮೇ 2025, 16:21 IST
Last Updated 16 ಮೇ 2025, 16:21 IST
ಉಗ್ರರು ಡ್ರೋಣ್‌ ದಾಳಿ ಮೂಲಕ ಮನೆ ಸುಟ್ಟು ಹಾಕಿದಾಗ ನಾಗರಿಕರನ್ನು ಕಮಾಂಡೊ ಪಡೆ ರಕ್ಷಿಸುವ ಅಣುಕು ಕಾರ್ಯಾಚರಣೆ
ಉಗ್ರರು ಡ್ರೋಣ್‌ ದಾಳಿ ಮೂಲಕ ಮನೆ ಸುಟ್ಟು ಹಾಕಿದಾಗ ನಾಗರಿಕರನ್ನು ಕಮಾಂಡೊ ಪಡೆ ರಕ್ಷಿಸುವ ಅಣುಕು ಕಾರ್ಯಾಚರಣೆ   

ಕೋಲಾರ: ಜನನಿಬಿಡ ಪ್ರದೇಶಗಳಲ್ಲಿ ನಡೆಯುವ ಭಯೋತ್ಪಾದಕ ಚಟುವಟಿಕೆ, ಅಗ್ನಿಅವಘಡ, ಬಾಂಬ್ ಸ್ಫೋಟ, ಕಟ್ಟಡ ದುರಂತದಂಥ ಅಹಿತಕರ ಘಟನೆ ಸಂಭವಿಸಿದಾಗ ಸಾರ್ವಜನಿಕರು ಭಯಭೀತರಾಗದೆ ಯಾವ ರೀತಿ ಎದುರಿಸಬೇಕು, ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕು, ರಕ್ಷಣೆ ಕಾರ್ಯಾಚರಣೆ ಯಾವ ರೀತಿ ನಡೆಯುತ್ತದೆ ಎಂಬುದರ ಬಗ್ಗೆ ಅಣುಕು ಪ್ರದರ್ಶನ ನಡೆಸಲಾಯಿತು.

ಗಡಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ನೆಲೆಸಿರುವ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾ ಕವಾಯತು ಮೈದಾನ ಹಾಗೂ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ಆವರಣದಲ್ಲಿ ‘ಆಪರೇಷನ್ ಅಭ್ಯಾಸ್’ ಹೆಸರಿನಲ್ಲಿ ನಾಗರಿಕ ರಕ್ಷಣಾ ಕಾರ್ಯಾಚರಣೆ ಜಿಲ್ಲಾಧಿಕಾರಿ ಎಂ.ಆರ್.ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಸಮ್ಮುಖದಲ್ಲಿ ನಡೆಯಿತು.

ಸಾರ್ವಜನಿಕರು ಆಪತ್ಕಾಲದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಲಾಯಿತು.

ADVERTISEMENT

ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ಕಮಾಂಡೊ ಪಡೆ, ಗೃಹರಕ್ಷದಳ, ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ, ರೆಡ್ ಕ್ರಾಸ್, ಜಿಲ್ಲಾ ಸ್ಕೌಟ್ಸ್ ಅಂಡ್ ಗೈಡ್ಸ್, ಎನ್‌ಸಿಸಿ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಈ ಅಣುಕ ಪ್ರದರ್ಶನ ನಡೆಯಿತು.

ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ಆವರಣದಲ್ಲಿ ಭಯೋತ್ಪಾದಕರು ಕಟ್ಟಡದ ಮೇಲೆ ಬಾಂಬ್‌ ಹಾಕಿದ ಸಂದರ್ಭದಲ್ಲಿ ಸಂಭವಿಸುವ ಘಟನಾವಳಿ ಸೃಷ್ಟಿಸಿ ನಾಗರಿಕ ರಕ್ಷಣೆ ಮಾಡುವ ವಿಧಾನದ ಅಣುಕು ಕಾರ್ಯಾಚರಣೆ ನಡೆಸಲಾಯಿತು.

ಕವಾಯತು ಮೈದಾನದಲ್ಲಿ ಡ್ರೋಣ್‌ ದಾಳಿಯಿಂದ ವಾಸಸ್ಥಳದ ಮೇಲೆ ದಾಳಿ ನಡೆಸಿದಾಗ ಜನರನ್ನು ರಕ್ಷಿಸುವ ಅಣುಕು ಪ್ರದರ್ಶನ ನಡೆಸಲಾಯಿತು.

ಆತಂಕವಾದಿಗಳು ಬಸ್‌ ಹಾಗೂ ಅದರಲ್ಲಿ ಪ್ರಯಾಣಿಕರನ್ನು ಒತ್ತೆ ಇರಿಸಿಕೊಂಡ ಸಂದರ್ಭದಲ್ಲಿ ನಡೆಯುವ ಘಟನಾವಳಿಗಳನ್ನು ರೋಚಕವಾಗಿ ಪ್ರದರ್ಶಿಸಲಾಯಿತು. ನಂತರದ ಬಂದು ಘಟನೆಯ ವಿವರವನ್ನು ಮೇಲಧಿಕಾರಿಗಳಿಗೆ ಕಮಾಂಡೊ ತಿಳಿಸಿದರು.

ಪೊಲೀಸ್ ಇಲಾಖೆ, ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ, ಅಗ್ನಿಶಾಮಕ ದಳ, ಆರೋಗ್ಯ ಇಲಾಖೆಯ ಪಾತ್ರದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

ಸ್ಥಳದಲ್ಲಿ ಸೇರಿದ್ದ ಸಾರ್ವಜನಿಕರು ಅಣುಕು ಕಾರ್ಯಾಚರಣೆಯನ್ನು ಕುತೂಹಲದಿಂದ ವೀಕ್ಷಿಸಿದರು. ರಕ್ಷಣಾ ಸಿಬ್ಬಂದಿಯ ಚಾಕಚಕ್ಯತೆ ಹಾಗೂ ಹೊಂದಾಣಿಕೆಗೆ ಸ್ಥಳದಲ್ಲಿದ್ದವರು ನಿಬ್ಬೆರಗಾದರು.

ಅಣುಕು ಪ್ರದರ್ಶನದ ವೇಳೆ, ಜಿಲ್ಲಾಧಿಕಾರಿ ಎಂ.ಆರ್ ರವಿ, ಜಿಲ್ಲಾ ಪೊಲೀಸ್ ವರೊಷ್ಠಾಧಿಕಾರಿ ನಿಖಿಲ್ ಬಿ, ಹೆಚ್ಚು ಪೊಲೀಸ್ ವರಿಷ್ಠಾಧಿಕಾರಿ ರವಿಶಂಕರ್, ಡಿವೈಎಸ್ಪಿ ನಾಗ್ತೆ, ಜಿಲ್ಲಾ ಮೀಸಲು ಪಡೆ ಡಿವೈಎಸ್ಪಿ ಮಂಜುನಾಥ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಂ.ಆರ್‌.ಸುಮಾ, ಜಿಲ್ಲಾ ಮಟ್ಟದ ಅಧಿಕಾರಿಗಳು ಸಾರ್ವಜನಿಕರು, ಭಾಗವಹಿಸಿದ್ದರು.

ಅಣುಕು ಕಾರ್ಯಾಚರಣೆಯು ಜಿಲ್ಲಾಧಿಕಾರಿ ಎಂ.ಆರ್‌.ರವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ಸಮ್ಮುಖದಲ್ಲಿ ನಡೆಯಿತು
ಬಸ್‌ಅನ್ನು ಉಗ್ರರು ಅಪಹರಣ ಮಾಡಿದಾಗ ಅದರಲ್ಲಿದ್ದ ಜನರನ್ನು ಕಮಾಂಡೊ ಪಡೆ ರಕ್ಷಣೆ ಮಾಡಿ ಉಗ್ರರನ್ನು ವಶಕ್ಕೆ ಪಡೆಯುವ ಅಣುಕು ಕಾರ್ಯಾಚರಣೆ
ಉಗ್ರರ ದಾಳಿ ವೇಳೆ ನಾಗರಿಕರನ್ನು ಕಮಾಂಡೊ ಪಡೆ ರಕ್ಷಿಸುವ ಅಣುಕು ಕಾರ್ಯಾಚರಣೆ
ವಿಪತ್ತು ಎಲ್ಲೂ ಬೇಕಾದರೂ ಸಂಭವಿಸಬಹುದು. ಅದಕ್ಕೆ ಮಾನಸಿಕವಾಗಿ ಸಿದ್ಧತೆ ನಡೆಸಿರಬೇಕು. ಎಸ್ಒಪಿ ಪಾಲನೆ ಮಾಡಬೇಕು. ಸಮನ್ವಯದಿಂದ ಅಣಕು ಕಾರ್ಯಾಚರಣೆ ಚೆನ್ನಾಗಿ ನಡೆದಿದೆ
–ಎಂ.ಆರ್‌.ರವಿ, ಜಿಲ್ಲಾಧಿಕಾರಿ
ಯಾವುದೇ ಅವಘಡ ಸಂಭವಿಸಿದರೂ ಈ ರೀತಿ ಕಾರ್ಯಾಚರಣೆ ಮಾಡಬೇಕು. ಅಣುಕು ಕಾರ್ಯಾಚರಣೆ ಚೆನ್ನಾಗಿ ಮೂಡಿಬಂದಿದೆ. ನಮ್ಮ ಸಿದ್ಧತೆ ಏನೆಂಬುದು ಸಾರ್ವಜನಿಕರಿಗೆ ಗೊತ್ತಾಗಿದೆ
–ನಿಖಿಲ್‌ ಬಿ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.