ADVERTISEMENT

ಕೋಚಿಮುಲ್‌ ಚುನಾವಣೆ: ಮತದಾರರ ಓಲೈಕೆ

ರೋಚಕ ಘಟ್ಟ ತಲುಪಿದ ಕದನ ಕುತೂಹಲ: ಗೆಲುವಿಗಾಗಿ ತಂತ್ರ– ಪ್ರತಿತಂತ್ರ

​ಪ್ರಜಾವಾಣಿ ವಾರ್ತೆ
Published 10 ಮೇ 2019, 19:39 IST
Last Updated 10 ಮೇ 2019, 19:39 IST

ಕೋಲಾರ: ಕೋಲಾರ ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಕೋಚಿಮುಲ್) ಆಡಳಿತ ಮಂಡಳಿ ನಿರ್ದೇಶಕರ ಸ್ಥಾನದ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಅವಳಿ ಜಿಲ್ಲೆಯಲ್ಲಿ ಮತದಾರರ ಓಲೈಕೆ ಕಸರತ್ತು ಜೋರಾಗಿದೆ.

ಹಾಲು ಉತ್ಪಾದನೆಯಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿರುವ ಒಕ್ಕೂಟದಲ್ಲಿ ದಿನಕ್ಕೆ 10 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿದೆ. ಒಕ್ಕೂಟದ ವ್ಯಾಪ್ತಿಯ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 11 ತಾಲ್ಲೂಕುಗಳಲ್ಲಿ 2,063 ಸಾವಿರ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, 2,78,886 ಲಕ್ಷ ರೈತರು ಹೈನೋದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.

ಒಕ್ಕೂಟದ 13 ನಿರ್ದೇಶಕರ ಸ್ಥಾನಗಳಿಗೆ ಚುನಾವಣೆಗೆ ನಿಗದಿಯಾಗಿದ್ದು, ಈ ಪೈಕಿ 4 ಸ್ಥಾನಗಳಿಗೆ ಈಗಾಗಲೇ ಅವಿರೋಧ ಆಯ್ಕೆಯಾಗಿದೆ. ಉಳಿದ 9 ಸ್ಥಾನಗಳಿಗೆ ಮೇ 13ರಂದು ಮತದಾನ ನಡೆಯಲಿದೆ. ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘದ (ಎಂಪಿಸಿಎಸ್‌) ಅಧ್ಯಕ್ಷರಿಗೆ ಮಾತ್ರ ಈ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕಿದೆ. ಪ್ರತಿನಿತ್ಯ ಕೋಟಿಗಟ್ಟಲೆ ವಹಿವಾಟು ನಡೆಯುವ ಒಕ್ಕೂಟದಲ್ಲಿ ನಿರ್ದೇಶಕರಾಗುವ ಹಟಕ್ಕೆ ಬಿದ್ದಿರುವ ಅಭ್ಯರ್ಥಿಗಳು ಗೆಲುವಿಗಾಗಿ ಎದುರಾಳಿಗಳ ವಿರುದ್ಧ ತಂತ್ರ– ಪ್ರತಿತಂತ್ರ ಎಣೆಯುತ್ತಿದ್ದಾರೆ.

ADVERTISEMENT

ಕದನ ಕುತೂಹಲ ರೋಚಕ ಘಟ್ಟ ತಲುಪಿದ್ದು, ಮತದಾರ ಪ್ರಭುಗಳ ಕೃಪೆಗಾಗಿ ಅಭ್ಯರ್ಥಿಗಳು ಹಣ, ಆಭರಣ, ರೇಷ್ಮೆ ಸೀರೆ, ಮೊಬೈಲ್‌, ಕೈಗಡಿಯಾರದಂತಹ ಉಡುಗೊರೆಯ ಆಮಿಷವೊಡ್ಡುತ್ತಿದ್ದಾರೆ. ಮತ್ತೆ ಕೆಲ ಅಭ್ಯರ್ಥಿಗಳು ಮತದಾರರನ್ನು ಹೊರ ರಾಜ್ಯಗಳಿಗೆ ವಿಮಾನ, ಐಷಾರಾಮಿ ಬಸ್‌ ಹಾಗೂ ಕಾರುಗಳಲ್ಲಿ ಗುಟ್ಟಾಗಿ ಪ್ರವಾಸ ಕಳುಹಿಸಿದ್ದಾರೆ.

9 ನಿರ್ದೇಶಕರ ಸ್ಥಾನಕ್ಕೆ 21 ಮಂದಿ ಪೈಪೋಟಿ ನಡೆಸಿದ್ದು, ತಮ್ಮ ಪಕ್ಷದ ಶಾಸಕರು ಹಾಗೂ ಹಿರಿಯ ಮುಖಂಡರ ಮೂಲಕ ಮತದಾರರ ಮನವೊಲಿಕೆಗೆ ತೀವ್ರ ಕಸರತ್ತು ನಡೆಸಿದ್ದಾರೆ.

ಕಣದಲ್ಲಿರುವವರು: ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಹಾಲಿ ನಿರ್ದೇಶಕ ಎಂ.ಬೈರಾರೆಡ್ಡಿ, ಕೋಚಿಮುಲ್ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಎನ್‌.ಹನುಮೇಶ್, ಮಾಲೂರು ತಾಲ್ಲೂಕಿನಲ್ಲಿ ಕೋಚಿಮುಲ್ ಹಾಲಿ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ, ಮಾಜಿ ಅಧ್ಯಕ್ಷ ಎ.ವಿ.ಪ್ರಸನ್ನ, ಕೋಲಾರದಿಂದ ಹಾಲಿ ನಿರ್ದೇಶಕ ಆರ್.ರಾಮಕೃಷ್ಣೇಗೌಡ, ಜಿ.ಪಂ ಮಾಜಿ ಉಪಾಧ್ಯಕ್ಷ ಡಿ.ವಿ.ಹರೀಶ್‌ ಮತ್ತು ಎಚ್‌.ಸಿ.ಮುನಿಕೃಷ್ಣ, ಮುಳಬಾಗಿಲಿನಿಂದ ಹಾಲಿ ನಿರ್ದೇಶಕ ಆರ್‌.ಆರ್‌.ರಾಜೇಂದ್ರಗೌಡ, ಮಾಜಿ ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್ ಚುನಾವಣಾ ಕಣದಲ್ಲಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಿಂದ ಹಾಲಿ ನಿರ್ದೇಶಕ ಮುನಿಯಪ್ಪ ಮತ್ತು ಆರ್‌.ಶ್ರೀನಿವಾಸ್, ಚಿಕ್ಕಬಳ್ಳಾಪುರ ತಾಲ್ಲೂಕಿನಿಂದ ಒಕ್ಕೂಟದ ಹಾಲಿ ನಿರ್ದೇಶಕ ಮತ್ತು ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ಮತ್ತು ಎನ್‌.ಸಿ.ವೆಂಕಟೇಶ್, ಚಿಂತಾಮಣಿಯಿಂದ ಹಾಲಿ ನಿರ್ದೇಶಕ ವೈ.ಬಿ.ಅಶ್ವತ್ಥನಾರಾಯಣ, ಮಾಜಿ ಅಧ್ಯಕ್ಷ ಟಿ.ಎನ್‌.ರಾಜಗೋಪಾಲ್, ಬಾಗೇಪಲ್ಲಿಯಿಂದ ಜಿ.ಎಸ್‌.ಚೌಡರೆಡ್ಡಿ ಮತ್ತು ವಿ.ಮಂಜುನಾಥರೆಡ್ಡಿ, ಮಹಿಳಾ ಕ್ಷೇತ್ರದಿಂದ ಕೋಲಾರದಲ್ಲಿ ಆರ್‌.ಕಾಂತಮ್ಮ, ಸಿ.ರತ್ನಮ್ಮ, ಎಸ್‌.ಪ್ರಭಾವತಿ, ಎನ್‌.ಶಾಂತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.