ADVERTISEMENT

ಸಾರಿಗೆ ನೌಕರರ ಮುಷ್ಕರ; ಪ್ರಯಾಣಿಕರ ಪರದಾಟ

ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಸ್ಥಗಿತ; ಖಾಸಗಿ ಬಸ್‌, ಆಟೊ ಮೊರೆ ಹೋದ ಜನರು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 5:37 IST
Last Updated 6 ಆಗಸ್ಟ್ 2025, 5:37 IST
ಕೋಲಾರ ಬಸ್‌ ನಿಲ್ದಾಣದಲ್ಲಿ ಮಂಗಳವಾರ ಸಾರಿಗೆ ಬಸ್‌ಗಳು ಇಲ್ಲದೆ ಪ್ರಯಾಣಿಕರ ಪರದಾಟ
ಕೋಲಾರ ಬಸ್‌ ನಿಲ್ದಾಣದಲ್ಲಿ ಮಂಗಳವಾರ ಸಾರಿಗೆ ಬಸ್‌ಗಳು ಇಲ್ಲದೆ ಪ್ರಯಾಣಿಕರ ಪರದಾಟ   

ಕೋಲಾರ: 38 ತಿಂಗಳ ಹಿಂಬಾಕಿ ಬಿಡುಗಡೆ ಹಾಗೂ 2024ರ ಜ.1ರಿಂದ ವೇತನ ಪರಿಷ್ಕರಣೆ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮಂಗಳವಾರ ಮುಷ್ಕರ ನಡೆಸಿದ ಪರಿಣಾಮ ಇಡೀ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು.

ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯವರು ಮುಷ್ಕರಕ್ಕೆ ಕರೆ ನೀಡಿದ್ದರಿಂದ ಸಾರಿಗೆ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿದ್ದವು. ಇದರ ಬಿಸಿ ನೇರವಾಗಿ ಪ್ರಯಾಣಿಕರಿಗೆ ತಟ್ಟಿದ್ದು ದಿನವಿಡೀ ಪರದಾಡಿದರು. ವಿಧಿಯಿಲ್ಲದೆ ಖಾಸಗಿ ಬಸ್ ಹಾಗೂ ಆಟೋಗಳ ಮೊರೆ ಹೋದರು. ಶಕ್ತಿ ಯೋಜನೆ ಅನ್ವಯವಾಗದ ಕಾರಣ ಮಹಿಳೆಯರು ಮತ್ತು ಯುವತಿಯರು ಹಣ ನೀಡಿ ಪ್ರಯಾಣಿಸಬೇಕಾಯಿತು. ಕೆಲವು ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದರು.

ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಒಂದು ಬಸ್ಸಿನ ಗಾಜು ಹಾಗೂ ಹರಟಿ ಗೇಟ್‌ ಬಳಿ ಮತ್ತೊಂದು ಬಸ್ಸಿನ ಗಾಜು ಜಖಂ ಆಗಿದ್ದು ಬಿಟ್ಟರೆ ಉಳಿದೆಡೆ ಯಾವುದೇ ಅಹಿತಕರ ಘಟನೆ ಸಂಭವಿಸಲಿಲ್ಲ. ಈ ಮುಷ್ಕರದಿಂದ ನಿಗಮಕ್ಕೆ ಅಪಾರ ನಷ್ಟ ಉಂಟಾಗಿದೆ.

ADVERTISEMENT

ಹಲವೆಡೆ ಖಾಸಗಿ ಬಸ್ಸುಗಳು ಕಾರ್ಯಾಚರಣೆ ನಡೆಸಿದವು. ಜಿಲ್ಲಾಡಳಿತ, ಸಾರಿಗೆ ಸಂಸ್ಥೆಯಿಂದ ಪ್ರಯಾಣಿಕರಿಗೆ ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು. ಆದಾಗ್ಯೂ ಶಾಲಾ‌ ಕಾಲೇಜು ವಿದ್ಯಾರ್ಥಿಗಳು, ನೌಕರರು, ವ್ಯಾಪಾರಿಗಳು ಸರಿಯಾದ ಸಮಯಕ್ಕೆ ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡಿದರು. ಗಂಟೆಗಟ್ಟಲೇ ಕಾದರು. ಖಾಸಗಿ ವಾಹನಗಳಲ್ಲಿ ಟಿಕೆಟ್ ದರವೂ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿತ್ತು. ಜಿಲ್ಲಾಡಳಿತ, ಸಾರಿಗೆ ಸಂಸ್ಥೆಯಿಂದ ಪ್ರಯಾಣಿಕರಿಗೆ ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು.

ಆ.5ರಿಂದ ಬಸ್ ಮುಷ್ಕರ ನಡೆಸಲು ಕೆಲ ದಿನಗಳ ಹಿಂದೆಯೇ ಸಿದ್ಧತೆ ಮಾಡಿಕೊಂಡಿದ್ದ ಸಾರಿಗೆ ಸಂಸ್ಥೆಯ ನೂರಾರು ನೌಕರರು ಕರ್ತವ್ಯಕ್ಕೆ ಹಾಜರಾಗಲಿಲ್ಲ. ಹೀಗಾಗಿ, ಬೆಳಗ್ಗಿನಿಂದಲೇ ಪ್ರಯಾಣಿಕರು ಪರದಾಡಿದರು. ಸಾರಿಗೆ ಸಂಸ್ಥೆ ನೌಕರರ ಬಸ್ ಮುಷ್ಕರದ ಬಗ್ಗೆ ಅನೇಕ ಪ್ರಯಾಣಿಕರಿಗೆ ಮಾಹಿತಿಯೇ ಇರಲಿಲ್ಲ. ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕಾದು ಕಾದು ಸುಸ್ತಾದರು. ಇನ್ನು ಕೆಲವರು ಪರ್ಯಾಯ ವ್ಯವಸ್ಥೆ ಕಂಡುಕೊಂಡರು. ವಿವಿಧ ಸರ್ಕಲ್‍ಗಳಿಗೆ ತೆರಳಿ ಖಾಸಗಿ ಬಸ್ಸು ಹಾಗೂ ಆಟೋಗಳಲ್ಲಿ ತೆರಳಿದರು. ಸಕಾಲಕ್ಕೆ ಪ್ರಯಾಣ ಮಾಡಲು ಸಾಧ್ಯವಾಗದೆ ಪರದಾಡಿದರು.

ಸಾಮಾನ್ಯ ದಿನಗಳಲ್ಲಿ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣ ಮುಂಭಾಗದ ರಸ್ತೆಯಲ್ಲಿ ಸಾಗುತ್ತಿದ್ದ ಖಾಸಗಿ ಬಸ್ಸುಗಳು ಮಂಗಳವಾರ ಸಾರಿಗೆ ಸಂಸ್ಥೆಯ ನಿಲ್ದಾಣದೊಳಗೆ ಬಂದವು. ಖಾಸಗಿ ಬಸ್ ಬರುತ್ತಿದ್ದಂತೆಯೇ ಪೊಲೀಸರು ಪ್ರಶ್ನೆ ಮಾಡಿದರು. ಅನುಮತಿ ನೀಡಿರುವುದರಿಂದಲೇ ಬಂದಿರುವುದಾಗಿ ಬಸ್‍ನ ಚಾಲಕ, ನಿರ್ವಾಹಕರು ತಿಳಿಸಿದರು.

ನಂತರ ಹತ್ತಾರು ಖಾಸಗಿ ಬಸ್ಸುಗಳು ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬರಲಾರಂಭಿಸಿದವು. ಆಟೋಗಳು ಸಹ ಬರುತ್ತಿದ್ದವು. ಅಷ್ಟರಲ್ಲಿ ಪ್ರಯಾಣಿಕರ ಸಂಖ್ಯೆಯೂ ಕಡಿಮೆ ಆಗುತ್ತಾ ಬಂತು. ಕಾರಣ, ಸಾರಿಗೆ ನೌಕರರ ಮುಷ್ಕರದಿಂದಾಗಿ ನಿಲ್ದಾಣದಲ್ಲಿ ಬಸ್ಸುಗಳು ಬರುವುದಿಲ್ಲ ಎಂಬುದು ಗೊತ್ತಾಯಿತು. ಖಾಸಗಿ ಬಸ್‌ಗಳು ಸುಮಾರು ಹೊತ್ತು ಕಾದು ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದುದು ಕಂಡುಬಂದಿತು.

ಬೆಂಗಳೂರಿಗೆ ತೆರಳುವ ಪ್ರಯಾಣಿಕರು ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಕ್ಕಿಂತಲೂ ಕ್ಲಾಕ್ ಟವರ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದರು. ಚಿಕ್ಕಬಳ್ಳಾಪುರ, ಶ್ರೀನಿವಾಸಪುರ, ಚಿಂತಾಮಣಿ ಮಾರ್ಗದ ಪ್ರಯಾಣಿಕರು ಮೆಕ್ಕೆ ವೃತ್ತದಲ್ಲಿದ್ದರು. ಬಂಗಾರಪೇಟೆ, ಕೆಜಿಎಫ್ ಮಾರ್ಗದವರು ಕ್ಲಾಕ್ ಟವರ್, ಡೂಂಲೈಟ್, ಎಸ್‌ಎನ್‌ಆರ್‌ ವೃತ್ತದ್ದಲ್ಲಿದ್ದರು. ಮುಳಬಾಗಿಲು ಮಾರ್ಗದವರು ಮೆಕ್ಕೆ ವೃತ್ತ, ಕೋರ್ಟ್ ವೃತ್ತದಲ್ಲಿದ್ದು, ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸಿದರು.

ಮುಷ್ಕರದ ಹಿನ್ನೆಲೆಯಲ್ಲಿ ನಗರದ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣ, ಕೋಲಾರ ವಿಭಾಗೀಯ ಘಟಕ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ., ಎಎಸ್ಪಿ ರವಿಶಂಕರ್‌, ಪೊಲೀಸ್‌ ಇನ್‌ಸ್ಪೆಕ್ಟರ್‌ ಸದಾನಂದ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಲವು ಬಾರಿ ಸಂಚರಿಸಿ ಮಾಹಿತಿ ಪಡೆದರು. ಸಂಜೆ ವೇಳೆಗೆ ಸಾರಿಗೆ ಬಸ್‌ ಸಂಚಾರ ಪುನರಾರಂಭವಾಯಿತು.

ಕೋಲಾರ ಬಸ್‌ ನಿಲ್ದಾಣದಲ್ಲಿ ಮಂಗಳವಾರ ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿಗಳು
ಕೋಲಾರ ಕ್ಲಾಕ್‌ ಟವರ್‌ ಬಳಿ ಮಂಗಳವಾರ ಬಸ್ಸಿಗಾಗಿ ಎದುರು ನೋಡುತ್ತಿದ್ದ ಪ್ರಯಾಣಿಕರು
ಕೋಲಾರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಮಂಗಳವಾರ ಖಾಸಗಿ ಬಸ್ಸುಗಳದ್ದೇ ಕಾರುಬಾರು
ಕೋಲಾರ ತಾಲ್ಲೂಕಿನ ಹರಟಿ ಗೇಟ್‌ ಬಳಿ ಕೆಎಸ್‌ಆರ್‌ಟಿಸಿ ಬಸ್ಸಿಗೆ ಕಿಡಿಗೇಡಿಗಳಿಂದ ಕಲ್ಲೇಟು
ಕೋಲಾರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಮಂಗಳವಾರ ಖಾಸಗಿ ಬಸ್‌ ಹತ್ತಲು ಮುಂದಾದ ಪ್ರಯಾಣಿಕರು
ಕೋಲಾರದ ಕೆಎಸ್‌ಆರ್‌ಟಿಸಿ ಘಟಕಕ್ಕೆ ಭದ್ರತೆ ನೀಡಿದ್ದ ಪೊಲೀಸರು 

ಸಾರಿಗೆ ಬಸ್‌ ಸಂಚಾರ ಪುನರಾರಂಭ

ಸಾರಿಗೆ ಸಂಸ್ಥೆಯ ಬಸ್ಸುಗಳು ಸಂಚಾರ ಸಂಜೆ ವೇಳೆಗೆ ಪುನರಾರಂಭಗೊಂಡಿದ್ದು ಬುಧವಾರ ಎಂದಿನಂತೆ ಕಾರ್ಯಾಚರಣೆ ನಡೆಸಲಿವೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ನ್ಯಾಯಾಲಯದ ಮಧ್ಯಂತರ ತಡೆ ಆದೇಶದ ಮೇರೆಗೆ ಕಾರ್ಯಾಚರಣೆ ಮುಂದುವರಿಸಿದ್ದು ಆ.7ರಂದು ಮತ್ತೆ ವಿಚಾರಣೆ ನಡೆಯಲಿದೆ. ಬಳಿಕವಷ್ಟೆ ಮುಂದಿನ ಕ್ರಮ ವಹಿಸುತ್ತೇವೆ ಎಂದು ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾಸಮಿತಿ ಜಿಲ್ಲಾ ಘಟಕದ ಸದಸ್ಯರು ತಿಳಿಸಿದರು.

ಬಸ್ಸಿನ ಗಾಜು ಜಖಂ-ಪರಿಶೀಲನೆ

ಸಾರಿಗೆ ನೌಕರರ ಮುಷ್ಕರದ ವೇಳೆ ನಗರದ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದಲ್ಲಿದ್ದ ನಿಲ್ಲಿಸಿದ್ದ ಬಸ್ಸಿನ ಕಿಟಕಿಯ ಗಾಜು ಜಖಂಗೊಂಡಿದ್ದು ಸ್ಥಳಕ್ಕೆ ಕೂಡಲೇ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್ ಬಿ. ಕೆಎಸ್‌ಆರ್‌ಟಿಸಿ ಕೋಲಾರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ್‌ ಭೇಟಿ ನೀಡಿ ಪರಿಶೀಲಿಸಿದರು. ಆರಂಭದಲ್ಲಿ ಬಸ್ ನಿಲ್ದಾಣದ ಬಸ್‌ ನಿಲ್ಲಿಸಿಕೊಂಡಿದ್ದ ಕೆಲ ಚಾಲಕ–ನಿರ್ವಾಹಕರು ಕಾರ್ಯಾಚರಣೆಗೆ ‌ಹಿಂದೇಟು ಹಾಕಿದರು. ಅಲ್ಲದೆ ತಾವು ಡಿಫೋಗೆ ಹೋಗುತ್ತೇವೆಂದು ಬಸ್‌ ಕೊಂಡೊಯ್ದರು. ಪುನಃ ಬಸ್ ನಿಲ್ದಾಣಕ್ಕೆ ವಾಪಸ್ ಬಂದರು. ನಿಲ್ದಾಣದ ಕೊನೆಯ ಭಾಗದಲ್ಲಿ ನಿಲ್ಲಿಸಿಕೊಂಡಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ ಬಸ್ ಕಿಟಕಿಯ ಗಾಜು ಜಖಂಗೊಂಡಿದೆ. ಈ ಬಗ್ಗೆ ಕೇಳಲಾಗಿ ರಸ್ತೆ ಕಡೆಯಿಂದ ಕಿಡಿಗೇಡಿಗಳು ಕಲ್ಲು ಹಾಕಿರಬಹುದು ಎನ್ನುವ ವಿಚಾರ ಕೇಳಿಬಂದಿತು. ಆದರೆ ಅಲ್ಲಿ ಕಲ್ಲು ಇರಲಿಲ್ಲ. ಹೀಗಾಗಿ ಏರ್ ಕ್ರ್ಯಾಕ್ ಆಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು ತನಿಖೆ ನಡೆಸಲಾಗುತ್ತಿದೆ. ಕೋಲಾರ ತಾಲ್ಲೂಕಿನ ಹರಟಿ ಗೇಟ್ ಬಳಿ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಬೇತಮಂಗಲದಿಂದ ಕೋಲಾರದತ್ತ ಬರುತಿತ್ತು. ನಂಬರ್ ಪ್ಲೇಟ್ ಇಲ್ಲದ‌ ದ್ವಿಚಕ್ರ ವಾಹನದಲ್ಲಿ ಬಂದ ಮುಸುಕುಧಾರಿಗಳು ಬಸ್ಸಿನ ಮುಂದಿನ ಗಾಜಿಗೆ ಕಲ್ಲು ತೂರಿ ಪರಾರಿಯಾಗಿದ್ದಾರೆ. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದವರಿಗೆ ಬಸ್ ಮಾರ್ಗಗಳನ್ನು ನೀಡಿ ಕಳುಹಿಸಿಕೊಡಲಾಗಿತ್ತು. ಇದನ್ನು ತಿಳಿದ ಕೆಲವರು ಬಸ್‌ಗೆ ಕಲ್ಲು ತೂರಾಟ ನಡೆಸಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ.

ಬಸ್ಸಿನ ಗಾಜು ಪುಡಿ–ಕಾರಣ ಪತ್ತೆಗೆ ಕ್ರಮ

ಬಸ್‌ ನಿಲ್ದಾಣದಲ್ಲಿ ನಿಂತಿದ್ದ ಬಸ್ಸಿಗೆ ಕಲ್ಲು ಬಿದ್ದಿದೆ. ಬಿಸಿಲಿನಿಂದ ಅಥವಾ ಬೇರೆ ಯಾವುದಾದರೂ ಕಾರಣಕ್ಕೆ ಗಾಜು ಒಡೆದು ಹೋಗಿದೆಯೇ ಎಂಬುದರ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಬಸ್ಸಿನಲ್ಲಿ ಸಿಬ್ಬಂದಿ ಇದ್ದರು ಪ್ರಯಾಣಿಕರಾರೂ ಇರಲಿಲ್ಲ. ಗಾಜು ಒಡೆದ ಶಬ್ದ ಬಂದಿದೆ ಎಂಬುದಾಗಿ ಸಿಬ್ಬಂದಿ ಹೇಳಿದರು. ಜಿಲ್ಲೆಯಲ್ಲಿ ಸಾರಿಗೆ ಸಂಸ್ಥೆಯ ಒಟ್ಟು 17 ಬಸ್ಸುಗಳು ಕಾರ್ಯಾಚರಣೆ ನಡೆಸಿವೆ. ಪೊಲೀಸರು ಭದ್ರತೆ ಕಲ್ಪಿಸಿದ್ದಾರೆ. ಖಾಸಗಿ ಬಸ್ಸುಗಳು ಕೂಡ ಕಾರ್ಯಾಚರಣೆ ಮಾಡಿವೆ ಶ್ರೀನಾಥ್‌ ಕೆಎಸ್‌ಆರ್‌ಟಿಸಿ ಕೋಲಾರ ವಿಭಾಗೀಯ ನಿಯಂತ್ರಣಾಧಿಕಾರಿ

ಕೆಟ್ಟು ಹೆಸರು ತರಲು ಷಡ್ಯಂತ್ರ

‘ನಮ್ಮವರು ಯಾರೂ ಬಸ್ಸಿಗೆ ಕಲ್ಲು ಎಸೆದಿಲ್ಲ. ಹರಟಿ ಗೇಟ್ ಬಳಿ ಯಾರೋ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ನಮಗೆ ಕೆಟ್ಟ ಹೆಸರು ತರುವ ಷಡ್ಯಂತ್ರವಿದು. ನಮ್ಮ ಮುಷ್ಕರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಬಸ್‌ ನಿಲ್ದಾಣದಲ್ಲಿ ಬಸ್ಸಿನ ಗಾಜು ಬಿಸಿಲಿನಿಂದ ಸೀಳು ಬಿಟ್ಟಿರುವ ಸಾಧ್ಯತೆ ಇದೆ’ ಎಂದು ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾಸಮಿತಿ ಜಿಲ್ಲಾ ಘಟಕದ ಸದಸ್ಯರು ‘ಪ್ರಜಾವಾಣಿ’ಗೆ ತಿಳಿಸಿದರು. ಜಿಲ್ಲೆಯಲ್ಲಿ 520 ಬಸ್‌ಗಳೂ ಸಂಚಾರ ಸ್ಥಗಿತಗೊಳಿಸಿವೆ. ಸುಮಾರು 1750 ಸಿಬ್ಬಂದಿ ಹಾಗೂ ನೌಕರರಿದ್ದು ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.