ADVERTISEMENT

ಬೆಮಲ್‌ ವಿಸ್ತರಣೆಗೆ ನೂರು ಎಕರೆ ಕೊಡದ ಜಿಲ್ಲಾಡಳಿತ: ಸಂಸದ ಮಲ್ಲೇಶಬಾಬು ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 29 ಮೇ 2025, 13:56 IST
Last Updated 29 ಮೇ 2025, 13:56 IST
ಕೆಜಿಎಫ್‌ ಮೈನಿಂಗ್‌ ಪ್ರದೇಶದಲ್ಲಿ ಮರ ಬಿದ್ದು ಮೃತಪಟ್ಟ ಮಹಿಳೆ ಮನೆಗೆ ಸಂಸದ ಮಲ್ಲೇಶಬಾಬು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು
ಕೆಜಿಎಫ್‌ ಮೈನಿಂಗ್‌ ಪ್ರದೇಶದಲ್ಲಿ ಮರ ಬಿದ್ದು ಮೃತಪಟ್ಟ ಮಹಿಳೆ ಮನೆಗೆ ಸಂಸದ ಮಲ್ಲೇಶಬಾಬು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು   

ಕೆಜಿಎಫ್‌: ಕೇಂದ್ರ ಸ್ವಾಮ್ಯದ ಬೆಮಲ್‌ ಕಾರ್ಖಾನೆ ವಿಸ್ತರಣೆಗೆ ನೂರು ಎಕರೆ ಜಮೀನು ಬೇಕಾಗಿದೆ. ಅದನ್ನು ನೀಡುವಲ್ಲಿ ಜಿಲ್ಲಾಡಳಿತ ಇನ್ನೂ ಮೀನಮೇಷ ಎಣಿಸುತ್ತಿದೆ ಎಂದು ಸಂಸದ ಮಲ್ಲೇಶ ಬಾಬು ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜನವರಿ 8ರಂದು ಬೆಮಲ್‌ ಸಂಸ್ಥೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ನೂರು ಎಕರೆ ಜಮೀನು ಬೇಕಾಗಿದೆ. ಸಂಸ್ಥೆ ತನ್ನ ಕಾರ್ಯವ್ಯಾಪ್ತಿಯಲ್ಲಿ ವಿಸ್ತರಿಸಿಕೊಳ್ಳಬೇಕಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ. ಪ್ರತಿ ಎಕರೆಗೆ ₹6ಲಕ್ಷ ನೀಡಲು ಸಿದ್ಧದವಾಗಿದೆ. ಆದರೆ, ಇದುವರೆಗೂ ಜಿಲ್ಲಾಡಳಿತದಿಂದ ಜಾಗ ಗುರ್ತಿಸಿ ಕೊಡುವ ಕೆಲಸ ಆಗಿಲ್ಲ. ಬೆಮಲ್‌ ಸಂಸ್ಥೆಯಿಂದ ಬಲವಂತವಾಗಿ ತೆಗೆದುಕೊಂಡ ಜಮೀನು ಎಲ್ಲಿಗೆ ಹೋಗಿದೆ ಎಂಬುದು ಪ್ರಶ್ನೆಯಾಗಿದೆ ಎಂದು ತಿಳಿಸಿದರು.

ಬೆಮಲ್‌ ಕಾರ್ಖಾನೆಯನ್ನು ಮುಚ್ಚಲಾಗುತ್ತದೆ. ಅದರ ಘಟಕಗಳನ್ನು ಬೇರೆ ರಾಜ್ಯಗಳಿಗೆ ವರ್ಗಾಯಿಸಲಾಗುತ್ತದೆ ಎಂಬ ಸುಳ್ಳು ಸುದ್ದಿ ಹರಡುತ್ತಿದೆ. ಆದರೆ, ಬೆಮಲ್‌ ಯಾವುದೇ ಘಟಕಗಳು ಎಲ್ಲಿಗೂ ವರ್ಗಾವಣೆಯಾಗುತ್ತಿಲ್ಲ. ಬುಲೆಟ್‌ ಟ್ರೈನ್‌ ಕೋಚ್‌ಗಳನ್ನು ಮಧ್ಯಪ್ರದೇಶದಲ್ಲಿ, ಮೈನಿಂಗ್‌ ಉಪಕರಣಗಳನ್ನು ತಯಾರು ಮಾಡಲು ಜಾರ್ಖಂಡ್‌ನಲ್ಲಿ ಬೆಮಲ್‌ ಸಿದ್ಧತೆ ನಡೆಸುತ್ತಿದೆ. ಬೆಮಲ್‌ ಕೆಜಿಎಫ್‌ ಘಟಕದಲ್ಲಿ ಇನ್ನೂ ವಿಸ್ತರಣೆ ನಡೆಯುತ್ತಿದ್ದು ಹೊಸ ಹ್ಯಾಂಗರ್‌ ನಿರ್ಮಾಣ ಮಾಡಲಾಗುತ್ತಿದೆ. ಕೆಲ ಉಪಕರಣಗಳನ್ನು ಕೂಡ ತಯಾರು ಮಾಡಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಬೆಮಲ್‌ ಕಾರ್ಮಿಕ ಸಂಘಟನೆಗಳು ನೈಜ ಸಂಗತಿ ತಿಳಿದುಕೊಳ್ಳಬೇಕು. ಬೆಮಲ್‌ ಮುಚ್ಚಲಾಗುತ್ತದೆ, ವರ್ಗಾವಣೆ ಮಾಡಲಾಗುತ್ತದೆ ಎಂಬ ಸುಳ್ಳು ಸುದ್ದಿ ನಂಬಬಾರದು. ಪ್ರಚಾರ ಮಾಡಬಾರದು. ಗುತ್ತಿಗೆ ಕಾರ್ಮಿಕ ಸಮಸ್ಯೆ ಬಗೆಹರಿಸಲು ಕೇಂದ್ರ ಸಚಿವರ ಜೊತೆ ಕೂಡ ಮಾತನಾಡಲಾಗಿದೆ. ಆದರೆ, ಕಾರ್ಮಿಕ ಸಂಘಟನೆಗಳು ಗಮನಕ್ಕೆ ಯಾವುದನ್ನೂ ತರುತ್ತಿಲ್ಲ. ಐದು ತಿಂಗಳಿಂದ ಯಾವುದೇ ಕಾರ್ಮಿಕರು ಸಮಸ್ಯೆ ಹೇಳಿಕೊಂಡು ನನ್ನ ಬಳಿ ಬಂದಿಲ್ಲ ಎಂದರು.

ಬಿಜಿಎಂಎಲ್‌ ಕಾರ್ಮಿಕರು ಸ್ವಯಂ ನಿವೃತ್ತಿ ಆಗುವಾಗ ಷರತ್ತಿಗೆ ಸಹಿ ಹಾಕಿದ್ದಾರೆ. ಅದರಂತೆ ಒಬ್ಬರು ಒಂದು ಮನೆಯನ್ನು ಮಾತ್ರ ಇಟ್ಟುಕೊಳ್ಳಲು ಸಾಧ್ಯವಿದೆ. ಮನೆ ಖಾಲಿ ಮಾಡುವಂತೆ ಬಿಜಿಎಂಎಲ್‌ ನೀಡಿರುವ ನೋಟಿಸ್‌ ತೆಗೆದುಕೊಳ್ಳಬೇಕು. ಮುಂದೆ ನವದೆಹಲಿಯಲ್ಲಿ ನಡೆಯುವ ಉನ್ನತ ಮಟ್ಟದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸುವುದಾಗಿ ಹೇಳಿದರು.

ಇದಕ್ಕೂಮುನ್ನ ಕೆಜಿಎಫ್‌ ಮೈನಿಂಗ್‌ ಪ್ರದೇಶದಲ್ಲಿ ಮರ ಬಿದ್ದು ಮೃತಪಟ್ಟ ಮಹಿಳೆ ಮನೆಗೆ ಸಂಸದ ಮಲ್ಲೇಶಬಾಬು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು

ಕಾರ್ಮಿಕ ಮುಖಂಡ ಕೆ.ರಾಜೇಂದ್ರನ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.