ADVERTISEMENT

ಭಿನ್ನಾಭಿಪ್ರಾಯ ಬಿಟ್ಟು ಅಭ್ಯರ್ಥಿ ಗೆಲ್ಲಿಸಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 14:38 IST
Last Updated 5 ನವೆಂಬರ್ 2019, 14:38 IST

ಕೋಲಾರ: ‘ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಿನ್ನಾಭಿಪ್ರಾಯ ಬಿಟ್ಟು ನಗರಸಭೆ ಚುನಾವಣೆಗೆ ಸ್ಪರ್ಧಿಸಿರುವ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು’ ಎಂದು ಕಾಂಗ್ರೆಸ್‌ ಮುಖಂಡ ಸೈಯದ್‌ ಜಮೀರ್ ಪಾಷಾ ಹೇಳಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಾಂಗ್ರೆಸ್‌ನ ಮೂಲ ಕಾರ್ಯಕರ್ತರಿಗೆ ಬಿ ಫಾರಂ ನೀಡುವಲ್ಲಿ ಅನ್ಯಾಯವಾಗಿದೆ. ಮುಂದೆ ಈ ಅನ್ಯಾಯ ಸರಿಪಡಿಸುತ್ತೇವೆ. ಈ ನೋವು ಮರೆತು ಪಕ್ಷದ ಅಧಿಕೃತ ಅಭ್ಯರ್ಥಿಗಳ ಪರ ಪ್ರಚಾರ ನಡೆಸಬೇಕು’ ಎಂದು ಸಲಹೆ ನೀಡಿದರು.

‘ಟಿಕೆಟ್ ಸಿಗದೆ ಇರುವ ಪಕ್ಷಕ್ಕಾಗಿ ದುಡಿದ ನಾಯಕರಿಗೆ ಚುನಾವಣೆ ನಂತರ ಸೂಕ್ತ ಸ್ಥಾನಮಾನ ನೀಡುತ್ತೇವೆ. ಅಭ್ಯರ್ಥಿಗಳು ಅವರ ಬೆಂಬಲಿಗರು ಮತ್ತು ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣಾ ಪ್ರಚಾರ ನಡೆಸಬೇಕು. ಆಗ ಮಾತ್ರ ನಗರಸಭೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯ’ ಎಂದರು.

ADVERTISEMENT

‘ಪಕ್ಷದ ಸ್ಥಳೀಯ ಮುಖಂಡರಲ್ಲಿ ಭಿನ್ನಾಭಿಪ್ರಾಯ ಇರುವುದು ಸಹಜ. ಈ ಸಂಗತಿಯನ್ನು ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತರಲಾಗಿದೆ.  ಪಕ್ಷಕಿಂತ ಯಾರು ದೊಡ್ಡವರಲ್ಲ. ಪಕ್ಷದ ಹಿತ ರಕ್ಷಣೆಯಷ್ಟೇ ಮುಖ್ಯ. ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳಿಗೆ ಬಿ ಫಾರಂ ನೀಡಲು ಯಾರೂ ಹಣ ಪಡೆದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಯು ಜನ ವಿರೋಧಿ ನೀತಿ ಅನುಸರಿಸುತ್ತಿದೆ. ಮುಂದಿನ 6 ತಿಂಗಳಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಬರಲಿದ್ದು, ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರದ ಗದ್ದುಗೆ ಹಿಡಿಯುತ್ತದೆ. ಆದ ಕಾರಣ ಕಾರ್ಯಕರ್ತರು ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಕಾಂಗ್ರೆಸ್‌ ಮುಖಂಡರಾದ ತಬ್ರೇಜ್‌, ಸಮೀರ್, ರಫೀಕ್,ನಾಜೀರ್, ಮಂಜುನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.