ADVERTISEMENT

ಪಕ್ಷ ಬೇದ ಬಿಟ್ಟು ಕೆಲಸ ಮಾಡಿ: ಸಂಸದ ಮುನಿಸ್ವಾಮಿ

ಸಂಸದ ಎಸ್.ಮುನಿಸ್ವಾಮಿ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2020, 13:11 IST
Last Updated 1 ಮಾರ್ಚ್ 2020, 13:11 IST
ಕೋಲಾರ ನಗರಸಭೆಯಿಂದ ಭಾನುವಾರ ಆಯೋಜಿಸಿದ್ದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಂಸದ ಎಸ್.ಮುನಿಸ್ವಾಮಿ ವಿದ್ಯಾರ್ಥಿಗಳಿಗೆ ಚೆಕ್ ವಿತರಿಸಿದರು.
ಕೋಲಾರ ನಗರಸಭೆಯಿಂದ ಭಾನುವಾರ ಆಯೋಜಿಸಿದ್ದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಂಸದ ಎಸ್.ಮುನಿಸ್ವಾಮಿ ವಿದ್ಯಾರ್ಥಿಗಳಿಗೆ ಚೆಕ್ ವಿತರಿಸಿದರು.   

ಕೋಲಾರ: ‘ಚುನಾವಣೆಯಲ್ಲಿ ಆಯ್ಕೆಯಾದ ನಂತರ ಸದಸ್ಯರು ಪಕ್ಷ ಬೇದ ಬಿಟ್ಟು ಕೆಲಸ ಮಾಡಿದಾಗ ಸಮಾಜದಲ್ಲಿ ಗೌರವ ಉಳಿಸಿಕೊಳ್ಳಲು ಸಾಧ್ಯ’ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.

ನಗರದಲ್ಲಿ ನಗರಸಭೆಯಿಂದ ಭಾನುವಾರ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಹಿಂದೆ ಚುನಾಯಿತರಾದವರು ನಿಮಗೆ ಹೇಗೆ ಬುದ್ದಿ ಕಲಿಸಿದ್ದಾರೋ ಗೊತ್ತಿಲ್ಲ. ನನ್ನ ಅವಧಿಯಲ್ಲಿ ಅಂತಹದ್ದಕ್ಕೆ ಆಸ್ಪದ ಇಲ್ಲ’ ಎಂದರು.

‘ನಗರದಲ್ಲಿ ಎಲ್ಲೆಂದರಲ್ಲಿ ಬಡಾವಣೆಗಳು ನಿರ್ಮಾಣವಾಗುತ್ತಿದ್ದು, ಸೌಕರ್ಯಗಳನ್ನು ಕಲ್ಪಿಸುತ್ತಿಲ್ಲ. ನೂತನ ಬಡಾವಣೆಗಳಿಗೆ ಅನುಮತಿ ಕೊಡುವ ಮೊದಲು ಶಾಸಕರ ಮತ್ತು ನನ್ನ ಗಮನಕ್ಕೆ ತರಬೇಕು. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಜಮೀನುಗಳಿಗೆ ನಕಲಿ ದಾಖಲೆ ಸೃಷಿಸಿ ಬಡಾವಣೆ ನಿರ್ಮಿಸಿ ದುಡ್ಡು ಮಾಡಿಕೊಂಡು ಹೋಗುತ್ತಿದ್ದಾರೆ, ಇನ್ನು ಮುಂದೆ ಇದಕ್ಕೆ ಅನುಮತಿ ನೀಡಬಾರದು’ ಎಂದು ಸೂಚಿಸಿದರು.

ADVERTISEMENT

‘ಎಲ್ಲೆಂದರಲ್ಲಿ ಚಿಕನ್, ಮಟನ್ ಮಾರಾಟ ನಡೆಯುತ್ತಿದೆ, ಸ್ವಚ್ಛತೆ ಕಾಯ್ದುಕೊಳ್ಳದ ಅಂಗಡಿಗಳ ಪರವಾನಗಿ ರದ್ದುಪಡಿಸಬೇಕು. ಕೆರೆ ಸುತ್ತಮುತ್ತಲ ಪ್ರದೇಶದಲ್ಲಿ ಮಾಂಸದ ತ್ಯಾಜ್ಯ ಸುರಿಯುವ ವಾಹನಗಳನ್ನು ಜಫ್ತಿ ಮಾಡಿಕೊಳ್ಳಬೇಕು’ ಎಂದು ತಾಕೀತು ಮಾಡಿದರು.

‘ಅಮೃತ್ ಸಿಟಿ ಯೋಜನೆಯಡಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಅವೈಜ್ಞಾನಿಕವಾಗಿದೆ. ಅಗೆದ ಮಣ್ಣನ್ನು ಸರಿಯಾಗಿ ಮುಚ್ಚಿಲ್ಲ. ಆಯಾ ವಾರ್ಡ್ ಸದಸ್ಯರು ನಮ್ಮ ನಗರ ಎಂಬ ಮನೋಭಾವನೆಯಿಂದ ಮುಂದೆ ನಿಂತು ಕೆಲಸ ಮಾಡಿದರೆ ಗುಣಮಟ್ಟ ಕಾಯ್ದುಕೊಳ್ಳಬಹುದು’ ಎಂದು ಹೇಳಿದರು.

ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ‘ನಗರದ ಸ್ವಚ್ಛತೆ, ಕುಡಿಯುವ ನೀರು ನೀಡಿದರೆ ನಗರಸಭೆಗೆ ಹಾಗೂ ಸದಸ್ಯರಿಗೆ ಗೌರವ ಬರುತ್ತದೆ’ ಎಂದು ತಿಳಿಸಿದರು.

‘ನಗರದಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಯರಗೋಳ್ ಯೋಜನೆಯ ಡ್ಯಾಂ ನಿರ್ಮಾಣ ಪೂರ್ಣಗೊಂಡಿದ್ದು, ಪಂಪ್‌ ಹೌಸ್ ನಿರ್ಮಾಣ ಕೆಲಸ ನಡೆಯುತ್ತಿದೆ. ಮೂರು ತಿಂಗಳೊಳಗೆ ಉದ್ಘಾಟನೆಯಾಗುತ್ತದೆ. ಕೆಸಿ ವ್ಯಾಲಿ ನೀರು ಅಮ್ಮೇರಹಳ್ಳಿ ಕೆರೆಗೆ ಹರಿಯುತ್ತಿದ್ದು, ಬತ್ತಿ ಹೋಗಿರುವ ಕೊಳವೆಬಾವಿಗಳು ಮರುಪೂರ್ಣಗೊಳ್ಳುತ್ತವೆ. ಇದರಿಂದ ನೀರಿನ ಸಮಸ್ಯೆಯೂ ಬಗೆಹರಿಯುತ್ತದೆ’ ಎಂದು ಹೇಳಿದರು.

ಪೌರಾಯುಕ್ತ ಶ್ರೀಕಾಂತ್ ಮಾತನಾಡಿ, ‘ಶೇ.24.10, ಶೇ.7.25ಹಾಗೂ ಶೇ.5ರ ಯೋಜನೆಯಲ್ಲಿ 527ವಿದ್ಯಾರ್ಥಿಗಳಿಗೆ ₹41.37ಲಕ್ಷ ಸಹಾಯಧನ ನೀಡಲಾಗುತ್ತಿದೆ’ ಎಂದು ತಿಳಿಸಿದರು.

ಸದಸ್ಯರಾದ ಎನ್.ಅಂಬರೀಶ್, ಪ್ರವೀಣ್‌ಗೌಡ, ನಾರಾಯಣಮ್ಮ, ಎಂ.ಸುರೇಶ್‌ಬಾಬು, ಜಿ.ಎಸ್.ಪಾವನ, ವಿ.ಮಂಜುನಾಥ್, ಸಿ.ರಾಕೇಶ್, ಮುರಳಿಗೌಡ, ಬಿ.ಅಸ್ಲಂಪಾಷ, ಹಿದಾಯಿತುಲ್ಲಾ, ಅಜರ್ ನಸ್ರೀನ್, ಕೆ.ವಿ.ಮಂಜುನಾಥ್, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಎಂ.ರಂಗಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.