ಮುಳಬಾಗಿಲು: ನಗರದ ಸುಂಕು ಬಡಾವಣೆಯ ಜಿ.ಜಿ.ಫ್ಯಾಷನ್ಸ್ ಎಂಬ ಬಟ್ಟೆ ಹಾಗೂ ಚಪ್ಪಲಿ ಅಂಗಡಿಗೆ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ಬಟ್ಟೆಗಳನ್ನು ಹಾಗೂ ಚಪ್ಪಲಿಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಘಟನೆ ಸೋಮವಾರ ಮಧ್ಯರಾತ್ರಿ ನಡೆದಿದೆ.
ಮುಳಬಾಗಿಲು ನಗರದ ಗೋವರ್ಧನ ರೆಡ್ಡಿ ಎಂಬುವವರಿಗೆ ಸೇರಿದ ಜಿ.ಜಿ.ಫ್ಯಾಷನ್ಸ್‌ನಲ್ಲಿ ಶನಿವಾರ ಬೆಂಗಳೂರಿನಿಂದ ಸುಮಾರು ₹6 ಲಕ್ಷ ಮೌಲ್ಯದ ಬಟ್ಟೆ ಹಾಗೂ ಚಪ್ಪಲಿಗಳನ್ನು ತರಿಸಲಾಗಿತ್ತು. ಅಂಗಡಿಯಲ್ಲಿ ಈ ವಸ್ತುಗಳನ್ನೆಲ್ಲಾ ವ್ಯಾಪಾರಕ್ಕಾಗಿ ಜೋಡಿಸಿ ಎಂದಿನಂತೆ ವ್ಯಾಪಾರ ಮುಗಿಸಿಕೊಂಡು ಮನೆಗೆ ಹೋಗಿದ್ದಾರೆ. ಸೋಮವಾರ ರಾತ್ರಿ 1.30ರ ಸುಮಾರಿಗೆ ಕಳ್ಳರು ಕಾರಿನಲ್ಲಿ ಬಂದು ಅಂಗಡಿ ಬಾಗಿಲು ಒಡೆದು ಬಟ್ಟೆ ಹಾಗೂ ಚಪ್ಪಲಿಗಳನ್ನು ಕಾರಿನಲ್ಲಿ ತುಂಬಿಸಿಕೊಂಡು ಹೋಗಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ನಗರ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ರಾಜಣ್ಣ, ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಹೆಚ್ಚುತ್ತಿರುವ ಪ್ರಕರಣಗಳು: ಇದೇ ಸುಂಕು ಬಡಾವಣೆಯಲ್ಲಿ ಇತ್ತೀಚೆಗೆ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರ ಕೊಲೆ ಪ್ರಕರಣ ನಡೆದಿತ್ತು. ವಿಠಲೇಶ್ವರ ಪಾಳ್ಯದ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದರು. ನಗರದಲ್ಲಿ ಅಪಘಾತಗಳು, ಗಾಂಜಾ ಪ್ರಕರಣಗಳು, ಬೆಟ್ಟಿಂಗ್ ಮತ್ತಿತರ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಪೊಲೀಸ್ ವ್ಯವಸ್ಥೆಗೆ ಚುರುಕು ಮುಟ್ಟಿಸಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.