ADVERTISEMENT

ಖಾತೆ ಬದಲಾವಣೆ ಬಗ್ಗೆ ಯಾವುದೇ ಅಸಮಾಧಾನವಿಲ್ಲ: ಸಚಿವ ಸಿ.ಪಿ.ಯೋಗೇಶ್ವರ್

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 12:18 IST
Last Updated 26 ಜನವರಿ 2021, 12:18 IST
ಪ್ರವಾಸೋದ್ಯಮ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಸಚಿವ ಸಿ.ಪಿ.ಯೋಗೇಶ್ವರ್
ಪ್ರವಾಸೋದ್ಯಮ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಸಚಿವ ಸಿ.ಪಿ.ಯೋಗೇಶ್ವರ್    

ಕೋಲಾರ: ‘ನನಗೆ ಸಚಿವ ಸ್ಥಾನ ಸಿಕ್ಕಿರುವುದು ತೃಪ್ತಿ ತಂದಿದೆ. ರಾಜ್ಯದ ಯಾವುದೇ ಜಿಲ್ಲೆಯ ಉಸ್ತುವಾರಿ ನೀಡಿದರೂ ಕೆಲಸ ಮಾಡಲು ಸಂಪೂರ್ಣ ಸಿದ್ಧನಿದ್ದೇನೆ’ ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.

ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೋಲಾರ ಜಿಲ್ಲೆಯ ಉಸ್ತುವಾರಿ ಆದರೇನು, ರಾಮನಗರ ಜಿಲ್ಲೆಯ ಉಸ್ತುವಾರಿ ನೀಡಿದರೇನು? ಈ ಎರಡೂ ಜಿಲ್ಲೆಗಳು ಕರ್ನಾಟಕದಲ್ಲೇ ಇವೆ. ಕೋಲಾರ ಜಿಲ್ಲೆಯ ಜವಾಬ್ದಾರಿ ವಹಿಸಿದರೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ’ ಎಂದು ತಿಳಿಸಿದರು.

‘ಸಚಿವ ಸಂಪುಟ ಸರಿದೂಗಿಸಲು ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಖಾತೆ ಬದಲಾವಣೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಖಾತೆ ಹಂಚಿಕೆ ಅಥವಾ ಬದಲಾವಣೆಯಲ್ಲಿ ಒತ್ತಡ ಎದುರಿಸಬೇಕಾಗುತ್ತದೆ. ಮುಖ್ಯಮಂತ್ರಿಗಳು ನನ್ನ ಖಾತೆ ಬದಲಿಸಿದ್ದಕ್ಕೆ ಅಸಮಾಧಾನವಿಲ್ಲ. ಬೇರೊಬ್ಬರ ಬಗ್ಗೆ ಮಾತನಾಡುವುದಿಲ್ಲ’ ಎಂದರು.

ADVERTISEMENT

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡಲು ಅಡ್ಡಿಯಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಟ್ರ್ಯಾಕ್ಟರ್‌ ಪರೇಡ್‌ ನಡೆಸುವುದು ಬೇಡವೆಂದು ರೈತ ಸಂಘಟನೆಗಳ ಮುಖಂಡರಿಗೆ ಸಲಹೆ ನೀಡಿದ್ದೆವು. ಪರೇಡ್‌ನಿಂದ ವಾಹನ ಸಂಚಾರಕ್ಕೆ ಮತ್ತು ಜನರ ಓಡಾಟಕ್ಕೆ ಸಮಸ್ಯೆಯಾಗುವುದನ್ನು ತಪ್ಪಿಸಲು ರೈತ ಮುಖಂಡರ ಮನವೊಲಿಸುವ ಪ್ರಯತ್ನ ಮಾಡಲಾಯಿತು’ ಎಂದು ಸ್ಪಷ್ಟಪಡಿಸಿದರು.

‘ಕೋಲಾರ ಜಿಲ್ಲೆಯ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ಇಲ್ಲಿನ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡುತ್ತೇನೆ. ಅಭಿವೃದ್ಧಿ ವಿಚಾರದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.