ADVERTISEMENT

ಆಪರೇಷನ್‌ ಕಮಲ: ವರಿಷ್ಠರು ಎಚ್ಚೆತ್ತುಕೊಳ್ಳಲಿಲ್ಲ

​ಪ್ರಜಾವಾಣಿ ವಾರ್ತೆ
Published 17 ಜುಲೈ 2019, 20:08 IST
Last Updated 17 ಜುಲೈ 2019, 20:08 IST

ಕೋಲಾರ: ‘ಬಿಜೆಪಿಯು ನನಗೆ ಹಣದ ಆಮಿಷವೊಡ್ಡಿ ಕುದುರೆ ವ್ಯಾಪಾರ ಆರಂಭಿಸಿದಾಗಲೇ ಆ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದಿದ್ದರಿಂದ ರಾಜ್ಯದಲ್ಲಿ ಈಗ ಈ ರಾಜಕೀಯ ಬೆಳವಣಿಗೆ ನಡೆದಿದೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.

ಇಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಪಕ್ಷದ ವರಿಷ್ಠರು ಆಪರೇಷನ್‌ ಕಮಲ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಹೀಗಾಗಿ ಕಾಂಗ್ರೆಸ್ ಶಾಸಕರ ಜತೆ ಜೆಡಿಎಸ್ ಶಾಸಕರೂ ಆಪರೇಷನ್‌ ಕಮಲಕ್ಕೆ ಒಳಗಾಗಿ ರಾಜೀನಾಮೆ ಕೊಟ್ಟು ಮುಂಬೈಗೆ ಹೋಗಿದ್ದಾರೆ’ ಎಂದು ಕಿಡಿಕಾರಿದರು.

‘ಬಿಜೆಪಿ ಮುಖಂಡರು ಸಮ್ಮಿಶ್ರ ಸರ್ಕಾರ ಕೆಡವಲು ನಿನ್ನೆ ಮೊನ್ನೆಯಿಂದ ಕುದುರೆ ವ್ಯಾಪಾರಕ್ಕೆ ಮುಂದಾಗಿಲ್ಲ. ಸರ್ಕಾರ ರಚನೆಯಾದ ದಿನದಿಂದಲೂ ನಿರಂತರವಾಗಿ ಆ ಪ್ರಯತ್ನ ಮಾಡುತ್ತಿದ್ದಾರೆ. ನನ್ನನ್ನು ಅವರ ಪಕ್ಷಕ್ಕೆ ಸೆಳೆದುಕೊಳ್ಳಲು ₹ 5 ಕೋಟಿ ಕೊಟ್ಟಿದ್ದರು. ಆದರೆ, ನಾನು ಅದಕ್ಕೆ ಒಪ್ಪದೆ ಹಣ ವಾಪಸ್ ಕಳುಹಿಸಿದ್ದೆ. ಅಲ್ಲದೇ, ಈ ಸಂಗತಿಯನ್ನು ಪಕ್ಷದ ವರಿಷ್ಠರ ಗಮನಕ್ಕೂ ತಂದಿದ್ದೆ’ ಎಂದು ತಿಳಿಸಿದರು.

ADVERTISEMENT

‘ಬಿಜೆಪಿ ಮುಖಂಡರು ಮೈತ್ರಿ ಸರ್ಕಾರದ ಪಕ್ಷಗಳ ಶಾಸಕರ ಖರೀದಿ ಪ್ರಯತ್ನ ಆರಂಭಿಸಿದಾಗಲೇ ಕಾಂಗ್ರೆಸ್‌ ಮತ್ತು ಜೆಡಿಎಸ್ ವರಿಷ್ಠರು ಎಚ್ಚೆತ್ತುಕೊಂಡಿದ್ದರೆ ಇಂದು ಸರ್ಕಾರಕ್ಕೆ ಈ ಪರಿಸ್ಥಿತಿ ಬರುತ್ತಿರಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದ್ರೋಹ ಬಗೆಯಬಾರದು: ‘ಶಾಸಕರಾಗಿ ಆಯ್ಕೆಯಾದ ಬಳಿಕ ಜನರಿಗೆ, ಪಕ್ಷಕ್ಕೆ ದ್ರೋಹ ಬಗೆಯಬಾರದು. ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಇನ್ನೂ ಕಾಲಾವಕಾಶ ಇರುವುದರಿಂದ ಅತೃಪ್ತ ಶಾಸಕರು ಕೂಡಲೇ ವಾಪಸ್‌ ಬಂದು ಪಕ್ಷ ನಿಷ್ಠರಾಗಿ ನಡೆದುಕೊಳ್ಳಬೇಕು. ಅವರಿಗೆ ಇನ್ನಾದರೂ ಒಳ್ಳೆಯ ಬುದ್ಧಿ ಬರಲಿ’ ಎಂದರು.

‘ನಾನು ರಾಜಕೀಯ ಮುತ್ಸದಿಗಳಾದ ದಿವಂಗತ ಸಿ.ಬೈರೇಗೌಡರು, ವೆಂಕಟಗಿರಿಯಪ್ಪನವರ ಹಾದಿಯಲ್ಲಿ ಬೆಳೆದು ಬಂದಿರುವವನು. ಗೆದ್ದಾಗಲೂ ಸೋತಾಗಲೂ ಜನರೊಂದಿಗೆ ಇದ್ದೇನೆ. ಹೀಗಾಗಿ ನನ್ನನ್ನು ಹಣಕ್ಕೆ ಖರೀದಿಸಲು ಆಗುವುದಿಲ್ಲ. ಸುಪ್ರೀಂ ಕೋರ್ಟ್‌ನ ತೀರ್ಪು ಆಧರಿಸಿ ವರಿಷ್ಠರು ಕ್ರಮ ಕೈಗೊಳ್ಳಲಿದ್ದು, ಸರ್ಕಾರದ ಅಳಿವು ಉಳಿವು ಅವರ ಕೈಯಲ್ಲಿದೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.