ADVERTISEMENT

ನೀರಿನ ಸಮಸ್ಯೆಗೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 4:57 IST
Last Updated 28 ನವೆಂಬರ್ 2022, 4:57 IST
ಬಂಗಾರಪೇಟೆ ದೇಶಿಹಳ್ಳಿಯಲ್ಲಿ ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸಿ ಮಹಿಳೆಯರು ಬೀದಿಯಲ್ಲಿ ಬಿಂದಿಗೆ ಇಟ್ಟು ಆಕ್ರೋಶ ವ್ಯಕ್ತಪಡಿಸಿದರು
ಬಂಗಾರಪೇಟೆ ದೇಶಿಹಳ್ಳಿಯಲ್ಲಿ ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸಿ ಮಹಿಳೆಯರು ಬೀದಿಯಲ್ಲಿ ಬಿಂದಿಗೆ ಇಟ್ಟು ಆಕ್ರೋಶ ವ್ಯಕ್ತಪಡಿಸಿದರು   

ಬಂಗಾರಪೇಟೆ: ಪಟ್ಟಣದ ದೇಶಿಹಳ್ಳಿಯಲ್ಲಿ ಸಮರ್ಪಕವಾಗಿ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿದ ಮಹಿಳೆಯರು ಬೀದಿಯಲ್ಲಿ ಖಾಲಿ ಕೊಡ ಇಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಬಡಾವಣೆಗೆ 15 ದಿನದಿಂದ ಸರಿಯಾಗಿ ನೀರು ಪೂರೈಕೆ ಮಾಡುತ್ತಿಲ್ಲ. ಮೂರ್ನಾಲ್ಕು ದಿನದಿಂದ ಬೀದಿ ನಲ್ಲಿ ಮುಂದೆ ಬಿಂದಿಗೆ ಇಟ್ಟು ಕಾಯುವ ಸ್ಥಿತಿ ಒದಗಿದೆ. ವಾಟರ್‌ಮ್ಯಾನ್ ಕರೆ ಮಾಡಿದರೂ ಸ್ವೀಕರಿಸುವುದಿಲ್ಲ. ನಮ್ಮ ಸಮಸ್ಯೆಗೆ ಯಾರೂ ಸ್ಪಂದಿಸುತ್ತಿಲ್ಲಲ್ಲೆಂದು ಅಸಮಾಧಾನ ವ್ಯಕ್ತಪಡಿಸಿದರು.

ಕೆರೆ, ಕೊಳವೆಬಾವಿಯಲ್ಲಿ ನೀರಿಲ್ಲದ ಸಂದರ್ಭ ಅಲ್ಪಸ್ವಲ್ಪವಾದರೂ ಸಮಯಕ್ಕೆ ಸರಿಯಾಗಿ ನೀರು ಪೂರೈಕೆ ಮಾಡುತ್ತಿದ್ದರು. ಆದರೆ ಈಗ ಕೆರೆ, ಕೊಳವೆಬಾವಿ ತುಂಬಾ ನೀರಿದ್ದರೂ ನಲ್ಲಿಯಲ್ಲಿ ನೀರು ಬಿಡುತ್ತಿಲ್ಲ. ನೀರು ಇಲ್ಲದೆ ಯಾವುದೇ ಕೆಲಸ ಮಾಡಲಾಗುತ್ತಿಲ್ಲ ಎಂದು ಅವಲತ್ತುಕೊಂಡರು.

ADVERTISEMENT

ಬಡಾವಣೆಯಲ್ಲಿ ನೀರಿಗೆ ಹಾಹಾಕಾರ ಎದ್ದಿದೆ. ಪುರಸಭೆಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು, ಹಾಗೂ ಪುರಸಭೆ ಸದಸ್ಯರ ನಿರ್ಲಕ್ಷ್ಯದಿಂದಾಗಿ ಸಮಸ್ಯೆ ಉಂಟಾಗಿದೆ ಎಂದರು.

ಪುರಸಭೆ ಆಡಳಿತ ಸಮರ್ಪಕವಾಗಿ ನೀರು ಪೂರೈಕೆ ಮಾಡದಿದ್ದರೆ ದೇಶಿಹಳ್ಳಿಯಿಂದ ಕಾಲ್ನಡಿಗೆ ಜಾಥಾ ನಡೆಸಿ ಪುರಸಭೆ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.

‘ಬಡಾವಣೆಯಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ. ಚರಂಡಿಗಳು ಸ್ವಚ್ಛತೆ ಇಲ್ಲದೆ ದುರ್ವಾಸನೆ ಬೀರುತ್ತಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ’ ಎಂದು ಅಮರಮ್ಮ
ಹೇಳಿದರು.

‘ನೀರಿನ ಸಮಸ್ಯೆ ಬಗ್ಗೆ ಹಲವು ಬಾರಿ ಪುರಸಭೆಗೆ ದೂರು ನೀಡಿದ್ದೇವೆ. ಆದರೆ ಸಮಸ್ಯೆ ಬಗೆಹರಿದಿಲ್ಲ. ವಾಟರ್‌ಮ್ಯಾನ್ ಗೆ ಕರೆ ಮಾಡಿದರೂ ಸ್ವೀಕರಿಸುವುದಿಲ್ಲ’ ಎಂದು ಪ್ರಭಾಕರ್ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.