ADVERTISEMENT

ವಿಜ್ಞಾನದ ಪ್ರಾಯೋಗಿಕ ಕಲಿಕೆ ಮುಖ್ಯ

ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿ: ಬಿಇಒ ವೆಂಕಟರಾಮರೆಡ್ಡಿ ಸಲಹೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 16:10 IST
Last Updated 17 ನವೆಂಬರ್ 2021, 16:10 IST
ಕೆ.ಸಿ.ರೆಡ್ಡಿ ಸರೋಜಮ್ಮ ಪ್ರತಿಷ್ಠಾನವು ಕೋಲಾರ ತಾಲ್ಲೂಕಿನ ನರಸಾಪುರ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಶಿಕ್ಷಕರಿಗೆ ಬುಧವಾರ ಹಮ್ಮಿಕೊಂಡಿದ್ದ ವಿಜ್ಞಾನ ಕಾರ್ಯಾಗಾರವನ್ನು ಬಿಇಒ ವೆಂಕಟರಾಮರೆಡ್ಡಿ ಉದ್ಘಾಟಿಸಿದರು
ಕೆ.ಸಿ.ರೆಡ್ಡಿ ಸರೋಜಮ್ಮ ಪ್ರತಿಷ್ಠಾನವು ಕೋಲಾರ ತಾಲ್ಲೂಕಿನ ನರಸಾಪುರ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಶಿಕ್ಷಕರಿಗೆ ಬುಧವಾರ ಹಮ್ಮಿಕೊಂಡಿದ್ದ ವಿಜ್ಞಾನ ಕಾರ್ಯಾಗಾರವನ್ನು ಬಿಇಒ ವೆಂಕಟರಾಮರೆಡ್ಡಿ ಉದ್ಘಾಟಿಸಿದರು   

ಕೋಲಾರ: ‘ಮಕ್ಕಳಿಗೆ ವಿಜ್ಞಾನದ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಕಲಿಕೆ ಬಹಳ ಮುಖ್ಯವಾಗಿದ್ದು, ಶಿಕ್ಷಕರು ವಿಜ್ಞಾನದ ಬಗ್ಗೆ ಮಕ್ಕಳಿಗೆ ಹೆಚ್ಚಿನ ಅರಿವು ನೀಡಬೇಕು. ಶಾಲೆಗಳಲ್ಲಿ ಪ್ರಾಯೋಗಿಕ ಸಲಕರಣೆ ಬಳಸಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟರಾಮರೆಡ್ಡಿ ಸಲಹೆ ನೀಡಿದರು.

ಕೆ.ಸಿ.ರೆಡ್ಡಿ ಸರೋಜಮ್ಮ ಪ್ರತಿಷ್ಠಾನದ ವತಿಯಿಂದ ತಾಲ್ಲೂಕಿನ ನರಸಾಪುರ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಶಿಕ್ಷಕರಿಗೆ ಬುಧವಾರ ಹಮ್ಮಿಕೊಂಡಿದ್ದ ವಿಜ್ಞಾನ ಕಾರ್ಯಾಗಾರದಲ್ಲಿ ಮಾತನಾಡಿ, ‘ಮಕ್ಕಳ ಸರ್ವತ್ತೋಮುಖ ಬೆಳವಣಿಗೆಯಲ್ಲಿ ವಿಜ್ಞಾನವು ಮಹತ್ವದ ಪಾತ್ರ ವಹಿಸಿದ್ದು, ಮಕ್ಕಳ ಕಲಿಕೆಗೆ ಪ್ರೇರೇಪಿಸಬೇಕು. ಶಿಕ್ಷಣದಲ್ಲಿ ವಿಜ್ಞಾನವನ್ನು ಹೆಚ್ಚು ಬೋಧಿಸಬೇಕು’ ಎಂದು ಹೇಳಿದರು.

‘ವಿಜ್ಞಾನ ತಂತ್ರಜ್ಞಾನ ಬಳಸಿ ಕಲಿಕೋಪಕರಣ ಬಳಸಿದರೆ ಮಕ್ಕಳು ಹೆಚ್ಚು ಆಸಕ್ತಿ ವಹಿಸಿ ಓದುತ್ತಾರೆ. ಅವರಲ್ಲಿ ಸೃಜನಾತ್ಮಕ ಚಿಂತನಶೀಲ ವೈಜ್ಞಾನಿಕ ಮನೋಭಾವ ಬೆಳೆಸಬೇಕು. ಕೆ.ಸಿ.ರೆಡ್ಡಿ ಅವರಂತಹ ಧೀಮಂತ ವ್ಯಕ್ತಿ ರಾಜ್ಯದ ಪ್ರಥಮ ಮುಖ್ಯಮಂತ್ರಿಯಾಗಿದ್ದರು ಎಂಬುದು ಎಷ್ಟೋ ಜನಕ್ಕೆ ಸರಿಯಾಗಿ ತಿಳಿದಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಪ್ರಥಮ ಮುಖ್ಯಮಂತ್ರಿಯಾಗಿರುವುದು ನಮ್ಮೆಲ್ಲರ ಹೆಮ್ಮೆ’ ಎಂದರು.

ADVERTISEMENT

‘ವಿಜ್ಞಾನ ವಿಷಯವು ದಿನನಿತ್ಯದ ಅನುಭವಗಳನ್ನು ಪರೀಕ್ಷಿಸಿ ವೀಕ್ಷಿಸುವ ಅವಕಾಶ ನೀಡುತ್ತದೆ. ಇದಕ್ಕೆ ಪೂರಕವಾಗಿ ಪರಿಸರದಲ್ಲಿ ಇರುವ ಸಂಬಂಧಗಳಿಗೆ ಮತ್ತು ಚಟುವಟಿಕೆಗಳಿಗೆ ಯೋಜನಾ ಕಾರ್ಯ ರೂಪವಾಗಿ ಮಕ್ಕಳ ಮುಂದೆ ಪ್ರದರ್ಶಿಸಿ ಅನ್ವೇಷಣೆಯ ಕಲಿಕೆಗೆ ಜ್ಞಾನ ಕಟ್ಟಿಕೊಡಬೇಕು’ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎ.ಬಿ.ರಾಮಕೃಷ್ಣಪ್ಪ ತಿಳಿಸಿದರು.

ಸರಳವಾಗಿ ಕಲಿಯಬಹುದು: ‘ಕೆ.ಸಿ.ರೆಡ್ಡಿ ಅವರ ಬಗ್ಗೆ ಎಷ್ಟೋ ಜನಕ್ಕೆ ಗೊತ್ತಿಲ್ಲ. ಅವರ ಜನಪ್ರಿಯ ಆಡಳಿತ ಮತ್ತು ಕಾರ್ಯಕ್ರಮಗಳು ಕೆಲವೇ ಮಂದಿಗೆ ಮಾತ್ರ ಗೊತ್ತಿವೆ. ಕೆ.ಸಿ.ರೆಡ್ಡಿ ಅವರ ಹೆಸರಿನಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಕೆ.ಸಿ.ರೆಡ್ಡಿ ಪ್ರತಿಷ್ಠಾನದ ಸಂಸ್ಥಾಪಕಿ ವಸಂತ ಕವಿತಾ ವಿವರಿಸಿದರು.

‘ಮಕ್ಕಳು ಸರಳವಾಗಿ ವಿಜ್ಞಾನ ಕಲಿಯಬಹುದು ಮತ್ತು ಪ್ರಯೋಗಿಸಬಹುದು. ಮಕ್ಕಳಲ್ಲಿ ಜ್ಞಾನದ ಚಿಂತನೆ ತುಂಬುವ ಕಾರ್ಯ ಹಾಗೂ ಶಿಕ್ಷಕರಿಗೆ ವಿಜ್ಞಾನದ ಸರಳ ಪ್ರಯೋಗಗಳನ್ನು ಕಾರ್ಯಾಗಾರದಲ್ಲಿ ಕಲಿಸಲಾಗುವುದು. ಮಕ್ಕಳು ಓದಿಗೆ ಸೀಮಿತವಾಗದೆ ಮುಂದೆ ವಿವಿಧ ಕ್ಷೇತ್ರಗಳಲ್ಲಿ ಪ್ರತಿಭೆ ಗುರುತಿಸಿಕೊಂಡು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಶಿಕ್ಷಣ ಸಂಯೋಜಕರಾದ ಆರ್.ಶ್ರೀನಿವಾಸನ್, ರಾಘವೇಂದ್ರ, ಬಿಆರ್‌ಪಿ ಪ್ರವೀಣ್, ಸಿಆರ್‌ಪಿಗಳಾದ ಗೋವಿಂದ, ವಾಣಿಶ್ರೀ, ಸುಧಾಮಣಿ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.