ADVERTISEMENT

ಮುಳಬಾಗಿಲು: ಹೂವಳ್ಳಿ ಪ್ರಕಾಶ್ ಹೇಳಿಕೆ ಖಂಡಿಸಿದ ದಲಿತಪರ ಸಂಘಟನೆ

ಸಂಘಟನೆಗಳಿಂದ ಹಣ ವಸೂಲಿಯ ಹುನ್ನಾರ: ಆರೋಪ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 12:29 IST
Last Updated 12 ಏಪ್ರಿಲ್ 2025, 12:29 IST
ಕೊಲಾರ ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಹೂವಳ್ಳಿ ಪ್ರಕಾಶ್ ಹೇಳಿಕೆ ಖಂಡಿಸಿ ದಲಿತಪರ ಮುಖಂಡರು ಮುಳಬಾಗಿಲಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು
ಕೊಲಾರ ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಹೂವಳ್ಳಿ ಪ್ರಕಾಶ್ ಹೇಳಿಕೆ ಖಂಡಿಸಿ ದಲಿತಪರ ಮುಖಂಡರು ಮುಳಬಾಗಿಲಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು   

ಮುಳಬಾಗಿಲು: ಸೋಮವಾರ ಕೋಲಾರದಲ್ಲಿ ನಡೆಯಲಿರುವ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ವೇದಿಕೆ ಹತ್ತಬಾರದು ಎಂದು ಮುಖಂಡ ಹೂವಳ್ಳಿ ಪ್ರಕಾಶ್ ಪತ್ರಿಕಾ ಹೇಳಿಕೆ ನೀಡಿರುವುದು ಖಂಡನೀಯ ಎಂದು ಮುಳಬಾಗಿಲು ದಲಿತಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದವು.

ಮುಳಬಾಗಿಲು ನಗರದ ಪ್ರವಾಸಿ ಮಂದಿರದಲ್ಲಿ ದಲಿತಪರ ಸಂಘಟನೆಗಳಿಂದ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ವೆಂಕಟರಮಣಪ್ಪ ಮಾತನಾಡಿದರು. ದಲಿತ ಸಿಂಹ ಸೇನೆ ಸಂಸ್ಥಾಪಕ ಅಧ್ಯಕ್ಷ ಹೂವಳ್ಳಿ ನಾಗರಾಜ್ ಎಂಬುವವರು ಶುಕ್ರವಾರ ಕೋಲಾರದಲ್ಲಿ ಪತ್ರಿಕಾ ಹೇಳಿಕೆ ನೀಡಿ ಅಂಬೇಡ್ಕರ್ ಜಯಂತಿಯಲ್ಲಿ ಕೊತ್ತೂರು ಮಂಜುನಾಥ್ ವೇದಿಕೆ ಹತ್ತಿದರೆ ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದಾರೆ. ಕೊತ್ತೂರು ಮಂಜುನಾಥ್ ಅವರನ್ನು ಬೆದರಿಸಿ ಹಣ ವಸೂಲಿ ಮಾಡುವ ತಂತ್ರ ಇದರಲ್ಲಿ ಅಡಗಿದೆ ಎಂದು ಅವರು ಆರೋಪಿಸಿದರು.

ಅಂಬೇಡ್ಕರ್ ಜಯಂತಿ ಸರ್ಕಾರದ ಕಾರ್ಯಕ್ರಮವಾಗಿದ್ದು, ಪ್ರೋಟೋಕಲ್ ಪ್ರಕಾರ ಶಾಸಕರು ಕಾರ್ಯಕ್ರಮದಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ. ಇಂತಹ ಕಾರ್ಯಕ್ರಮದಲ್ಲಿ ಕೊತ್ತೂರು ವೇದಿಕೆ ಹತ್ತಬಾರದು ಎಂದು ಹೇಳಲು ಹೂವಳ್ಳಿ ಪ್ರಕಾಶ್ ಯಾರು? ಅದನ್ನು ನಿರ್ಧರಿಸಲು ಅವರಿಗೆ ಯಾವ ಹಕ್ಕಿದೆ ಎಂದು ಅವರು ಪ್ರಶ್ನಿಸಿದರು.

ADVERTISEMENT

ಕೊತ್ತೂರು ಮಂಜುನಾಥ್ ಅವರ ಜಾತಿ ಪ್ರಮಾಣ ಪತ್ರದ ವಿಚಾರ ಮುಳಬಾಗಿಲು ಕ್ಷೇತ್ರಕ್ಕೆ ಸಂಭಂದಿಸಿದ್ದು, ಆ ಕುರಿತು ನ್ಯಾಯಾಲಯ ಯಾವ ತೀರ್ಪು ನೀಡುತ್ತದೆಯೋ ಅದಕ್ಕೆ ತಲೆ ಬಾಗಬೇಕಾಗುತ್ತದೆ. ಆದರೆ ನ್ಯಾಯಾಲಯದ ತೀರ್ಪಿಗಿಂತ ಮೊದಲೇ ಹೂವಳ್ಳಿ ಪ್ರಕಾಶ್ ತೀರ್ಪು ನೀಡುವುದು ಎಷ್ಟು ಸರಿ. ಈ ರೀತಿ ಕೊತ್ತೂರು ಅವರ ಮಾನಕ್ಕೆ ಧಕ್ಕೆಯಾಗುವ ಹೇಳಿಕೆಗಳನ್ನು ನೀಡಿದರೆ ತಾಲ್ಲೂಕು ದಲಿತಪರ ಸಂಘಟನೆಗಳಿಂದ ಹೂವಳ್ಳಿ ಪ್ರಕಾಶ್ ಮತ್ತು ತಂಡದ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗೊಲ್ಲಹಳ್ಳಿ ವೆಂಕಟೇಶ್ ಮಾತನಾಡಿ, ಹೂವಳ್ಳಿ ಪ್ರಕಾಶ್ ಕೊತ್ತೂರು ಬಗ್ಗೆ ಎರಡು ವರ್ಷಗಳಿಂದಲೂ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತ ಬಂದಿದ್ದಾರೆ. ಇನ್ನು ಮುಂದೆ ಇದನ್ನು ನಿಲ್ಲಿಸದಿದ್ದರೆ ಎದುರಿಸಬೇಕಾಗುತ್ತದೆ ಎಂದು ಹೇಳಿದರು.

ದೇವರಾಯ ಸಮುದ್ರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಮ್ಮನಹಳ್ಳಿ ಕೃಷ್ಣಪ್ಪ, ವೆಂಕಟರಮಣಪ್ಪ, ಗೊಲ್ಲಹಳ್ಳಿ ವೆಂಕಟೇಶ್, ಮೆಕಾನಿಕ್ ಶ್ರೀನಿವಾಸ್, ಕಾರ್ ಶ್ರೀನಿವಾಸ್, ಜಮ್ಮನಹಳ್ಳಿ ಕೃಷ್ಣಪ್ಪ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.