ಕೆಜಿಎಫ್: ಕಳೆದ ಮೂರ್ನಾಲ್ಕು ದಿನಗಳಿಂದ ತಾಲ್ಲೂಕಿನಾದ್ಯಂತ ಬೀಳುತ್ತಿರುವ ಮಳೆಯಿಂದಾಗಿ ತೋಟದ ಬೆಳೆಗಳಿಗೆ ಹಾನಿಯಾಗಿದ್ದು, ನಗರದಲ್ಲಿ ಮೈನಿಂಗ್ ಪ್ರದೇಶದಲ್ಲಿ ಎರಡು ಮನೆಗಳು ಜಖಂಗೊಂಡಿವೆ ಎಂದು ತಹಶೀಲ್ದಾರ್ ಕೆ.ನಾಗವೇಣಿ ತಿಳಿಸಿದ್ದಾರೆ.
ಮಾವು, ಪಪ್ಪಾಯ, ಬಾಳೆ, ಟೊಮೆಟೊ, ಕೋಸು, ಹೂ ಮತ್ತು ಇತರ ತರಕಾರಿಗಳು ಮಳೆಯಿಂದಾಗಿ ಹಾನಿಗೊಳಗಾಗಿವೆ. ಸುಮಾರು 60 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಗಳು ನಷ್ಟಕ್ಕೆ ಒಳಗಾಗಿವೆ. ಸುಮಾರು ₹30 ಲಕ್ಷ ನಷ್ಟವುಂಟಾಗಿದೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಶನಿವಾರದವರೆವಿಗೂ ಕಳೆದ 24 ಗಂಟೆಗಳಲ್ಲಿ 39.6 ಮಿಮೀ ಮಳೆಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬಿಜಿಎಂಎಲ್ ಪ್ರದೇಶದ ಎನ್.ಟಿ ಬ್ಲಾಕ್‌ನಲ್ಲಿ ಎರಡು ಮನೆಗಳ ಮೇಲೆ ಮರ ಬಿದ್ದು ಮನೆಗಳು ಜಖಂ ಆಗಿವೆ. ಶಾಸಕಿ ಎಂ.ರೂಪಕಲಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಿಜಿಎಂಎಲ್ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ, ಕೂಡಲೇ ಮರವನ್ನು ಕಟಾವು ಮಾಡಬೇಕು ಎಂದು ಸೂಚಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.