ADVERTISEMENT

ಗುಣಮುಖ ಹೆಚ್ಚಳ: ಕೊಂಚ ನಿರಾಳ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2021, 14:26 IST
Last Updated 27 ಏಪ್ರಿಲ್ 2021, 14:26 IST

ಕೋಲಾರ: ಜಿಲ್ಲೆಯಲ್ಲಿ ಕೋವಿಡ್‌ 2ನೇ ಅಲೆಯ ಆತಂಕದ ನಡುವೆ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಗುಣಮುಖರಾಗಿ ಮಂಗಳವಾರ ಮನೆಗೆ ಮರಳಿದ್ದು, ಆರೋಗ್ಯ ಇಲಾಖೆ ಕೊಂಚ ನಿರಾಳವಾಗಿದೆ.

ಹೊಸದಾಗಿ ಪತ್ತೆಯಾದ ಸೋಂಕಿತರ ಸಂಖ್ಯೆಗೆ ಹೋಲಿಸಿದರೆ ಗುಣಮುಖರಾದವರ ಪ್ರಮಾಣ ಹೆಚ್ಚಳವಾಗಿರುವುದು ತುಸು ನೆಮ್ಮದಿ ತಂದಿದೆ. ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರ ಪೈಕಿ 587 ಮಂದಿ ಗುಣಮುಖರಾಗಿ ಮಂಗಳವಾರ ಮನೆಗೆ ಮರಳಿದರು.

ಕೋಲಾರ ತಾಲ್ಲೂಕಿನ 237 ಮಂದಿ, ಮಾಲೂರು ತಾಲ್ಲೂಕಿನ 102, ಬಂಗಾರಪೇಟೆ ತಾಲ್ಲೂಕಿನ 25, ಕೆಜಿಎಫ್‌ ತಾಲ್ಲೂಕಿನ 95, ಮುಳಬಾಗಿಲು ತಾಲ್ಲೂಕಿನ 96 ಮತ್ತು ಶ್ರೀನಿವಾಸಪುರ ತಾಲ್ಲೂಕಿನ 32 ಮಂದಿಯನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಯಿತು. ಕಳೆದೊಂದು ವರ್ಷದಲ್ಲಿ ಒಂದೇ ದಿನ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೋಂಕಿತರು ಗುಣಮುಖರಾಗಿ ಮನೆಗೆ ಮರಳಿದ ನಿದರ್ಶನವಿಲ್ಲ.

ADVERTISEMENT

ಜಿಲ್ಲೆಯ ಕೋವಿಡ್‌ ಆಸ್ಪತ್ರೆಗಳಿಗೆ ದಾಖಲಾಗಿದ್ದ ಸೋಂಕಿತರ ಪೈಕಿ ಕೋಲಾರ ತಾಲ್ಲೂಕಿನ ಇಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಕೊನೆಯುಸಿರೆಳೆದರು. ಇದರೊಂದಿಗೆ ಸೋಂಕಿತರ ಸಾವಿನ ಸಂಖ್ಯೆ 217ಕ್ಕೆ ಏರಿಕೆಯಾಯಿತು. ಇದರ ಬೆನ್ನಲ್ಲೇ ಹೊಸದಾಗಿ 452 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 2,788ಕ್ಕೆ ಜಿಗಿದಿದೆ.

ಮಾಲೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು 177 ಮಂದಿಗೆ ಸೋಂಕು ಹರಡಿರುವುದು ಖಚಿತವಾಗಿದೆ. ಉಳಿದಂತೆ ಕೋಲಾರ ತಾಲ್ಲೂಕಿನ 61 ಮಂದಿಗೆ, ಬಂಗಾರಪೇಟೆ ತಾಲ್ಲೂಕಿನ 32 ಮಂದಿಗೆ, ಕೆಜಿಎಫ್‌ ತಾಲ್ಲೂಕಿನ 20 ಮಂದಿಗೆ, ಮುಳಬಾಗಿಲು ತಾಲ್ಲೂಕಿನ 77 ಮಂದಿಗೆ ಮತ್ತು ಶ್ರೀನಿವಾಸಪುರ ತಾಲ್ಲೂಕಿನ 85 ಮಂದಿಗೆ ಸೋಂಕು ಬಂದಿದೆ.

ಈ ಸೋಂಕಿತರ ಮನೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಯಿತು. ಸೋಂಕಿತರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.