ADVERTISEMENT

ಸಚಿವ ಸ್ಥಾನ ಸಿಗದ್ದಕ್ಕೆ ಮಾಲೂರು ಶಾಸಕ ನಂಜೇಗೌಡ ಬೇಸರ

ಸಂಸದ ಮುನಿಸ್ವಾಮಿ ವಿರುದ್ಧ ಶಾಸಕ ಕೆ.ವೈ,ನಂಜೇಗೌಡ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 16:39 IST
Last Updated 4 ಜೂನ್ 2023, 16:39 IST
ಕೆ.ವೈ.ನಂಜೇಗೌಡ
ಕೆ.ವೈ.ನಂಜೇಗೌಡ   

ಕೋಲಾರ: ‘ಕೋಲಾರ ಜಿಲ್ಲೆ ಮೊದಲಿನಿಂದಲೂ ಕಾಂಗ್ರೆಸ್‌ ಪರವಾಗಿದೆ. ನಮ್ಮ ಪಕ್ಷವು ನಾಲ್ಕು ಸ್ಥಾನ ಗೆದ್ದಿದ್ದು, ಬಿಜೆಪಿ ಶೂನ್ಯ ಸಾಧನೆ ಮಾಡಿದೆ. ಹೀಗಾಗಿ, ಜಿಲ್ಲೆಗೆ ಸಚಿವ ಸ್ಥಾನ ಸಿಗದ್ದಕ್ಕೆ ನಾಲ್ವರೂ ಶಾಸಕರಿಗೆ ಬೇಸರವಿದೆ’ ಎಂದು ಮಾಲೂರು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ‘ನಾನೂ ಸಚಿವ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿ ಯಾಗಿದ್ದೆ. ಎಸ್‌.ಎನ್‌.ನಾರಾಯಣ ಸ್ವಾಮಿ ಕೂಡ ರೇಸ್‌ನಲ್ಲಿದ್ದರು. ಯಾರಿಗೆ ಸಿಕ್ಕಿದ್ದರೂ ನಮ್ಮ ತಕರಾರು ಇರುತ್ತಿರಲಿಲ್ಲ. ಆದರೆ, ಜಿಲ್ಲೆಯು ಸಚಿವ ಸ್ಥಾನದಿಂದ ವಂಚಿತವಾಗಿದೆ. ಜಿಲ್ಲೆಯ ಜನರಿಗೂ ಬೇಸರವಾಗಿದೆ’ ಎಂದರು.

‘ಇಷ್ಟಾಗಿಯೂ ಸರ್ಕಾರದ ಮೇಲೆ ನಂಬಿಕೆ ಇದೆ. ಪಕ್ಷದ ವರಿಷ್ಠರ ಜೊತೆಯೂ ಮಾತನಾಡಿದ್ದೇವೆ. ಮುಂದೆ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. ಒಂದಲ್ಲ ಒಂದು ದಿನ ಅವಕಾಶ ಸಿಗಲಿದೆ. ಸ್ವಲ್ಪ ದಿನ ಕಾಯಬೇಕಾಗುತ್ತದೆ’ ಎಂದು ಹೇಳಿದರು.

ADVERTISEMENT

‘ಮಾಲೂರು ತಾಲ್ಲೂಕಿನ ಶಿಲ್ಪಿ ಗ್ರಾಮವನ್ನು ಯಾರೂ ಗುರುತಿಸಿರಲಿಲ್ಲ. ಸಮ್ಮಿಶ್ರ ಸರ್ಕಾರವಿದ್ದಾಗ ₹ 10 ಕೋಟಿ ಅನುದಾನದೊಂದಿಗೆ ಶಿಲ್ಪಿ ಜಕಣಾಚಾರಿ ಗ್ರಾಮವೆಂದು ಘೋಷಿಸಲಾಯಿತು. ಆದರೆ, ಬಿಜೆಪಿ ಬಂದ ಮೇಲೆ ಅನುಷ್ಠಾನ ಮಾಡಲಿಲ್ಲ. ಬೇಕಾದ ಗುತ್ತಿಗೆದಾರರು ಸಿಕ್ಕಿಲ್ಲ ಎನಿಸುತ್ತದೆ. ನಾವು ಅನುಷ್ಠಾನ ಗೊಳಿಸುತ್ತೇವೆ. ಇದಲ್ಲದೇ, ಮಾಸ್ತಿ ವಸತಿ ಶಾಲೆಗೆ ಎಂಟು ಎಕರೆ ಜಾಗ ಮಂಜೂರು ಮಾಡಿಸಿ, ₹ 25 ಕೋಟಿ ಕೊಡಿಸಿದ್ದೆ. ಅದೂ ವಿಳಂಬವಾಯಿತು. ಮಾಲೂರು ತಾಲ್ಲೂಕಿನ ರಸ್ತೆಯ ಗುಂಡಿ ಮುಚ್ಚಲು ಸಂಸದ ಬಿಡಲಿಲ್ಲ. ಜಲ್ಲಿ ಹಾಕಿದ್ದ ರಸ್ತೆಗೆ ಡಾಂಬಾರು ಹಾಕಲೂ ಬಿಡಲಿಲ್ಲ’ ಎಂದು ಟೀಕಿಸಿದರು.

‘ಬಡವರು, ರೈತರು, ಕಾರ್ಮಿಕರು, ಅಲ್ಪಸಂಖ್ಯಾತರ ವಿರೋಧಿ ಸರ್ಕಾರ ಬೇಡವೆಂದು ಭ್ರಷ್ಟ ಹಾಗೂ 40 ಪರ್ಸೆಂಟ್‌ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್‌ಗೆ ಅವಕಾಶ ಮಾಡಿಕೊಟ್ಟಿದ್ದಾರೆ’ ಎಂದು ತಿಳಿಸಿದರು.

‘ಮರು ಮತ ಎಣಿಕೆ ವಿಚಾರದ ಬಗ್ಗೆ ನಾನು ಮಾತನಾಡಲ್ಲ. ಅವರು ಎಲ್ಲಿಗೆ ಬೇಕಾದರೂ ಹೋಗಲಿ. ನನಗೆ ನ್ಯಾಯದ ಮೇಲೆ ನಂಬಿಕೆ ಇದೆ. ನಾನು ಗೆದ್ದಾಗಿದೆ. ಸೋತವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕೆಲಸದ ಬಗ್ಗೆ ಗಮನ ಹರಿಸುತ್ತೇನೆ’ ಎಂದರು.

‘ಕೋಲಾರ–ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ವಿಭಜನೆ ಸಂಬಂಧ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಡಾ.ಕೆ.ಸುಧಾಕರ್‌ ಅವರು ಅಭಿಪ್ರಾಯ ಕೇಳದೆ ನಿರ್ಧಾರ ಕೈಗೊಂಡಿದ್ದರು. ಆದರೆ, ಚಿಕ್ಕಬಳ್ಳಾಪುರ ಜಿಲ್ಲೆಯವರೇ ನ್ಯಾಯಾಲಯಕ್ಕೆ ಹೋಗಿದ್ದಾರೆ. ಯಾವುದೇ ರೀತಿ ಆದೇಶ ಬಂದರೂ ಅದಕ್ಕೆ ಬದ್ಧ. ಎಂವಿಕೆ ಗೋಲ್ಡನ್‌ ಡೇರಿಗೂ ಅಡ್ಡಗಾಲು ಹಾಕಿದರು’ ಎಂದು ನುಡಿದರು.

‘ಹಾಲಿನ ಪ್ರೋತ್ಸಾಹಧನ ವಿಳಂಬವಾಗಿದೆ. 15 ಒಕ್ಕೂಟಗಳಲ್ಲಿ ಸಮಸ್ಯೆ ಇದೆ. ಈ ವಿಚಾರವನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಗಿದೆ’ ಎಂದರು.

‘ಸಿದ್ದರಾಮಯ್ಯ ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಜಿಲ್ಲೆಗೆ ಕೆ.ಸಿ.ವ್ಯಾಲಿಗೆಂದು ₹ 1,350 ಕೋಟಿ ಅನುದಾನ ನೀಡಿದ್ದರು. ಈಗಾಗಲೇ ಎರಡನೇ ಹಂತಕ್ಕೆ ಅವಕಾಶ ಮಾಡಿಕೊಡಲಾಗಿದೆ. ಜೊತೆಗೆ ಮೂರನೇ ಹಂತದ ಶುದ್ಧೀಕರಣ ಸಂಬಂಧ ಸರ್ಕಾರ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಿದೆ. ಎತ್ತಿನಹೊಳೆ ಯೋಜನೆ ಜಾರಿಗೆ ಸರ್ಕಾರ ಕ್ರಮ ವಹಿಸಲಿದೆ. ಯರಗೋಳು ಜಲಾಶಯದಿಂದ ಬಂಗಾರಪೇಟೆ, ಮಾಲೂರು, ಕೋಲಾರಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಯೂ ಆದಷ್ಟು ಬೇಗ ಜಾರಿ ಆಗಲಿದೆ. ಕೃಷ್ಣಯ್ಯ ಶೆಟ್ಟಿ ಮಂತ್ರಿಯಾಗಿದ್ದಾಗ ಮಾರ್ಕೊಂಡೇಯ ಜಲಾಶಯದಿಂದ ಮಾಲೂರಿಗೆ ಕುಡಿಯುವ ನೀರು ತರಲು ₹ 45 ಕೋಟಿ ಖರ್ಚು ಮಾಡಿದ್ದಾಗಿ ಬಿಜೆಪಿ ಹೇಳುತ್ತಿದೆ. ಜಲಾಶಯದಲ್ಲಿ ನೀರಿದೆ. ಟೇಕಲ್‌ವರೆಗೆ ನೀರು ಬಂದಿದೆ. ಆದರೆ, 160 ಹಳ್ಳಿಗಳಿಗೆ ನೀರು ಕೊಡುವ ಕಾರ್ಯಕ್ರಮ ಅನುಷ್ಠಾನಗೊಂಡಿಲ್ಲ. ಸಾಕಷ್ಟು ನ್ಯೂನತೆಗಳಿವೆ. ಈ ಯೋಜನೆ ಜಾರಿ ಆಗಬೇಕಿದೆ. ಈ ಸಂಬಂಧ ಮುಖ್ಯಮಂತ್ರಿ ಭರವಸೆ ಕೊಟ್ಟಿದ್ದಾರೆ. ನಮ್ಮ ಜವಾಬ್ದಾರಿಯೂ ಇದೆ’ ಎಂದರು.

‘ಕಾಂಗ್ರೆಸ್‌ನ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ರಾಜ್ಯದ ಜನತೆಗೆ ನೀಡಿದ್ದ ಭರವಸೆ ಈಡೇರಿಸಿದ್ದಾರೆ. ಐದು ಗ್ಯಾರಂಟಿಗಳ ಜಾರಿ ಮಾಡಲು ಮುಖ್ಯಮಂತ್ರಿ ಆದೇಶ ಮಾಡಿದ್ದಾರೆ. ಇದಕ್ಕೆ ಜನರು ಮೆಚ್ಚುಗೆ ವ್ಯಕ್ತವಾಗಿದೆ’ ಎಂದು ಹೇಳಿದರು.

Quote - ಮೇಕೆದಾಟು ಯೋಜನೆ ಸಂಬಂಧ ಡಿಪಿಆರ್‌ನಲ್ಲಿ ಕೋಲಾರ ಜಿಲ್ಲೆ ಕೈಬಿಡಲಾಗಿದೆ ಎನ್ನುತ್ತಿದ್ದಾರೆ. ಈ ಸಂಬಂಧ ಎಲ್ಲಾ ಶಾಸಕರು ಚರ್ಚಿಸಿದ್ದು ಸರ್ಕಾರದ ಮೇಲೆ ಒತ್ತಡ ಹೇರಲಿದ್ದೇವೆ ಕೆ.ವೈ.ನಂಜೇಗೌಡ ಶಾಸಕ

Cut-off box - ‘ಕೃಷ್ಣಬೈರೇಗೌಡರೇ ಉಸ್ತುವಾರಿ ಆಗಲಿ’ ‘ಕೋಲಾರ ಜಿಲ್ಲೆಯ ಉಸ್ತುವಾರಿ ಯಾರಿಗೆ ಕೊಡಬೇಕೆಂಬ ವಿಚಾರದಲ್ಲಿ ಜಿಲ್ಲೆಯ ಎಲ್ಲಾ ಶಾಸಕರು ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷರ ಬಳಿ ಅಭಿಪ್ರಾಯ ತಿಳಿಸಿದ್ದೇವೆ. ಕೃಷ್ಣಬೈರೇಗೌಡರಿಗೆ ಮೊದಲ ಆದ್ಯತೆ ನೀಡಬೇಕು. ಏಕೆಂದರೆ ಅವರು ನಮ್ಮ ಜಿಲ್ಲೆಯವರು ಹಿಂದೆ ಇಲ್ಲಿಂದಲೇ ಶಾಸಕರಾಗಿದ್ದರು. ಒಳ್ಳೆಯ ಯೋಜನೆಗಳು ಜಿಲ್ಲೆಗೆ ಬರಲು ಕೃಷ್ಣಬೈರೇಗೌಡರ ಅಗತ್ಯವಿದೆ. ಮಂತ್ರಿ ಸ್ಥಾನವನ್ನಂತೂ ಕೊಡಲಿಲ್ಲ. ಅವರನ್ನಾದರೂ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನಿಯೋಜಿಸಬೇಕು. ದೇವನಹಳ್ಳಿ ಕ್ಷೇತ್ರದಿಂದ ಗೆದ್ದು ಸಚಿವರಾಗಿರುವ ಕೆ.ಎಚ್‌.ಮುನಿಯಪ್ಪ ಅವರು ಕೋಲಾರದವರೇ. ಅವರು ಬೇಡವೆಂದು ನಾವು ಹೇಳಿಲ್ಲ’ ಎಂದು ನಂಜೇಗೌಡ ತಿಳಿಸಿದರು.

Cut-off box - ‘ಸಂಸದರಿಂದ ಲಂಚದ ಸುಲಿಗೆ’ ‘ಬಿಜೆಪಿ ಸರ್ಕಾರದಲ್ಲಿ ತುಂಬಾ ಕಷ್ಟ ಎದುರಿಸಿದೆ. ನನ್ನನ್ನು ಸೋಲಿಸಬೇಕೆಂದು ಇದೇ ಸಂಸದ ಅಧಿಕಾರಿಗಳು ಗುತ್ತಿಗೆದಾರರ ಮೂಲಕ ಅಭಿವೃದ್ಧಿ ಕಾರ್ಯ ವಿಳಂಬ ಮಾಡಿಸಿದರು. ಭ್ರಷ್ಟ ಅಧಿಕಾರಿಗಳನ್ನು ನಿಯೋಜನೆ ಮಾಡಿ ಲಂಚ ಸುಲಿಗೆ ಮಾಡಿದರು. ನನ್ನ ಮಾತನ್ನು ಅಧಿಕಾರಿಗಳು ಕೇಳದಂತೆ ಮಾಡಿದರು. ಸಂಸದರು ವೈಯಕ್ತಿಕವಾಗಿ ತೆಗೆದುಕೊಂಡರು. ಈಗ ಜನ ನನ್ನನ್ನು ಮತ್ತೊಮ್ಮೆ ಗೆಲ್ಲಿಸಿದ್ದಾರೆ. ನಮ್ಮದೇ ಸರ್ಕಾರವಿದೆ. ನಿಂತು ಹೋದ ಎಲ್ಲಾ ಯೋಜನೆ ಜಾರಿ ಮಾಡಿಸುತ್ತೇನೆ’ ಎಂದು ಶಾಸಕರು ಹೇಳಿದರು. ‘ಕಲ್ಲು ಗಣಿಗಾರಿಕೆ ಸಂಬಂಧ ಸಂಸದರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ನನ್ನ ಮೇಲೆಯಾವ ಕೇಸು ಇದೆಯೋ ಗೊತ್ತಿಲ್ಲ. ನಾನು ಯಾರಿಗೂ ಮೋಸ ಮಾಡಿಲ್ಲ. ತಪ್ಪು ಮಾಡಿದ್ದರೆ ಅವರ ಸರ್ಕಾರದಲ್ಲಿ ಕ್ರಮ ಕೈಗೊಳ್ಳಬೇಕಿತ್ತು ತಾನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.