ಮುಳಬಾಗಿಲು: ಭೂಮಿ ಮೇಲೆ ಮನುಷ್ಯನಾಗಲಿ ಅಥವಾ ಯಾವುದೇ ಜೀವಿಯೂ ಶಾಶ್ವತವಲ್ಲ. ಇರುವಷ್ಟು ದಿನ ಎಲ್ಲರಲ್ಲೂ ಸಂತೋಷವನ್ನು ಉಂಟು ಮಾಡಿ ಸಾರ್ಥಕ ಬದುಕು ನಡೆಸುವುದೇ ಪರಮೋಚ್ಚ ಕೆಲಸ ಎಂದು ಸ್ಪಟಿಕಪುರಿ ಮಹಾ ಸಂಸ್ಥಾನದ ಪೀಠಾಧಿಪತಿ ನಂಜಾವಧೂತ ಸ್ವಾಮೀಜಿ ಹೇಳಿದರು.
ತಾಲ್ಲೂಕು ಪೊಂಬರಹಳ್ಳಿ ಗ್ರಾಮದ ಬೃಂದಾವನ ವರದರಾಜಸ್ವಾಮಿ ದೇವಾಲಯದ ವಿಮಾನ ಗೋಪುರ ಶಿಲಾ ವಿಗ್ರಹ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.
ತನ್ನ ಸುತ್ತಮುತ್ತಲಿನ ಜನ ಹಾಗೂ ಪರಿಸರವನ್ನು ಸಂತೋಷವಾಗಿಡಲು ಸಕಲರೂ ಪ್ರಯತ್ನಿಸಬೇಕು. ಅದು ಬಿಟ್ಟು ದ್ವೇಷ, ಅಸೂಯೆ ಅಥವಾ ಸ್ವಾರ್ಥ ಬದುಕು ಸಲ್ಲದು ಎಂದು ಹೇಳಿದರು.
‘ಮನುಷ್ಯನಿಗೆ ಮೊದಲು ತನ್ನ ಮೇಲೆ ತನಗೆ ನಂಬಿಕೆ ಇರಬೇಕು. ನಾವು ಮಾಡುವ ಕೆಲಸದಲ್ಲಿ ನಂಬಿಕೆ ನಿಷ್ಠೆ ಇಲ್ಲದೆ ಹಾಗೂ ಪ್ರಾಮಾಣಿಕತೆ ಇಲ್ಲದಿದ್ದರೆ ಎಷ್ಟು ದೊಡ್ಡ ದೇವಾಲಯ ಕಟ್ಟಿದರೂ ವ್ಯರ್ಥವಾಗುತ್ತದೆ. ಸಂಪನ್ಮೂಲಗಳನ್ನು ಕ್ರೋಡೀಕರಿಸಿ ದೇವಾಲಯ ಕಟ್ಟುವುದು ದೊಡ್ಡ ವಿಚಾರವಲ್ಲ. ಸಂಸ್ಕಾರದಿಂದ ಪೂಜಿಸಿ ಭಗವಂತ ನಮ್ಮ ಕಡೆ ಮುಖ ಮಾಡುವಂತೆ ಬದುಕುವುದು ಮುಖ್ಯ’ ಎಂದರು.
ಸಸಜ್ಜಿತ ದೇವಾಲಯ ಕಟ್ಟಿ ಪೂರ್ಣಗೊಳಿಸಿ, ತಮಿಳುನಾಡಿನನಿಂದ ವಿಗ್ರಹ ತಂದು ಪ್ರತಿಷ್ಠಾಪನೆ ಮಾಡಲಾಗಿದೆ. ಅಲ್ಲದೆ ತಿರುಪತಿಯಿಂದ ಪ್ರತಿ ವಾರ ಬಂದು ಪೂಜಾ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಹಿರಿಯ ವಕೀಲ ಶಂಕರಪ್ಪ, ಉತ್ತನೂರು ಶ್ರೀನಿವಾಸ್ ಮತ್ತಿತರ ಮುಖಂಡರು ಇದ್ದರು.
Cut-off box - ವಜ್ರದ ಕಿರೀಟ ಕೊಟ್ಟರೂ ಜೈಲಿಗೆ ಹೋಗುವುದು ತಪ್ಪಲಿಲ್ಲ ‘ಕಳೆದ 8-10 ವರ್ಷಗಳ ಹಿಂದೆ ರಾಜ್ಯದ ಪ್ರಭಾವಿ ವ್ಯಕ್ತಿಯೊಬ್ಬರು ತಿರುಪತಿ ವೆಂಕಟರಮಣ ಸ್ವಾಮಿಗೆ ವಜ್ರ ಖಚಿತ ಕಿರೀಟ ಅರ್ಪಣೆ ಮಾಡಿದರು. ಆವತ್ತಿನ ಕಾಲಕ್ಕೆ ಅದರ ಬೆಲೆ ₹50-60 ಕೋಟಿ ಇರಬಹುದು. ಆಗ ಎಲ್ಲರೂ ಅಂದುಕೊಂಡರು ಇವರಿಗೆ ಎಷ್ಟು ಪುಣ್ಯ ಬಂದಿರಬೇಕು ಎಂದು ಆದರೆ ಕೆಲವೇ ತಿಂಗಳಲ್ಲಿ ಆ ವ್ಯಕ್ತಿ ಜೈಲಿಗೆ ಹೋದರು. ಐದು ವರ್ಷ ಹೊರಗೆ ಬಾರಲೇ ಇಲ್ಲ. ಹೀಗಾಗಿ ಅವರು ಕೊಟ್ಟ ದಾನದ ಪುಣ್ಯ ಎಲ್ಲಿ ಹೋಯಿತು’ ಎಂದು ಮಾರ್ಮಿಕವಾಗಿ ಬಳ್ಳಾರಿ ಜನಾರ್ದನ ರೆಡ್ಡಿ ಅವರನ್ನು ಉಲ್ಲೇಖಿಸಿನಂಜಾವಧೂತ ಸ್ವಾಮೀಜಿ ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.