ADVERTISEMENT

ಸೊಸೈಟಿ ಗಣಕೀಕರಣ: ವಿಶ್ವಾಸ ವೃದ್ಧಿ

ಕಾರ್ಯಾಗಾರದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 20:00 IST
Last Updated 19 ಫೆಬ್ರುವರಿ 2020, 20:00 IST
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣ ಕುರಿತು ಕೋಲಾರದಲ್ಲಿ ಬುಧವಾರ ಪ್ಯಾಕ್ಸ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಮಾತನಾಡಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣ ಕುರಿತು ಕೋಲಾರದಲ್ಲಿ ಬುಧವಾರ ಪ್ಯಾಕ್ಸ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಮಾತನಾಡಿದರು.   

ಕೋಲಾರ: ‘ಸೊಸೈಟಿಗಳ ಗಣಕೀಕರಣ ಹಾಗೂ ಆನ್‌ಲೈನ್‌ ವಹಿವಾಟಿನಿಂದ ಸಹಕಾರಿ ಸಂಸ್ಥೆ ಮೇಲೆ ಗ್ರಾಹಕರಲ್ಲಿ ಅಪನಂಬಿಕೆ ದೂರವಾಗಿ ವಿಶ್ವಾಸ ವೃದ್ಧಿಯಾಗುತ್ತದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಅಭಿಪ್ರಾಯಪಟ್ಟರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣ ಕುರಿತು ಪ್ಯಾಕ್ಸ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿ, ‘ಆರ್ಥಿಕ ವರ್ಷದ ಆರಂಭದಿಂದ ಸುಮಾರು 65 ಸೊಸೈಟಿಗಳು ಆನ್‌ಲೈನ್‌ ವ್ಯಾಪ್ತಿಗೆ ಒಳಪಡುತ್ತೇವೆ. ಸೆಪ್ಟೆಂಬರ್ ಅಂತ್ಯಕ್ಕೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ಸೊಸೈಟಿ ಗಣಕೀಕರಣಗೊಳಿಸುತ್ತೇವೆ’ ಎಂದರು.

‘ಸಹಕಾರಿ ಕ್ಷೇತ್ರ ಇಂದು ಆತಂಕದಲ್ಲಿದ್ದು, ಅಪನಂಬಿಕೆ ಪರಿಸ್ಥಿತಿ ಎದುರಿಸುವಂತಾಗಿದೆ. ಪ್ರಾಮಾಣಿಕ ಮನೋಭಾವ ಮತ್ತು ಪಾರದರ್ಶಕ ಆಡಳಿತದಿಂದ ಜನರ ಸಂಶಯ ನಿವಾರಿಸಬೇಕು. ಈ ನಿಟ್ಟಿನಲ್ಲಿ ಸೊಸೈಟಿ ಆನ್‌ಲೈನ್‌ ವ್ಯವಸ್ಥೆಯಿಂದ ಪ್ರತಿ ಕ್ಷಣದ ವಹಿವಾಟು ಪಾರದರ್ಶಕವಾಗಿ ಮತ್ತು ಮುಕ್ತವಾಗಿ ನಡೆಯುವುದರಿಂದ ಗ್ರಾಹಕರಿಗೆ ನಂಬಿಕೆ ಹೆಚ್ಚುತ್ತದೆ’ ಎಂದು ತಿಳಿಸಿದರು.

ADVERTISEMENT

‘ಪಡಿತರ ವಿತರಣೆಗಷ್ಟೇ ಸೀಮಿತವಾಗಿದ್ದ ಸೊಸೈಟಿಗಳನ್ನು ಡಿಸಿಸಿ ಬ್ಯಾಂಕ್ ಪುನಶ್ಚೇತನಗೊಳಿಸಿದ್ದು, ಪ್ರಸ್ತುತ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆದಿವೆ. ಕಾರ್ಯದರ್ಶಿಗಳು ಸವಾಲು ಎದುರಿಸುವ ಮೂಲಕ ಬಡವರಿಗೆ ಸಹಕಾರಿ ವ್ಯವಸ್ಥೆಯ ಲಾಭ ಕಲ್ಪಿಸಬೇಕು. ಜತೆಗೆ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ಮತ್ತು ಪಾರದರ್ಶಕವಾಗಿ ನಿರ್ವಹಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಗ್ರಾಹಕರ ನಂಬಿಕೆ ಗಟ್ಟಿಗೊಳಿಸಲು ಸಿಬ್ಬಂದಿಗೆ ಸಾಧ್ಯವಾಗದಿದ್ದರೆ ಕೆಲಸ ತೊರೆದು ಮತ್ತೊಬ್ಬರಿಗೆ ಅವಕಾಶ ಮಾಡಿಕೊಡಬೇಕು. ಸಹಕಾರಿ ರಂಗದಲ್ಲಿ ರಾಜಕೀಯ ಮಾಡುವುದು ಮನುಷ್ಯತ್ವಲ್ಲ’ ಎಂದು ಎಚ್ಚರಿಕೆ ನೀಡಿದರು.

ವಂಚಕರಲ್ಲ: ‘ಅವಿಭಜಿತ ಕೋಲಾರ ಜಿಲ್ಲೆಯ ಸಹಕಾರ ವ್ಯವಸ್ಥೆ ಮುಗಿದೇ ಹೋಯಿತೆಂಬ ಸ್ಥಿತಿಯಲ್ಲಿ ಎಲ್ಲರೂ ಕಷ್ಟಪಟ್ಟು ಬ್ಯಾಂಕ್‌ ಉಳಿಸಿದ್ದಾರೆ. ಕಡೆ ದಿನ ಎಣಿಸುತ್ತಿದ್ದ ಸೊಸೈಟಿಗಳಿಗೆ ಜೀವ ನೀಡಿ ಜೀವಕಳೆ ತುಂಬಿದ್ದಾರೆ. ಹಳ್ಳಿಯಲ್ಲಿ ಜನರ ಜತೆ ಸಂಪರ್ಕ ಇರಿಸಿಕೊಂಡರೆ ಸಾಲ ವಸೂಲಾತಿ ಕಷ್ಟವಲ್ಲ. ರೈತರು, ಮಹಿಳಾ ಸಂಘದವರು ಮತ್ತು ಬಡವರು ವಂಚಕರಲ್ಲ’ ಎಂದು ಹೇಳಿದರು.

‘ಸೊಸೈಟಿಗಳ ವ್ಯಾಪ್ತಿಯ ಎಲ್ಲಾ ಹಾಲು ಡೇರಿಗಳ ಉಳಿತಾಯ ಖಾತೆಯನ್ನು ಸಹಕಾರಿ ಸಂಸ್ಥೆಗಳಲ್ಲಿ ತೆರೆಸಿ ಠೇವಣಿ ಪಡೆಯಬೇಕು. ಮಾರ್ಚ್ 1ರಂದು ನಡೆಯುವ ಸಭೆಯಲ್ಲಿ ಗುರಿ ಸಾಧನೆ ವರದಿ ಮಂಡಿಸಬೇಕು. ಸೊಸೈಟಿಗಳಲ್ಲಿ ಹೊಸದಾಗಿ ಆರಂಭವಾಗುತ್ತಿರುವ ಆನ್‌ಲೈನ್‌ ವ್ಯವಸ್ಥೆ ಜವಾಬ್ದಾರಿಯನ್ನು ಹೆಣ್ಣು ಮಕ್ಕಳಿಗೆ ವಹಿಸುವ ಮೂಲಕ ಸ್ಥಳೀಯವಾಗಿ ಉದ್ಯೋಗ ಒದಗಿಸಬೇಕು’ ಎಂದು ಸಲಹೆ ನೀಡಿದರು.

ಮೈಕ್ರೋ ಎಟಿಎಂ: ‘ಏಪ್ರಿಲ್ 1ರಿಂದ ಸೊಸೈಟಿಗಳಲ್ಲಿ ಮೈಕ್ರೋ ಎಟಿಎಂ ವ್ಯವಸ್ಥೆ ಚಾಲನೆಗೆ ಬರಲಿದ್ದು, ಎಸ್‍ಎಂಎಸ್ ಸೇವೆ ಸಹ ಲಭ್ಯವಾಗಲಿದೆ. ಸೊಸೈಟಿ ಆನ್‌ಲೈನ್‌ ವ್ಯವಸ್ಥೆಯನ್ನು ರಾಜ್ಯ ಮಟ್ಟದಲ್ಲಿ ಮಾದರಿಯಾಗಿಸಲು ಯೋಜನೆ ರೂಪಿಸಲಾಗಿದೆ. ಆನ್‌ಲೈನ್ ವ್ಯವಸ್ಥೆಯಲ್ಲಿ ಲೆಕ್ಕಪರಿಶೋಧನೆ ದಾಖಲೆಗಳು ಕ್ಷಣದಲ್ಲಿ ಲಭ್ಯ ಆಗುವುದರಿಂದ ಸೊಸೈಟಿ ಕಾರ್ಯದರ್ಶಿಗಳ ಕೆಲಸ ಸುಲಭವಾಗುತ್ತದೆ’ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾರಾಯಣರೆರಡ್ಡಿ, ಎಂ.ಎಲ್.ಅನಿಲ್‌ಕುಮಾರ್, ಸಹಾಯಕ ಪ್ರಧಾನ ವ್ಯವಸ್ಥಾಪಕ ಶಿವಕುಮಾರ್, ವಿವಿಧ ಸೊಸೈಟಿಗಳ ಅಧ್ಯಕ್ಷರು, ವಿ ಸಾಫ್ಟ್ ರಾಜ್ಯ ವ್ಯವಸ್ಥಾಪಕ (ಮಾರುಕಟ್ಟೆ) ಸಿರೀಶ್ ಹಂಪಿಹೊಳಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.