ADVERTISEMENT

ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 13:52 IST
Last Updated 28 ಮಾರ್ಚ್ 2020, 13:52 IST

ಕೋಲಾರ: ಕೇಂದ್ರ ಸರ್ಕಾರವು ಕೊರೊನಾ ಸೋಂಕಿನ ತಡೆಗಾಗಿ ಇಡೀ ದೇಶಕ್ಕೆ ದಿಗ್ಬಂಧನ ಘೋಷಿಸಿದ್ದು, ಶಿಕ್ಷಕರು ಕಾಲಹರಣ ಮಾಡದೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ದೂರವಾಣಿ ಕರೆ ಮೂಲಕ ಆತ್ಮಸ್ಥೈರ್ಯ ತುಂಬಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್‌.ನಾಗರಾಜಗೌಡ ಸೂಚನೆ ನೀಡಿದ್ದಾರೆ.

ಇಡೀ ವಿಶ್ವವೇ ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿದೆ. ಶಿಕ್ಷಕರು ಮನೆಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು ಸೋಂಕು ತಡೆಗೆ ಪ್ರಯತ್ನಿಸಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೋವಿಡ್‌–19 ವಿರುದ್ಧ ಸಂಘಟಿತ ಹೋರಾಟಕ್ಕೆ ಕರೆ ನೀಡಿದ್ದು, ಶಿಕ್ಷಕರು ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಸದಾ ಕೆಲಸದ ಒತ್ತಡದಲ್ಲಿರುತ್ತಿದ್ದ ಶಿಕ್ಷಕರಿಗೆ ಈಗ ಮನೆಗಳಲ್ಲಿ ಇರುವುದು ಕಷ್ಟ. ಈ ಬಿಡುವಿನ ಸಮಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸರ್ಕಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದೂಡಿರುವುದರಿಂದ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳನ್ನು ಮೊಬೈಲ್‌ ಕರೆ ಮೂಲಕ ಸಂಪರ್ಕಿಸಿ ಪರೀಕ್ಷಾ ಸಿದ್ಧತೆ ಸಂಬಂಧ ಸಲಹೆ ಸೂಚನೆ ನೀಡಬೇಕು ಎಂದು ತಿಳಿಸಿದ್ದಾರೆ.

ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆಗಾಗಿ ಇಡೀ ವರ್ಷ ಓದಿದ್ದ ಮಕ್ಕಳಲ್ಲಿ ಬೇಸರವಿದೆ. ವಿದ್ಯಾರ್ಥಿಗಳಲ್ಲಿನ ಬೇಸರ ಮತ್ತು ಆತಂಕ ದೂರ ಮಾಡುವುದು ಶಿಕ್ಷಕರ ಹೊಣೆ. ಪ್ರತಿ ವಿದ್ಯಾರ್ಥಿಯ ಪೋಷಕರ ದೂರವಾಣಿ ಸಂಖ್ಯೆಯೂ ಶಾಲೆಯ ದಾಖಲೆಪುಸ್ತಕದಲ್ಲಿದೆ. ಪೋಷಕರಿಗೆ ಕರೆ ಮಾಡಿ ಮಾತನಾಡಿ. ಮಕ್ಕಳಿಗೆ ಧೈರ್ಯ ತುಂಬಿ ಎಂದು ಸಲಹೆ ನೀಡಿದ್ದಾರೆ.

ಮನೆಯಿಂದ ಹೊರ ಹೋಗದೆ ಆರೋಗ್ಯ ಕಾಪಾಡಿಕೊಂಡು ಓದಿನತ್ತ ಗಮನ ಹರಿಸುವಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ. ಶಿಕ್ಷಣ ಇಲಾಖೆ ನಿರ್ದೇಶನದಂತೆ ಮಕ್ಕಳಿಗೆ ಮುಂಗಡವಾಗಿ ಬಿಸಿಯೂಟದ ಅಕ್ಕಿ, ಬೇಳೆ ವಿತರಿಸಿ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.