ADVERTISEMENT

ಅನುದಾನ ಹಂಚಿಕೆಯಲ್ಲಿ ಮಲತಾಯಿ ಧೋರಣೆ: ಶಾಸಕ ಸಮೃದ್ಧಿ ಮಂಜುನಾಥ್

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 14:42 IST
Last Updated 15 ಜೂನ್ 2025, 14:42 IST
ಮುಳಬಾಗಿಲಿನಲ್ಲಿ ಶಾಸಕ ಸಮೃದ್ಧಿ ಮಂಜುನಾಥ್ ನೂತನ ಇಂದಿರಾ ಕ್ಯಾಂಟೀನ್‌ಗೆ ಚಾಲನೆ ನೀಡಿದರು 
ಮುಳಬಾಗಿಲಿನಲ್ಲಿ ಶಾಸಕ ಸಮೃದ್ಧಿ ಮಂಜುನಾಥ್ ನೂತನ ಇಂದಿರಾ ಕ್ಯಾಂಟೀನ್‌ಗೆ ಚಾಲನೆ ನೀಡಿದರು    

ಮುಳಬಾಗಿಲು: ಸರ್ಕಾರ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೊಂದು ನ್ಯಾಯ. ಉಳಿದವರಿಗೆ ಒಂದು ನ್ಯಾಯ ಮಾಡುತ್ತಾ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಇದೇ ರೀತಿಯಲ್ಲಿ ಮಾಡಿದರೆ ಸರ್ಕಾರದ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದಾಗಿ ಶಾಸಕ ಸಮೃದ್ಧಿ ಮಂಜುನಾಥ್ ಹೇಳಿದರು.

ಮುಳಬಾಗಿಲು ನಗರದ ಆಂಜನೇಯ ದೇವಾಲಯದ ರಸ್ತೆಯಲ್ಲಿ ಭಾನುವಾರ ನೂತನವಾಗಿ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟೀನ್ ಪ್ರಾರಂಭೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.

ಕಾಂಗ್ರೆಸ್‌ ಶಾಸಕರು ಇರುವ ಕೆಜಿಎಫ್, ಬಂಗಾರಪೇಟೆ, ಕೋಲಾರ ಹಾಗೂ ಮಾಲೂರಿಗೆ ಉತ್ತಮ ಅನುದಾನ ಸಿಗುತ್ತಿದೆ. ಆದರೆ, ಮುಳಬಾಗಿಲು ಕ್ಷೇತ್ರಕ್ಕೆ ಅನುದಾನ ನೀಡುವಲ್ಲಿ ಅನ್ಯಾಯ ಮಾಡಲಾಗುತ್ತಿದೆ. ಎಲ್ಲರನ್ನೂ ಸಮಾನವಾಗಿ ನೋಡಿ ಅಭಿವೃದ್ಧಿಗೆ ಸಹಕರಿಸಬೇಕಾದ ಸರ್ಕಾರ ತಾಲ್ಲೂಕನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಕ್ಷೇತ್ರಕ್ಕೆ ಸಿಗಬೇಕಾದ ಅನುದಾನವನ್ನು ಸರ್ಕಾರ ಕೊಡಲೇಬೇಕು ಎಂದು ಒತ್ತಾಯಿಸಿದರು. 

ADVERTISEMENT

ಇಂದಿರಾ ಕ್ಯಾಂಟೀನ್ ಕಟ್ಟಡವನ್ನು ₹87ಲಕ್ಷ್ಮ ವೆಚ್ಚದಲ್ಲಿ ಮತ್ತು ಅಡುಗೆ ಸಲಕರಣೆಗಳನ್ನು ₹46 ಲಕ್ಷ ಹಾಗೂ ಶೌಚಾಲಯ ಮತ್ತಿತರವನ್ನು ₹12ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾದ ರೀತಿಯಲ್ಲಿ ನಿರ್ಮಿಸಲಾಗಿದೆ. ಪ್ರಾರಂಭದಲ್ಲಿ ಒಳ್ಳೆಯ ಊಟ ಕೊಟ್ಟು ನಂತರ ಶುಚಿ ಹಾಗೂ ರುಚಿಯಲ್ಲಿ ಕಡಿಮೆ ಮಾಡಬಾರದು ಎಂದು ಸಿಬ್ಬಂದಿಗೆ ಸೂಚಿಸಿದರು. 

ಮಹಿಳಾ ನಗರಸಭೆ ಸದಸ್ಯರ ಬದಲಾಗಿ ಗಂಡಂದಿರ ದರ್ಬಾರ್: ನಗರಸಭೆಯಲ್ಲಿ ಒಟ್ಟು 16 ಮಂದಿ ಮಹಿಳಾ ಸದಸ್ಯರೇ ಇದ್ದಾರೆ. ಆದರೆ, ಇಂದಿರಾ ಕ್ಯಾಂಟೀನ್ ಉದ್ಘಾಟನೆ ವೇದಿಕೆ ಮೇಲೆ ನಗರಸಭೆ ಅಧ್ಯಕ್ಷೆ ಶಬಾನಾ ಬೇಗಂ ಬದಲಿಗೆ ಅವರ ಪತಿ ಅಮಾನುಲ್ಲಾ ಸೇರಿದಂತೆ ಬಹುತೇಕ ಮಹಿಳಾ ಸದಸ್ಯರ ಬದಲಿಗೆ ಗಂಡಂದಿರೇ ವೇದಿಕೆ ಮೇಲೆ ಕುಳಿತಿದ್ದರು.

ಶಾಸಕ ಸಮೃದ್ಧಿ ಮಂಜುನಾಥ್ ಜನ್ಮದಿನದ ಪ್ರಯುಕ್ತ ಕ್ಯಾಂಟೀನ್‌ನಲ್ಲಿ ಊಟ ಉಚಿತವಾಗಿ ನೀಡಬೇಕು ಎಂದು ವೈಯಕ್ತಿಕವಾಗಿ ಒಂದು ದಿನದ ಹಣವನ್ನು ಕ್ಯಾಂಟೀನ್‌ಗೆ ನೀಡಿದರು.

ಜಿಲ್ಲಾ ನಗರ ಕೋಶದ ನಿರ್ದೇಶಕಿ ಅಂಬಿಕಾ, ಕಾಡೇನಹಳ್ಳಿ ಕೆ.ಎನ್.ನಾಗರಾಜ್, ಡಿಸಿಸಿ ಬ್ಯಾಂಕ್ ನಿರ್ದೇಶಕ ರಘುಪತಿ ರೆಡ್ಡಿ, ನಗವಾರ ಎನ್.ಆರ್.ಸತ್ಯಣ್ಣ, ಎಂ.ಗೊಲ್ಲಹಳ್ಳಿ ಪ್ರಭಾಕರ್, ನಗರಸಭೆ ಪೌರಾಯುಕ್ತ ವಿ.ಶ್ರೀಧರ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.