ADVERTISEMENT

ವಿದ್ಯಾರ್ಥಿಗಳು ಶ್ರದ್ಧೆಯಿಂದ ಕಲಿತು ಸಾಧಕರಾಗಿ

​ಪ್ರಜಾವಾಣಿ ವಾರ್ತೆ
Published 27 ಮೇ 2022, 14:14 IST
Last Updated 27 ಮೇ 2022, 14:14 IST
ಜಿಲ್ಲಾ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ತಿಮ್ಮರಾಯಪ್ಪ ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ಬಿಸಿಯೂಟ ನಿರ್ವಹಣೆ ಪರಿಶೀಲಿಸಿದರು
ಜಿಲ್ಲಾ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ತಿಮ್ಮರಾಯಪ್ಪ ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ಬಿಸಿಯೂಟ ನಿರ್ವಹಣೆ ಪರಿಶೀಲಿಸಿದರು   

ಕೋಲಾರ: ‘ಸರ್ಕಾರದ ಬಿಸಿಯೂಟ, ಕ್ಷೀರಭಾಗ್ಯ ಯೋಜನೆಯ ಸದುಪಯೋಗ ಪಡೆಯಿರಿ. ಶ್ರದ್ಧೆಯಿಂದ ಕಲಿತು ಸಮಾಜಕ್ಕೆ ಕೊಡುಗೆ ನೀಡುವ ಸಾಧಕರಾಗಿ’ ಎಂದು ಜಿಲ್ಲಾ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ತಿಮ್ಮರಾಯಪ್ಪ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬಿಸಿಯೂಟ ನಿರ್ವಹಣೆ ಪರಿಶೀಲಿಸಿ ಮಾತನಾಡಿ, ‘ಸರ್ಕಾರ ಮಕ್ಕಳಲ್ಲಿನ ಅಪೌಷ್ಟಿಕತೆ, ರಕ್ತಹೀನತೆ ತೊಡೆದು ಹಾಕಲು ಬಿಸಿಯೂಟ ಮತ್ತು ಕ್ಷೀರಭಾಗ್ಯ ಯೋಜನೆ ಜಾರಿಗೊಳಿಸಿದೆ. ಇದರಿಂದ ಕಲಿಕೆಗೆ ಸಹಕಾರಿಯಾಗಬೇಕು, ಕೇವಲ ಶಾಲೆಗೆ ಬಂದು ಹೋದರೆ ಸಾಲದು ಕಲಿಕೆ ದೃಢಪಡಿಸಿಕೊಳ್ಳಿ, ಶ್ರದ್ಧೆಯಿಂದ ಓದಿ ಪೊಷಕರ ಆಶಯ ಈಡೇರಿಸಿ’ ಎಂದು ಸಲಹೆ ನೀಡಿದರು.

‘ಶಾಲೆಯಲ್ಲಿ ಶುಚಿ, ರುಚಿಯಾದ ಊಟದ ವ್ಯವಸ್ಥೆಯಿದೆ. ಆಹಾರ ಧಾನ್ಯಗಳ ಗುಣಮಟ್ಟ ಕಳಪೆಯಾಗಿದ್ದರೆ ನನ್ನ ಗಮನಕ್ಕೆ ತನ್ನಿ. ಮಕ್ಕಳಿಗೆ ನೀಡುವ ಆಹಾರದಲ್ಲಿ ವ್ಯತ್ಯಯವಾಗದಂತೆ ಗಮನಹರಿಸಿ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಳಕ್ಕೆ ಬಿಸಿಯೂಟ ಸಹಕಾರಿಯಾಗಿದ್ದು, ಸ್ವಚ್ಚತೆಗೆ ಒತ್ತು ನೀಡಬೇಕು, ಮಕ್ಕಳಿಗೆ ಶುದ್ದ ಕುಡಿಯುವ ನೀರು ನೀಡಬೇಕು’ ಎಂದು ಅಡುಗೆ ಸಿಬ್ಬಂದಿಗೆ ಸೂಚಿಸಿದರು.

ADVERTISEMENT

‘ಪ್ರಾಮಾಣಿಕ ಪರಿಶ್ರಮದಿಂದ ಸಿಗುವ ಸಾಧನೆಯು ತೃಪ್ತಿ ತರುತ್ತದೆ. ಅಡ್ಡ ದಾರಿಯಲ್ಲಿ ಮಾಡಿದ ಸಾಧನೆ ಎಂದಿಗೂ ತೃಪ್ತಿ ತಾರದು. ಬದುಕಿನ ಪ್ರತಿ ಹಂತದಲ್ಲೂ ಸಮಯಪ್ರಜ್ಞೆ ಅಗತ್ಯವಿದೆ. ಪ್ರತಿ ನಿಮಿಷವನ್ನು ಸದ್ಬಳಕೆ ಮಾಡಿಕೊಳ್ಳಿ. ಕಲಿಕೆಯಲ್ಲಿ ಸಂಪೂರ್ಣ ತೊಡಗಿಸಿಕೊಳ್ಳಿ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗೆಲ್ಲುವ ಕನಸು ಕಟ್ಟಿ. ಸ್ವಾವಲಂಬಿ ಬದುಕಿನ ಪಾಠ ಕಲಿತು ಸಮಾಜಕ್ಕೆ ಕೊಡುಗೆ ನೀಡುವ ವ್ಯಕ್ತಿತ್ವ ರೂಪಿಸಿಕೊಳ್ಳಿ’ ಎಂದು ತಿಳಿಸಿದರು.

ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಸಿದ್ದೇಶ್ವರಿ, ಶಿಕ್ಷಕರಾದ ಭವಾನಿ, ಸುಗುಣಾ, ಕೆ.ಲೀಲಾ, ಫರೀದಾ, ವೆಂಕಟರೆಡ್ಡಿ, ಶ್ರೀನಿವಾಸಲು, ಡಿ.ಚಂದ್ರಶೇಖರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.