ADVERTISEMENT

ತೆರಿಗೆ ಬಾಕಿ: ಚಿತ್ರಮಂದಿರದ ಮೇಲೆ ದಾಳಿ

ಕಾಲಾವಕಾಶ ನಿರಾಕರಣೆ: ಸ್ಥಳದಲ್ಲೇ ₹ 10 ಲಕ್ಷ ವಸೂಲಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2020, 14:50 IST
Last Updated 5 ಮಾರ್ಚ್ 2020, 14:50 IST
ಬಾಕಿ ತೆರಿಗೆ ವಸೂಲಿಗಾಗಿ ಕೋಲಾರದ ಭವಾನಿ ಚಿತ್ರಮಂದಿರದ ಮೇಲೆ ಗುರುವಾರ ದಾಳಿ ನಡೆಸಿದ ನಗರಸಭೆ ಅಧಿಕಾರಿಗಳೊಂದಿಗೆ ಚಿತ್ರಮಂದಿರದ ಮಾಲೀಕರು ವಾಗ್ವಾದ ನಡೆಸಿದರು.
ಬಾಕಿ ತೆರಿಗೆ ವಸೂಲಿಗಾಗಿ ಕೋಲಾರದ ಭವಾನಿ ಚಿತ್ರಮಂದಿರದ ಮೇಲೆ ಗುರುವಾರ ದಾಳಿ ನಡೆಸಿದ ನಗರಸಭೆ ಅಧಿಕಾರಿಗಳೊಂದಿಗೆ ಚಿತ್ರಮಂದಿರದ ಮಾಲೀಕರು ವಾಗ್ವಾದ ನಡೆಸಿದರು.   

ಕೋಲಾರ: ನಗರಸಭೆಗೆ ಹಲವು ವರ್ಷಗಳಿಂದ ತೆರಿಗೆ ಪಾವತಿಸದೆ ವಂಚಿಸಿದ ನಗರದ ಭವಾನಿ ಚಿತ್ರಮಂದಿರದ ಮೇಲೆ ಗುರುವಾರ ದಾಳಿ ನಡೆಸಿದ ನಗರಸಭೆ ಆಯುಕ್ತ ಶ್ರೀಕಾಂತ್ ನೇತೃತ್ವದ ಅಧಿಕಾರಿಗಳ ತಂಡವು ₹ 10 ಲಕ್ಷ ವಸೂಲಿ ಮಾಡಿತು.

ಚಿತ್ರಮಂದಿರ ಕಟ್ಟಡದ ಮಾಲೀಕ ಮುನಿಸ್ವಾಮಪ್ಪ ಅವರು 13 ವರ್ಷಗಳ ಸುಮಾರು ₹ 31 ಲಕ್ಷ ತೆರಿಗೆ ಬಾಕಿ ಉಳಿಸಿಕೊಂಡಿದ್ದರು. ತೆರಿಗೆ ಪಾವತಿಸುವಂತೆ ನಗರಸಭೆ ಅಧಿಕಾರಿಗಳು ಹಲವು ಬಾರಿ ನೋಟಿಸ್‌ ನೀಡಿದರೂ ಮಾಲೀಕರು ತೆರಿಗೆ ಕಟ್ಟಿರಲಿಲ್ಲ.

ಹೀಗಾಗಿ ದಾಳಿ ನಡೆಸಿದ ಅಧಿಕಾರಿಗಳು ಚಿತ್ರಮಂದಿರಕ್ಕೆ ಬೀಗ ಹಾಕಲು ಮುಂದಾದರು. ಕಟ್ಟಡದ ಬಾಡಿಗೆದಾರರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಇದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು.

ADVERTISEMENT

ಬಳಿಕ ಸ್ಥಳಕ್ಕೆ ಬಂದ ಮಾಲೀಕರ ಮುನಿಸ್ವಾಮಪ್ಪ ಅವರು ತೆರಿಗೆ ಪಾವತಿಗೆ 15 ದಿನಗಳ ಕಾಲಾವಕಾಶ ನೀಡುವಂತೆ ಕೋರಿದರು. ಇದಕ್ಕೆ ನಿರಾಕರಿಸಿದ ಆಯುಕ್ತರು, ‘ಈಗಾಗಲೇ ಸಾಕಷ್ಟು ಕಾಲಾವಕಾಶ ಕೊಟ್ಟಿದ್ದೇವೆ. ಬಾಕಿ ತೆರಿಗೆಯಲ್ಲಿ ಸ್ವಲ್ಪ ಪಾವತಿಸಿದರೂ ಕಾಲಾವಕಾಶ ನೀಡುತ್ತೇವೆ’ ಎಂದು ಹೇಳಿದರು. ಇದಕ್ಕೆ ಒಪ್ಪಿದ ಮಾಲೀಕರು ಸ್ಥಳದಲ್ಲೇ ₹ 10 ಲಕ್ಷ ಮೊತ್ತದ ಚೆಕ್ ನೀಡಿದರು.

ಮೀನಮೇಷ: ‘ಕಟ್ಟಡದ ಮೂಲ ಮಾಲೀಕನಿಂದ ಚಿತ್ರಮಂದಿರ ಖರೀದಿಸಿದ್ದೇವೆ. ಖಾತೆ ಮಾಡಿಕೊಡಲು 2007ರಲ್ಲೇ ನಗರಸಭೆಗೆ ₹ 57 ಸಾವಿರ ತೆರಿಗೆ ಪಾವತಿಸಿದ್ದೇವೆ. ಆದರೆ, ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಅಚಾತುರ್ಯ ನಡೆದಿದೆ. ಇದಕ್ಕೆ ಹೊಣೆ ಯಾರು? ನೋಂದಣಿ ಇಲಾಖೆ ಆದೇಶದ ಮೇರೆಗೆ ತೆರಿಗೆ ಪಾವತಿ ಮಾಡಿಸಿಕೊಳ್ಳಬೇಕು’ ಎಂದು ಮುನಿಸ್ವಾಮಪ್ಪ ಹೇಳಿದರು.

‘ಚಿತ್ರಮಂದಿರದ ಮಾಲೀಕತ್ವವು ಪಾಲುದಾರಿಕೆ ಸಂಸ್ಥೆಯ ಹೆಸರಿನಲ್ಲಿದ್ದರೂ ಖಾತೆ ಮಾಡಿಲ್ಲ. ಈ ತಕರಾರಿನ ಕಾರಣಕ್ಕೆ ತೆರಿಗೆ ಕಟ್ಟಿಲ್ಲ. ನಾನು ಈ ಆಸ್ತಿಯನ್ನು ಹಿಂದಿನ ಮಾಲೀಕ ರಾಮಚಂದ್ರ ಎಂಬುವರಿಂದ ಖರೀದಿಸಿದ್ದೆ. ಈ ಸಂಬಂಧ ಹೈಕೋರ್ಟ್‌ನಲ್ಲಿ ತಕರಾರು ವಿಚಾರಣೆ ನಡೆದು ನಮ್ಮ ಪರವಾಗಿ ತೀರ್ಪು ಬಂದಿದೆ. ನ್ಯಾಯಾಲಯದ ತೀರ್ಪಿನ ದಾಖಲೆಪತ್ರಗಳನ್ನು ನಗರಸಭೆಗೆ ಸಲ್ಲಿಸಿದರೂ ಅಧಿಕಾರಿಗಳು ಖಾತೆ ಮಾಡಿಕೊಡಲು ಮೀನಮೇಷ ಎಣಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಭಿವೃದ್ಧಿಗೆ ಸಹಕರಿಸಿ: ‘₹ ೩೧ ಲಕ್ಷ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಭವಾನಿ ಚಿತ್ರಮಂದಿರ ಕಟ್ಟಡದ ಮಾಲೀಕರು ಪಾವತಿಗೆ ೩ ತಿಂಗಳ ಕಾಲಾವಕಾಶ ಕೇಳಿದ್ದಾರೆ. ಆದರೆ, ೧೫ ದಿನಗಳ ಸಮಯಾವಕಾಶ ನೀಡಿದ್ದೇವೆ’ ಎಂದು ಆಯುಕ್ತ ಶ್ರೀಕಾಂತ್‌ ವಿವರಿಸಿದರು.

‘ನಗರದಲ್ಲಿ ಇದೇ ರೀತಿ ಹಲವು ಸಂಸ್ಥೆಗಳು ಹಾಗೂ ವಾಣಿಜ್ಯ ಸಮುಚ್ಚಯದವರು ತೆರಿಗೆ ಬಾಕಿ ಉಳಿಸಿಕೊಂಡಿದ್ದು, ವಸೂಲಾತಿಗೆ ಕ್ರಮ ಕೈಗೊಂಡಿದ್ದೇವೆ. ಸಾರ್ವಜನಿಕರು ಸಕಾಲದಲ್ಲಿ ಬಾಕಿ ತೆರಿಗೆ ಪಾವತಿಸಿ ನಗರದ ಅಭಿವೃದ್ಧಿಗೆ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ಅಧಿಕಾರಿಗಳು ನಗರದ ಪ್ರತಿಷ್ಠಿತ ಅಂಗಡಿ ಮಳಿಗೆಗಳು, ಚರ್ಚ್‌ನ ವಾಣಿಜ್ಯ ಸಮುಚ್ಚಯದ ಮೇಲೂ ದಾಳಿ ನಡೆಸಿ ತೆರಿಗೆ ವಸೂಲಿ ಮಾಡಿದರು. ನಗರಸಭೆ ಕಂದಾಯ ನಿರೀಕ್ಷಕ ಚಂದ್ರು, ವ್ಯವಸ್ಥಾಪಕ ತ್ಯಾಗರಾಜ್, ಸಿಬ್ಬಂದಿ ಸುರೇಂದ್ರಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.