ADVERTISEMENT

ಪಟ್ಟಭದ್ರ ಹಿತಾಸಕ್ತರಿಗೆ ಪಾಠ ಕಲಿಸಿ: ಡಿಸಿಸಿ ಬ್ಯಾಂಕ್‌ ನಿರ್ದೇಶಕ ಅನಿಲ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 12:34 IST
Last Updated 19 ಆಗಸ್ಟ್ 2021, 12:34 IST
ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಹಾಗೂ ನಿರ್ದೇಶಕ ಎಂ.ಎಲ್‌.ಅನಿಲ್‌ಕುಮಾರ್‌ ಕೋಲಾರದಲ್ಲಿ ಗುರುವಾರ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಸಾಲದ ಚೆಕ್ ವಿತರಿಸಿದರು
ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಹಾಗೂ ನಿರ್ದೇಶಕ ಎಂ.ಎಲ್‌.ಅನಿಲ್‌ಕುಮಾರ್‌ ಕೋಲಾರದಲ್ಲಿ ಗುರುವಾರ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಸಾಲದ ಚೆಕ್ ವಿತರಿಸಿದರು   

ಕೋಲಾರ: ‘ರೈತರು, ಮಹಿಳೆಯರ ಆರ್ಥಿಕ ಸದೃಢತೆಗೆ ಸಂಕಲ್ಪ ತೊಟ್ಟಿರುವ ಬ್ಯಾಂಕ್‌ನ ಅಭಿವೃದ್ದಿ ಸಹಿಸಲಾಗದೆ ಅಪಪ್ರಚಾರ ಮಾಡುತ್ತಿರುವ ಕೆಲ ಪಟ್ಟಭದ್ರ ಹಿತಾಸಕ್ತರಿಗೆ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ತಕ್ಕ ಪಾಠ ಕಲಿಸಬೇಕು’ ಎಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಂ.ಎಲ್.ಅನಿಲ್‌ಕುಮಾರ್ ಹೇಳಿದರು.

ಇಲ್ಲಿ ಗುರುವಾರ ತಾಲ್ಲೂಕಿನ ವ್ಯಾಪ್ತಿಯ 15 ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ₹ 75 ಲಕ್ಷ ಬಡ್ಡಿರಹಿತ ಸಾಲದ ಚೆಕ್ ವಿತರಿಸಿ ಮಾತನಾಡಿ, ‘ಮಹಿಳೆಯರನ್ನು ಮೀಟರ್ ಬಡ್ಡಿ ದಂಧೆಯಿಂದ ಪಾರು ಮಾಡಲು ಸ್ತ್ರೀಶಕ್ತಿ ಸಂಘಗಳಿಗೆ ದೇಶದಲ್ಲೇ ಅತಿ ಹೆಚ್ಚು ಸಾಲ ನೀಡಿದ ಹೆಗ್ಗಳಿಕೆ ಡಿಸಿಸಿ ಬ್ಯಾಂಕ್‌ನದು. ಕೆಲವರಿಗೆ ಇದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ’ ಎಂದರು.

‘6 ವರ್ಷಗಳ ಹಿಂದೆ ಡಿಸಿಸಿ ಬ್ಯಾಂಕ್ ದಿವಾಳಿಯಾಗಿ ತನ್ನ ಅಸ್ತಿತ್ವ ಕಳೆದುಕೊಂಡು ಬೆಂಗಳೂರು ಡಿಸಿಸಿ ಬ್ಯಾಂಕ್‌ನ ಜತೆ ವಿಲೀನಗೊಳಿಸುವ ಪ್ರಯತ್ನ ನಡೆದಿತ್ತು. ನಮ್ಮ ಆಡಳಿತ ಮಂಡಳಿ ಬ್ಯಾಂಕ್‌ಗೆ ಮರುಜೀವ ನೀಡಿ ಯಾವುದು ಕಪ್ಪು ಚುಕ್ಕೆ ಬಾರದಂತೆ ಎಚ್ಚರಿಕೆಯಿಂದ ಆಡಳಿತ ನಿರ್ವಹಿಸುವ ಮೂಲಕ ರಾಜ್ಯದಲ್ಲಿ ನಂ 1 ಸ್ಥಾನ ಪಡೆದಿದೆ’ ಎಂದು ತಿಳಿಸಿದರು.

ADVERTISEMENT

‘ಸ್ವಸಹಾಯ ಸಂಘದ ಮಹಿಳೆಯರಿಗೆ ಭದ್ರತೆ ಇಲ್ಲದೆ ಲಕ್ಷಾಂತರ ರೂಪಾಯಿ ಸಾಲ ಕೊಡುವ ಮೂಲಕ ಅವರ ಸ್ವಾವಲಂಬಿ ಬದುಕಿಗೆ ನೆರವಾಗಿದ್ದೇವೆ. ಮಹಿಳೆಯರೇ ಬ್ಯಾಂಕ್‌ನ ಶಕ್ತಿಯಾಗಿದ್ದು, ಅವರಿಂದ ಬ್ಯಾಂಕ್‌ಗೆ ಸುಮಾರು ₹ 350 ಕೋಟಿ ಠೇವಣಿ ಹರಿದು ಬಂದಿದೆ. ನಬಾರ್ಡ್ ನೆರವಿನಿಂದ 6 ಲಕ್ಷ ಮಹಿಳೆಯರಿಗೆ ಸಾವಿರ ಕೋಟಿ ಸಾಲ ವಿತರಿಸಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಡಳಿತಾವಧಿಯಲ್ಲಿ ಬ್ಯಾಂಕ್‌ ರೈತರಿಗೆ ₹ 3 ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡಿದೆ. ₹ 350 ಕೋಟಿ ಸಾಲದ ಬಡ್ಡಿ ಮನ್ನಾ ಮಾಡಿದೆ. ಠೇವಣಿ ಹಣ ₹ 500 ಕೋಟಿಗೆ ಏರಿಕೆಯಾಗಬೇಕಿದ್ದು, ಮಹಿಳೆಯರು ತಮ್ಮ ಉಳಿತಾಯ ಖಾತೆಗಳನ್ನು ಡಿಸಿಸಿ ಬ್ಯಾಂಕ್‌ನಲ್ಲಿ ತೆರೆದು ಪೋಷಿಸಬೇಕು’ ಎಂದು ಮನವಿ ಮಾಡಿದರು.

ಬದುಕಿಗೆ ಆಸರೆ: ‘ವರಮಹಾಲಕ್ಷ್ಮಿ ಹಬ್ಬವು ಮಹಿಳೆಯರಿಗೆ ವಿಶೇಷತೆಯಿಂದ ಕೊಡಿದೆ. ಬ್ಯಾಂಕ್‌ ನೀಡಿರುವ ಸಾಲವು ಮನೆಗಳಲ್ಲಿ ಮತ್ತಷ್ಟು ಸಂತೃಪ್ತಿ ತುಂಬಿ ಸ್ವಾವಲಂಬಿ ಬದುಕಿಗೆ ಆಸರೆಯಾಗಲಿ’ ಎಂದು ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಆಶಿಸಿದರು.

‘ಮಹಿಳೆಯರು ಸಂಘದಲ್ಲಿನ ಉಳಿತಾಯದ ಜತೆಗೆ ತಮ್ಮ ಕುಟುಂಬದ ಎಲ್ಲಾ ವಹಿವಾಟುಗಳನ್ನು ಡಿಸಿಸಿ ಬ್ಯಾಂಕ್‌ನಲ್ಲೇ ಮುಂದುವರಿಸಿದರೆ ಮತ್ತಷ್ಟು ಪ್ರಗತಿ ಸಾಧಿಸಲು ಸಾಧ್ಯ. ಮಹಿಳೆಯರ ಮೇಲೆ ಸಂಪೂರ್ಣ ವಿಶ್ವಾಸವಿದ್ದು, ಮುಂದಿನ ದಿನಗಳಲ್ಲಿ ವೈಯಕ್ತಿಕ ವಹಿವಾಟುಗಳನ್ನು ಡಿಸಿಸಿ ಬ್ಯಾಂಕ್‌ನಲ್ಲೇ ನಡೆಸಿ’ ಎಂದು ಕೋರಿದರು.

ಬ್ಯಾಂಕ್‌ನ ನಿರ್ದೇಶಕ ಸೋಮಣ್ಣ, ಕೋಲಾರ ಕಸಬಾ ಸೂಸೈಟಿ ಅಧ್ಯಕ್ಷ ಶ್ರೀನಿವಾಸ್, ವಡಗೂರು ಸೊಸೈಟಿಯ ರಮೇಶ್, ಬ್ಯಾಂಕ್‌ನ ನಗರ ಶಾಖೆ ವ್ಯವಸ್ಥಾಪಕ ಅಂಬರೀಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.