ADVERTISEMENT

ವೇಣು ಕುಣಿತ ತಂಡದ ಕೊಳಲು ಮೋಡಿ

ಹೊರ ರಾಜ್ಯದಲ್ಲೂ ಪ್ರಸಿದ್ಧಿ

​ಪ್ರಜಾವಾಣಿ ವಾರ್ತೆ
Published 13 ಮೇ 2022, 2:13 IST
Last Updated 13 ಮೇ 2022, 2:13 IST
ವೇಣು ಕುಣಿತ ತಂಡದ ಕಲಾವಿದರು
ವೇಣು ಕುಣಿತ ತಂಡದ ಕಲಾವಿದರು   

ನಂಗಲಿ: ಕೊಳಲು ನುಡಿಸುವುದರಲ್ಲಿ ವಿಶೇಷ ಕೌಶಲ ಪಡೆದಿರುವ ಚಿನ್ನಹಳ್ಳಿ ಗ್ರಾಮದ ವೇಣು ಕುಣಿತ ತಂಡ ರಾಜ್ಯ ಮತ್ತು ಅಂತರರಾಜ್ಯ ಮಟ್ಟದ ಖ‍್ಯಾತಿ ಪಡೆದಿದೆ.

ಮುಷ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿನ್ನಹಳ್ಳಿಯ 16 ಮಂದಿ ಕೊಳಲು ವಾದಕರು ಕೊಳಲು ನುಡಿಸುವುದರಲ್ಲಿ ಪ್ರಾವೀಣ್ಯ ಪಡೆದಿದ್ದಾರೆ. ರಾಜ್ಯ ಸೇರಿದಂತೆ ಅಂತರರಾಜ್ಯಗಳಲ್ಲಿ ನಡೆಯುವ ಹಲವು ಕಾರ್ಯಕ್ರಮಗಳಲ್ಲಿ ಮೋಡಿ ಮಾಡಿದ್ದಾರೆ.

ವೇಣು ಕುಣಿತ ಕಲಾ ತಂಡ ರಚಿಸಿಕೊಂಡು ಆಂತರ್ಯದಲ್ಲಿ ಅಡಗಿರುವ ಹಾಡುಗಳಿಗೆ ಕೊಳಲಿನ ಮೂಲಕ ಭಾವನಾತ್ಮಕ ಸ್ಪರ್ಶ ನೀಡುತ್ತಿದ್ದರೆ ಎಂತಹವರೂ ತಲೆದೂಗಲೇಬೇಕು. ಹಾಗಾಗಿ, ಇವರಿಗೆ ವರ್ಷಪೂರ್ತಿ ಬೇಡಿಕೆ ತಪ್ಪಿದ್ದಲ್ಲ.

ADVERTISEMENT

17 ವರ್ಷಗಳ ಹಿಂದೆ ಮಲ್ಲಪ್ಪ ಎಂಬ ಗುರು ಕೊಳಲು ನುಡಿಸುವುದನ್ನು ಗ್ರಾಮದ ಕೆಲವರಿಗೆ ಹೇಳಿಕೊಡಲು ಮುಂದೆ ಬಂದಿದ್ದರು. ಆಗ ಅವರನ್ನು ಎಲ್ಲರೂ ಹೀಯಾಳಿಸಿದರು. ಗ್ರಾಮಸ್ಥರನ್ನು ಕೆಡಿಸುತ್ತಿದ್ದಾರೆ ಎಂದು ಮಾತನಾಡಿಕೊಂಡವರೇ ಹೆಚ್ಚು. ಈಗ ಕೊಳಲು ನುಡಿಸುವುದರಲ್ಲಿ ಅಂತರರಾಜ್ಯ ಮಟ್ಟದ ಖ‍್ಯಾತಿಗಳಿಸಿರುವ ಕಲಾವಿದರನ್ನು ಕಂಡರೆ ಗ್ರಾಮಸ್ಥರಿಗೆ ಎಲ್ಲಿಲ್ಲದ ಪ್ರೀತಿ ಮತ್ತು ಗೌರವ ಮೂಡುತ್ತದೆ ಎಂದು ಸಂತೋಷದಿಂದ ಹೇಳುತ್ತಾರೆ ಗ್ರಾಮಸ್ಥ ಮುನಿರಾಜ್.

ಈಗಾಗಲೇ ರಾಜ್ಯದ ವಿವಿಧೆಡೆ ಸೇರಿದಂತೆ ನೆರೆಯ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಸಾವಿರಾರು ಕಾರ್ಯಕ್ರಮಗಳನ್ನು ನೀಡಿರುವುದು ಈ ತಂಡದ ಹೆಗ್ಗಳಿಕೆ.

ಎಲ್ಲರೂ ಸೇರಿ ಕೊಳಲು ನುಡಿಸುತ್ತಾ ಡ್ರಮ್, ಜಾಗಟೆ, ಡೋಲು ಹಾಗೂ ಪೊಂಬ ಎಂಬ ಸಲಕರಣೆ ಮೂಲಕ ಸಂಗೀತ ಸುಧೆ ಹರಿಸುತ್ತಾರೆ. ನಾದಕ್ಕೆ ತಕ್ಕಂತೆ ತಮ್ಮದೇ ಶೈಲಿಯಲ್ಲಿ ನೃತ್ಯ ಮಾಡುವುದು ಈ ತಂಡದ ವಿಶೇಷ. ಒಬ್ಬರಿಗೊಬ್ಬರು ಮುಖಗಳನ್ನು ನೋಡಿಕೊಂಡು ನಸುನಗುತ್ತಾ ಕೊಳಲು ನುಡಿಸುವ ಹಾಗೂ ವಿಭಿನ್ನವಾದ ಹಾಡುಗಳನ್ನು ಕೊಳಲಿನಲ್ಲಿ ನುಡಿಸುವುದನ್ನು ನೋಡುವುದೇ ಚೆಂದ.

ಹಿಂದೂಗಳ ಪವಿತ್ರ ಆಚರಣೆಗಳಲ್ಲಿ ಒಂದಾದ ಕಾವಡಿ ಸಮಯದಲ್ಲಿ ಇವರಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ. ಆದ್ದರಿಂದ ಕಾವಡಿ ಸಮಯದಲ್ಲಿ ಮನೆ ಬಿಟ್ಟು ಹೊರಟರೆ ಮತ್ತೆ ಮನೆ ಸೇರಲು ಹಲವು ದಿನಗಳೇ ಕಳೆಯುತ್ತವೆ ಎನ್ನುತ್ತಾರೆ ತಂಡದ ಸದಸ್ಯ ಶ್ರೀನಿವಾಸ್.

ಐದು, ಎಂಟು ವರ್ಷ ಅಥವಾ ಹತ್ತು ವರ್ಷಗಳಿಗೊಮ್ಮೆ ನಡೆಯುವ ಕುರುಬ ಸಮುದಾಯದ ದ್ಯಾವರ ಕಾರ್ಯಕ್ರಮಗಳಲ್ಲಿ ಕೊಳಲು ವಾದಕರು ಇರಲೇಬೇಕು. ಅದೊಂದು ರೂಢಿಗತ ಸಂಪ್ರದಾಯ. ಎಲ್ಲೇ ದ್ಯಾವರ ನಡೆದರೂ ಈ ತಂಡ ಭಾಗವಹಿಸುವುದು ತಪ್ಪಲ್ಲ.

‘ಕೊಳಲು ನುಡಿಸುವುದನ್ನೇ ನಂಬಿ ಬದುಕುವವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ತಿಂಗಳಿಗೆ ₹ 2 ಸಾವಿರ ಮಾಸಾಶನ ಸಿಗುತ್ತಿದೆ. ಇದು ಸಂಸಾರಕ್ಕೆ ಸಾಕಾಗುವುದಿಲ್ಲ. ಮಾಸಾಶನದ ಮೊತ್ತ ಹೆಚ್ಚಿಸಿದರೆ ಜೀವನ ಸಾಗಿಸಲು ಅನುಕೂಲವಾಗುತ್ತದೆ’ ಎನ್ನುತ್ತಾರೆ ಕೊಳಲು ವಾದಕಸಿಗರಪ್ಪ.

‘ದೇಸಿ ಕಲಾವಿದರು ಕೊಳಲು ವಾದನವನ್ನು ನಂಬಿಕೊಂಡೇ ಬದುಕು ಕಟ್ಟಿಕೊಂಡಿದ್ದೇವೆ. ಸರ್ಕಾರದಿಂದ ಹೆಚ್ಚಿನ ಸೌಲಭ್ಯವನ್ನು ಕಲ್ಪಿಸಿಕೊಡಬೇಕು. ಜೊತೆಗೆ, ತಂಡದ ಎಲ್ಲಾ ಕಲಾವಿದರಿಗೂ ವಿಮಾ ಸೌಲಭ್ಯ ಕಲ್ಪಿಸಿಕೊಡಲು ಸಂಬಂಧಪಟ್ಟ ಇಲಾಖೆಯು ಮುಂದಾಗಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.