ADVERTISEMENT

ರೈತರಿಗೆ ಹೆಣ್ಣು ಕೊಡದ ಪರಿಸ್ಥಿತಿ: ವಿಷಾದ

ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಂಗಳನಾಥ ಸ್ವಾಮೀಜಿ ಬೇಸರ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 4:57 IST
Last Updated 28 ನವೆಂಬರ್ 2022, 4:57 IST
ಕೋಲಾರ ತಾಲ್ಲೂಕಿನ ತಿರುಮಲಕೊಪ್ಪ ಗ್ರಾಮದಲ್ಲಿ ಭಾನುವಾರ ಕೆಂಪೇಗೌಡ ಪ್ರತಿಭೆ ಅನಾವರಣ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಕಾರ್ಯದರ್ಶಿ ಮಂಗಳನಾಥ ಸ್ವಾಮೀಜಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್‌, ವಿಧಾನ ಪರಿಷತ್‌ ಸದಸ್ಯ ಇಂಚರ ಗೋವಿಂದರಾಜು, ಮುಖಂಡರಾದ ವಕ್ಕಲೇರಿ ರಾಮು ಇದ್ದಾರೆ
ಕೋಲಾರ ತಾಲ್ಲೂಕಿನ ತಿರುಮಲಕೊಪ್ಪ ಗ್ರಾಮದಲ್ಲಿ ಭಾನುವಾರ ಕೆಂಪೇಗೌಡ ಪ್ರತಿಭೆ ಅನಾವರಣ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಕಾರ್ಯದರ್ಶಿ ಮಂಗಳನಾಥ ಸ್ವಾಮೀಜಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್‌, ವಿಧಾನ ಪರಿಷತ್‌ ಸದಸ್ಯ ಇಂಚರ ಗೋವಿಂದರಾಜು, ಮುಖಂಡರಾದ ವಕ್ಕಲೇರಿ ರಾಮು ಇದ್ದಾರೆ   

ವಕ್ಕಲೇರಿ (ಕೋಲಾರ): ‘ರೈತರು ದೇಶದ ಬೆನ್ನೆಲುಬು ಎನ್ನುವ ಕಾಲದಲ್ಲೇ ರೈತರಿಗೆ ಹೆಣ್ಣು ಕೊಡದ ಪರಿಸ್ಥಿತಿ ಉದ್ಭವಿಸಿದ್ದು, ಇಂತಹ ವಾತಾವರಣ ದೂರವಾಗಿ ರೈತರ ಮನೆ ಬಾಗಿಲಿಗೆ ಎಲ್ಲರೂ ಬರುವಂತಾಗಬೇಕು’ ಎಂದು ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಕಾರ್ಯದರ್ಶಿ ಮಂಗಳನಾಥ ಸ್ವಾಮೀಜಿ ತಿಳಿಸಿದರು.

ಹೋಬಳಿಯ ತಿರುಮಲಕೊಪ್ಪ ಗ್ರಾಮದಲ್ಲಿ ಭಾನುವಾರ ಕೆಂಪೇಗೌಡ ಪ್ರತಿಮೆಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮನುಷ್ಯನಿಗೆ ಗಟ್ಟಿ ಮೊಸರು, ಹಾಲು, ತುಪ್ಪ ಬೇಕು. ಆದರೆ, ಸಗಣಿ, ಮಣ್ಣು ಮುಟ್ಟಬಾರದು ಅಂದರೆ ಹೇಗೆ? ರೈತರಿಗೆ ಶಕ್ತಿ ತುಂಬಬೇಕು. ರೈತನ ದುಡಿಮೆಯಿಂದ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು’ ಎಂದರು.

ADVERTISEMENT

‘‌ಕೆಂಪೇಗೌಡರು ಸಮಾಜದ ಎಲ್ಲಾ ಜನಾಂಗದ ಏಳಿಗೆಗಾಗಿ ಶ್ರಮಿಸಿದ್ದಾರೆ. ಅದೇ ರೀತಿಯಲ್ಲಿ ಸಮಾಜದ ಪ್ರತಿಯೊಬ್ಬರ ಅವಶ್ಯದ ತಳಪಾಯವನ್ನೂ ಹಾಕಿಕೊಟ್ಟಿದ್ದಾರೆ. ಒಕ್ಕಲಿಗರು ಯಾವುದೇ ಕ್ಷೇತ್ರದಲ್ಲಿ ಕಡಿಮೆಯಿಲ್ಲ. ಸಾಹಿತ್ಯ, ರಾಜಕೀಯ, ಧಾರ್ಮಿಕ ಕ್ಷೇತ್ರದಲ್ಲಿ ತಮ್ಮ ಶಕ್ತಿಯನ್ನು ತೋರಿಸಿದ್ದಾರೆ. ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ, ಶಿಸ್ತು ಮೂಡಿಸಿ ಜಾಗೃತಗೊಳಿಸಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಮಾತನಾಡಿ, ‘ಕೆಂಪೇಗೌಡರು ಸುಮಾರು 500 ವರ್ಷಗಳ ಹಿಂದೆಯೇ ಎಲ್ಲಾ ಜಾತಿ, ಧರ್ಮಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದರ ಸಾಕ್ಷಿ ಬಿಟ್ಟು ಹೋಗಿದ್ದಾರೆ. ಬೆಂಗಳೂರಿನಲ್ಲಿ ಎಲ್ಲಾ ಸಮಾಜಗಳ ವ್ಯಾಪಾರಕ್ಕೆ ಅನುಕೂಲವಾಗುವಂತೆ ಪೇಟೆಗಳನ್ನು ನಿರ್ಮಿಸಿದ್ದಾರೆ. ಕೆಂಪೇಗೌಡರ ಪೂರ್ವಜರ ಕೋಲಾರ ಜಿಲ್ಲೆಯ ಬಂಗಾರ
ಪೇಟೆಯ ದೊಡ್ಡುರು ಕರಪನಹಳ್ಳಿಯವರು ಎಂಬ ಹೆಜ್ಜೆ ಗುರುತುಗಳಿವೆ. ಕಾರ್ಯಕ್ರಮ ಮಾಡುವುದು ದೊಡ್ಡದಲ್ಲ, ಕೆಂಪೇಗೌಡರ ಜೀವನ ಆದರ್ಶಗಳನ್ನು ಅರ್ಥಮಾಡಿಕೊಂಡು ಜೀವನ ರೂಪಿಸಿಕೊಳ್ಳುವುದೇ ಅವರಿಗೆ ಕೊಡುವ ಗೌರವ’ ಎಂದರು.

ವಿಧಾನ ಪರಿಷತ್‌ ಸದಸ್ಯ ಇಂಚರ ಗೋವಿಂದರಾಜು, ‘ಕೋಲಾರ ಜಿಲ್ಲಾ ಕೇಂದ್ರದಲ್ಲಿ ಕೆಂಪೇಗೌಡ ಪ್ರತಿಭೆ ನಿರ್ಮಾಣ ಮಾಡಲು ಇನ್ನೂ ಸಾಧ್ಯವಾಗಲಿಲ್ಲ. ಆದರೆ, ಸಣ್ಣ ಗ್ರಾಮದಲ್ಲಿ ಪ್ರತಿಭೆ ನಿರ್ಮಿಸಿ ಜಿಲ್ಲೆಗೆ ಮಾದರಿಯಾಗಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್, ‘ಸಾಮಾಜಿಕ ಬದುಕಿನಲ್ಲಿ ಕೆಂಪೇಗೌಡರ ಸಿದ್ಧಾಂತವನ್ನು ಎಲ್ಲರೂ ಮೈಗೂಡಿಸಿಕೊಂಡು ಹೋಗಬೇಕು. ಕೆಲವರು ಸಮುದಾಯಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದ್ದಾರೆ. ಆದರೆ, ಗ್ರಾಮದಲ್ಲಿರುವ ಎಲ್ಲಾ ಜನಾಂಗದ ಒಗ್ಗಟ್ಟು ಇಡೀ ಜಿಲ್ಲೆಗೆ ಮಾದರಿಯಾಗುವಂತೆ ಮಾಡಿದ್ದಾರೆ’ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ವಿ.ಶಂಕರಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ವಕ್ಕಲೇರಿ ರಾಮು, ಸೊಸೈಟಿ ಅಧ್ಯಕ್ಷ ಎಂ.ಪಾಲಾಕ್ಷಗೌಡ, ವಕ್ಕಲೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಮುರಳಿ ಮಾತನಾಡಿದರು.

ಮುಖಂಡ ಬಣಕನಹಳ್ಳಿ ನಟರಾಜ್, ಪಂಚಾಯಿತಿ ಉಪಾಧ್ಯಕ್ಷೆ ಚೆನ್ನಮ್ಮ, ಗ್ರಾಮದ ಮುಖಂಡರಾದ ಗೋಪಾಲಪ್ಪ, ಮುನೇಗೌಡ, ವಕೀಲ ಮಂಜುನಾಥ್, ನಾರಾಯಣಸ್ವಾಮಿ, ಮೋಹನ್, ಸಂತೋಷ್, ಮುರಳಿ, ವಿಜಯ್, ಭರತ್, ಕಾಂತರಾಜ್ ರವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.