ಶ್ರೀನಿವಾಸಪುರ: ಇಲ್ಲಿನ ಪುರಸಭೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಸಮ ಬಲದ ಹೋರಾಟ ಶುರುವಾಗಿದೆ. ಅಭ್ಯರ್ಥಿಗಳ ಆಯ್ಕೆಗೆ ತಾಲ್ಲೂಕಿನ ಹಾಲಿ ಹಾಗೂ ಮಾಜಿ ಶಾಸಕರ ಕೃಪೆಯಾಗಬೇಕು.
23 ಸದಸ್ಯ ಬಲ ಹೊಂದಿರುವ ಪುರಸಭೆಯಲ್ಲಿ ಜೆಡಿಎಸ್ ಒಬ್ಬ ಪಕ್ಷೇತರ ಅಭ್ಯರ್ಥಿ ಬೆಂಬಲದೊಂದಿಗೆ 12 ಸ್ಥಾನಗಳನ್ನು ಪಡೆದುಕೊಂಡಿದೆ. ಕಾಂಗ್ರೆಸ್ ಮೂವರು ಪಕ್ಷೇತರ ಅಭ್ಯರ್ಥಿಗಳ ಬೆಂಬಲದೊಂದಿಗೆ 11 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಶಾಸಕರ ಮತವನ್ನು ಗಣನೆಗೆ ತೆಗೆದುಕೊಂಡರೆ, ಜೆಡಿಎಸ್ ಹಾಗೂ ಕಾಂಗ್ರೆಸ್ ಬಲ ಸಮವಾಗುತ್ತದೆ.
ಈ ಬಾರಿ ಪುರಸಭೆಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದರೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಜೆಡಿಎಸ್‌ನಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಎಂ.ಎಸ್.ಲಲಿತಾ ಹಾಗೂ ಕೆ.ಎಸ್.ಸುನಿತಾ ಆರಿಸಿ ಬಂದಿದ್ದಾರೆ. ಇವರು ಕ್ರಮವಾಗಿ ವಾರ್ಡ್ ನಂ 11 ಹಾಗೂ 23ರಿಂದ ಗೆಲುವು ಸಾಧಿಸಿದ್ದಾರೆ. 20ನೇ ವಾರ್ಡ್‌ನಿಂದ ಸಾಮಾನ್ಯ ಮೀಸಲಾತಿ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಎನ್.ನೀಲಾವತಿ ಗೆದ್ದು ಬಂದಿದ್ದಾರೆ.
ಈಗ ಎಂ.ಎಸ್.ಲಲಿತಾ, ಕೆ.ಎಸ್.ಸುನಿತಾ ಹಾಗೂ ಕಾಂಗ್ರೆಸ್‌ನ ಎನ್.ನೀಲಾವತಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹರಾಗಿದ್ದಾರೆ. ಆದರೆ ಇವರಲ್ಲಿ ಯಾರೊಬ್ಬರೂ ಸ್ವತಂತ್ರವಾಗಿ ಸ್ಪರ್ಧಿಸುವ ಧೈರ್ಯ ತೋರುತ್ತಿಲ್ಲ. ಹಾಲಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಹಾಗೂ ಮಾಜಿಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರ ಮರ್ಜಿಗೆ ಒಳಗಾಗಿದ್ದಾರೆ. ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿದ ಬಳಿಕ ಅವರು ಒಂದು ನಿರ್ಧಾರಕ್ಕೆ ಬರುತ್ತಾರೆ. ಅದಕ್ಕೆ ಆಯಾ ಪಕ್ಷದ ಎಲ್ಲರೂ ಬದ್ಧರಾಗಿ ಇರುಬೇಕಾಗುತ್ತದೆ. ಇದು ಹಿಂದಿನಿಂದಲೂ ನಡೆದು ಬಂದಿರುವ ಪದ್ಧತಿ.
ಅಧ್ಯಕ್ಷರ ಮೀಸಲಾತಿ ಪರಿಶಿಷ್ಟ ಜಾತಿ ಮಹಿಳೆಗೆ ಬಂದಿದೆಯಾದರೂ, ಪತಿಯ ಮಾತೇ ಅಂತಿಮ. ಯಾರೇ ಅಧ್ಯಕ್ಷರಾದರೂ ಆಡಳಿತದಲ್ಲಿ ಪತಿಯ ಹಸ್ತಕ್ಷೇಪವನ್ನು ಕಡೆಗಣಿಸುವಂತಿಲ್ಲ.
ಇನ್ನು ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಉಪಾಧ್ಯಕ್ಷರ ಸ್ಥಾನದ ಪರಿಸ್ಥಿತಿಯೂ ಇದೇ ಆಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲಿ ಮೀಸಲಾತಿಗೆ ಅರ್ಹರಾದ ಮಹಿಳೆಯರಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಹೆಚ್ಚಿನ ಪೈಪೋಟಿ ಇರುವುದಿಲ್ಲವಾದ್ದರಿಂದ, ಅಲ್ಪ ಸಂಖ್ಯಾತರ ಮನವೊಲಿಸಲು ಯಾರಾದರೂ ಮುಸ್ಲಿಂ ಮಹಿಳೆಗೆ ನೀಡುವ ಸಂಭವ ಹೆಚ್ಚಾಗಿದೆ ಎಂದು ಮುಖಂಡರು ಅಭಿಪ್ರಾಯಪಡುತ್ತಾರೆ.
ಅರ್ಹ ಅಭ್ಯರ್ಥಿಗಳು ಅಥವಾ ಅವರ ಸಂಬಂಧಿಕರು ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನಕ್ಕೆ ತಾವು ಸ್ಪರ್ಧಿ ಎಂದು ಹೇಳಲು ಹಿಂಜರಿಯುತ್ತಿದ್ದಾರೆ. ಕಾರಣ ಹಾಗೆ ಹೇಳಿದರೆ ತಮ್ಮ ಮುಖಂಡರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಭಯ. ‘ನಮ್ಮ ಮುಖಂಡರು ಹೇಳಿದಂತೆ ನಡೆದುಕೊಳ್ಳುತ್ತೇವೆ. ಅವರು ಯಾರಿಗೆ ಅವಕಾಶ ನೀಡದರೂ ಸರಿ’ ಎಂಬುದು ಅರ್ಹ ಅಭ್ಯರ್ಥಿಗಳ ಅಭಿಪ್ರಾಯ.
ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಎರಡೂ ಪಕ್ಷಗಳಲ್ಲಿನ ಪಕ್ಷೇತರ ಅಭ್ಯರ್ಥಿಗಳು ಕೊನೆ ಗಳಿಗೆಯಲ್ಲಿ ಯಾವ ನಿಲುವು ತಳೆಯುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗಿ ಉಳಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.