ADVERTISEMENT

ಬಂಗಾರಪೇಟೆ | ಮನೆಗೆ ಕನ್ನ ಪ್ರಕರಣ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 14:40 IST
Last Updated 10 ಜೂನ್ 2025, 14:40 IST
ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಪೋಲಿಸ್ ಠಾಣೆಯಲ್ಲಿ ವಶ ಪಡಿಸಿಕೊಂಡ ಕಳವು ಆಭರಣಗಳು
ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಪೋಲಿಸ್ ಠಾಣೆಯಲ್ಲಿ ವಶ ಪಡಿಸಿಕೊಂಡ ಕಳವು ಆಭರಣಗಳು   

ಬಂಗಾರಪೇಟೆ: ಕಾಮಸಮುದ್ರ ಮತ್ತು ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳವು ಪ್ರಕರಣಗಳನ್ನು ಭೇದಿಸಿರುವ ಕಾಮಸಮುದ್ರ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೆ, ಆರೋಪಿಯ ಬಳಿಯಿಂದ ₹7 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ಇತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. 

ತಾಲ್ಲೂಕಿನ ಶಿವಲಿಂಗ ಗ್ರಾಮದ ಚಂದ್ರಪ್ಪ (48) ಬಂಧಿತ ಆರೋಪಿ. ಆತನ ಬಳಿಯಿದ್ದ ₹6.70 ಲಕ್ಷ ಮೌಲ್ಯದ 69 ಗ್ರಾಂ ಚಿನ್ನದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. 

ಪೊಲೇನಹಳ್ಳಿ ಗ್ರಾಮದ ಮುನಿವೆಂಕಟಪ್ಪ ಎಂಬುವರು ತಮ್ಮ ಮನೆಯಲ್ಲಿ ಕಳ್ಳತನವಾಗಿದೆ ಎಂಬ ಬಗ್ಗೆ ಏಪ್ರಿಲ್ 4ರಂದು ಕಾಮಸಮುದ್ರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ಡಿವೈಎಸ್‌ಪಿ ಎಸ್. ಪಾಂಡುರಂಗ ನೇತೃತ್ವದಲ್ಲಿ ತನಿಖೆಗೆ ಇಳಿದಿದ್ದ ಸಿಪಿಐ ಜಿ.ಸಿ. ನಾರಾಯಣಸ್ವಾಮಿ ಮತ್ತು ಪಿಎಸ್ಐ ಕಿರಣ್‌ಕುಮಾರ್ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ADVERTISEMENT

ಈ ಕಾರ್ಯಾಚರಣೆಯಲ್ಲಿ ಕಾಮಸಮುದ್ರ ಪಿಎಸ್ಐ ಬಿ.ವಿ. ಕಿರಣ್‌ ಕುಮಾರ್, ವಿಶೇಷ ಅಪರಾಧ ಪತ್ತೆ ತಂಡದ ಸಿಬ್ಬಂದಿ ಮಂಜುನಾಥರೆಡ್ಡಿ, ಮುನಾವರ್‌ಪಾಷ, ರಾಮರಾವ್, ರಾಮಕೃಷ್ಣಾರೆಡ್ಡಿ, ಮಂಜುನಾಥ, ಮಾರ್ಕೊಂಡ, ಲಕ್ಷ್ಮಣತೇಲಿ ಹಾಗೂ ಜೀಪ್ ಚಾಲಕ ಗುರುಮೂರ್ತಿ ಭಾಗಿಯಾಗಿದ್ದರು. 

ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಪೋಲಿಸ್ ಠಾಣೆಯಲ್ಲಿ ವಶ ಪಡಿಸಿಕೊಂಡ ಕಳವು ಮಾಲಿನೊಂದಿಗೆ ವಿಶೇಷ ಅಪರಾಧ ತಂಡದ ಪೊಲೀಸರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.