ADVERTISEMENT

ಬಂಗಾರಪೇಟೆ: ಮಾನವ-ಪ್ರಾಣಿ‌ ಸಂಘರ್ಷಕ್ಕೆ ತಡೆ ಎಂದು?

ಕಾಡಂಚಿನ ಗ್ರಾಮಸ್ಥರ ಅಳಲು, ಪ್ರಾಣ ಕಳೆದುಕೊಂಡ ರೈತರು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2025, 7:20 IST
Last Updated 24 ಫೆಬ್ರುವರಿ 2025, 7:20 IST
ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಆಭಯಾರಣ್ಯಕ್ಕೆ ಸೋಲಾರ್ ಬೆಲೆಯನ್ನು ಅಳವಡಿಸಿರುವುದು
ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಆಭಯಾರಣ್ಯಕ್ಕೆ ಸೋಲಾರ್ ಬೆಲೆಯನ್ನು ಅಳವಡಿಸಿರುವುದು   

ಬಂಗಾರಪೇಟೆ: ಕಾಡಂಚಿನ ಗ್ರಾಮಗಳಲ್ಲಿ ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷ ನಿರಂತರವಾಗಿ ನಡೆಯುತ್ತಲೇ ಇದೆ. ಗ್ರಾಮೀಣ ರಸ್ತೆಗಳು ಹದಗೆಟ್ಟಿವೆ. ನೀರಿನ ಅಭಾವದಿಂದ  ಜನರು ಬವಣೆಗೆ ಸಿಲುಕಿದ್ದಾರೆ. ಇದು ತಾಲ್ಲೂಕಿನ ಪ್ರಮುಖ ಸಮಸ್ಯೆ‌. ಈ ಬಾರಿ ರಾಜ್ಯ ಬಜೆಟ್‌ನಲ್ಲಿ ಪರಿಹಾರ ‌ಸಿಗಲೇಬೇಕೆಂದು ನಾಗರಿಕರ ಆಗ್ರಹವಾಗಿದೆ.

ತಾಲ್ಲೂಕಿನ ಕಾಮಸಮುದ್ರ ಮತ್ತು ಬೂದಿಕೊಟೆ ಹೋಬಳಿ ಗಡಿಭಾಗದಲ್ಲಿ ಕೃಷಿ ಜೀವನಾಧಾರವಾಗಿಸಿಕೊಂಡಿರುವ ರೈತರು ಬಹಳ ಸಮಸ್ಯೆ‌ ಎದುರಿಸುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಬೆಳೆಗಳನ್ನು ಆನೆಗಳು, ಹಂದಿಗಳು, ಜಿಂಕೆಗಳಿಂದ ರಕ್ಷಿಸಲು ಕಾವಲು ಹೋಗುವ ಸಂದರ್ಭದಲ್ಲಿ ಮಾನವ-ವನ್ಯಜೀವಿ ಸಂಘರ್ಷದಿಂದ ಈಚೆಗೆ ಗಡಿ ಭಾಗದಲ್ಲಿ 14 ರೈತರು ಪ್ರಾಣ ಕಳೆದುಕೊಂಡಿದ್ದಾರೆ.

ಕಳೆದ ಹಲವು ವರ್ಷಗಳಿಂದ ಮಾವನ–ಪ್ರಾಣಿ ಸಂಘರ್ಷದಿಂದ ರೈತರು ಆತಂಕಗೊಂಡಿದ್ದಾರೆ. ಈ ಭಾಗದಲ್ಲಿ ವಿದ್ಯುತ್ ಸಮಸ್ಯೆ‌ ಇದೆ. ಗ್ರಾಮಗಳು ಕಗ್ಗತ್ತಲಿನಲ್ಲಿವೆ. ಹೀಗಾಗಿ ಸಮಸ್ಯೆ‌ ನೀಗಿಸಿ ಸೌಲಭ್ಯ ಒದಗಿಸಬೇಕೆಂದು ಗಡಿಯಂಚಿನ ಗ್ರಾಮಸ್ಥರು, ‌ರೈತ‌ ಸಂಘದವರು‌ ಆಗ್ರಹಿಸುತ್ತಲೇ ಬಂದಿದ್ದಾರೆ.

ADVERTISEMENT

ಹದಗೆಟ್ಟ ಗ್ರಾಮೀಣ ಪ್ರದೇಶದ ರಸ್ತೆಗಳು: ಗ್ರಾಮೀಣ ಭಾಗದ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಹಲವು ರಸ್ತೆಗಳು ನಿರ್ವಹಣೆ ಕೊರತೆಯಿಂದ ಸಂಪೂರ್ಣ ಹಾಳಾಗಿವೆ. ಕೆಲ ರಸ್ತೆಗಳು ಗುಂಡಿ ಬಿದ್ದು, ಪ್ರಯಾಣಕ್ಕೆ ಪ್ರಯಾಸವನ್ನುಂಟು ಮಾಡುತ್ತಿವೆ. ರೈತರು ಈ ರಸ್ತೆಗಳಲ್ಲಿ ಸಂಚಾರ ಮಾಡಲು ಮತ್ತು ಬೆಳೆದಿರುವಂತಹ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಹರಸಾಹಸ ಪಡುವಂತಾಗಿದೆ.

ನೀರಿನ ಅಭಾವ: ಸತತವಾಗಿ ಮೂರು ವರ್ಷಗಳಿಂದ ಸಮರ್ಪಕವಾಗಿ ಮಳೆಯಾಗದ ಕಾರಣ ನೀರಿನ ಅಭಾವದಿಂದ ಸಮಸ್ಯೆ ಉಂಟಾಗಿದೆ. ಗ್ರಾಮೀಣ ಭಾಗದ ಪ್ರದೇಶಗಳಲ್ಲಿ ಬೇಸಿಗೆ ಪ್ರಾರಂಭವಾಗುವ ಮುನ್ನವೇ ಕೃಷಿಗೆ ನೀರಿನ ಅಭಾವ ಉಂಟಾಗಿದೆ. ಕೆರೆಗಳು ಒಣಗುತ್ತಿವೆ. ಈ ಕಾರಣ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಕುಡಿಯಲು ನೀರಿನ ಸಮಸ್ಯೆಯೂ ಕಾಡುತ್ತಿದೆ. ಎತ್ತಿನಹೊಳೆ ಯೋಜನೆಯು ಪ್ರಾರಂಭವಾಗಿ ದಶಕ ಕಳೆದರೂ ಜಿಲ್ಲೆಗೆ ಬಂದಿಲ್ಲ. ಈ ಯೋಜನೆ ‌ಜಿಲ್ಲೆಗೆ‌ ಬರಲು ಇನ್ನು ಎಷ್ಟು ವರ್ಷ ಕಳೆಯಬೇಕೋ ಎಂಬುದು ಜನರ ಪ್ರಶ್ನೆ.

ಬೇಸಿಗೆ ಪ್ರಾರಂಭವಾಗುತ್ತಿರುವ ಕಾರಣ ಕಾಡಿನಲ್ಲಿ ನೀರು ಮತ್ತು ಮೇವಿನ ಅಭಾವ ಉಂಟಾಗುತ್ತಿದೆ. ಕಾಡು ಪ್ರಾಣಿಗಳು ಆಹಾರ ಮತ್ತು ನೀರಿಗಾಗಿ ತಮ್ಮ ನೈಸರ್ಗಿಕ ಆವಾಸಸ್ಥಾನ ಬಿಟ್ಟು ರೈತರ ತೋಟಗಳ ಕಡೆ ಮುಖ ಮಾಡುತ್ತಿವೆ.

ಮಾರ್ಚ್ 7ರಂದು ಮುಖ್ಯಮಂತ್ರಿ ‌ಸಿದ್ದರಾಮಯ್ಯ ಮಂಡಿಸುತ್ತಿರುವ ರಾಜ್ಯ ‌ಬಜೆಟ್‌ನಲ್ಲಿ ತಾಲ್ಲೂಕಿನ ಸಮಸ್ಯೆ‌ ನೀಗಿಸಲು ಆದ್ಯತೆ ‌ನೀಡಬೇಕೆಂದು ನಾಗರಿಕರು, ಮುಖಂಡರು ಒತ್ತಾಯಿಸಿದ್ದಾರೆ. ವಿಶೇಷ ಪ್ಯಾಕೇಜ್‌ಗೆ ಮನವಿ‌ ಮಾಡಿದ್ದಾರೆ.

 ಸೋಲಾರ್ ಬೆಲೆಯನ್ನು ಅಳವಡಿಸಿರುವುದು
ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಆಭಯಾರಣ್ಯ

ಶಾಶ್ವತ ಪರಿಹಾರ ಕಲ್ಪಿಸಬೇಕು

ರಾಜ್ಯ ಸರ್ಕಾರ ಕಾಮಸಮುದ್ರ ಹೋಬಳಿ ಅರಣ್ಯ ಪ್ರದೇಶವನ್ನು ಆನೆಗಳ ವನ್ಯಧಾಮ ಎಂದು ಘೋಷಿಸಿ ಹಲವು ವರ್ಷಗಳು ಕಳೆದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ.‌ ಆನೆಗಳ ದಾಳಿಯಿಂದ ಆಗುವ ಪ್ರಾಣ ಮತ್ತು ಬೆಳೆ ನಷ್ಟಕ್ಕೆ ಈ ಬಾರಿ ಬಜೆಟ್‌ನಲ್ಲಿ ರೈತರ ಹಿತವನ್ನು ಕಾಪಾಡುವ ದೃಷ್ಟಿಯಿಂದ ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸಬೇಕು

ಆರ್.ಕೆ ಶಿವಕುಮಾರ ಕುಂದರಸನಹಳ್ಳಿ ರೈತ 

ಅಂರ್ತಜಲ ಸಂರಕ್ಷಣೆಗೆ ಆದ್ಯತೆ ಕೊಡಿ

ಎತ್ತಿನಹೊಳೆ ನೀರಿನ ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಕೋಲಾರ ಜಿಲ್ಲೆಗೆ ನೀರನ್ನು ನೀಡಬೇಕು ಮತ್ತು ಅಂತರ್ಜಲ ಸಂರಕ್ಷಣೆಗೆ ಆದ್ಯತೆ ನೀಡಬೇಕು

ರಾಜಾರೆಡ್ಡಿ‌ ಕೃಷಿಕ ಸಮಾಜ ಅಧ್ಯಕ್ಷ

ಬಂಗಾರಪೇಟೆ ಹೆದ್ದಾರಿ ನಿರ್ಮಾಣಕ್ಕೆ ಆದ್ಯತೆ ಸಿಗಲಿ 

ತಾಲ್ಲೂಕು ಕೇಂದ್ರ ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಬಂಗಾರಪೇಟೆಯಿಂದ ಕೃಷ್ಣಗಿರಿ ಮಾರ್ಗವಾಗಿ ಹೆದ್ದಾರಿ ಮತ್ತು ಬಂಗಾರಪೇಟೆಯಿಂದ ಕುಪ್ಪಂ ಮಾರ್ಗವಾಗಿ ಹೆದ್ದಾರಿ ಬಂಗಾರಪೇಟೆ ಬೂದಿಕೋಟೆ ಮಾರ್ಗವಾಗಿ ತಮಿಳುನಾಡಿನ ಹೊಸೂರು ಹೆದ್ದಾರಿ ಬೂದಿಕೋಟೆಯಿಂದ ಬೆಂಗಳೂರಿಗೆ ರಾಜ್ಯ ಹೆದ್ದಾರಿ ನಿರ್ಮಾಣ ಮಾಡಬೇಕು ಅಶ್ವಥ್ನಾಗರಿಕ ಬಂಗಾರಪೇಟೆ ಗಡಿಭಾಗ್ಯಕ್ಕೆ ಸೌಲಭ್ಯ ನೀಡಿ ಯಾವುದೇ ಸರ್ಕಾರ ಬಂದರೂ ಗಡಿಭಾಗದ ಗ್ರಾಮಗಳನ್ನು ನಿರ್ಲಕ್ಷ್ಯ ಮಾಡುತ್ತಿವೆ. ಕಾಡಂಚಿನ ಗ್ರಾಮಗಳಿಗೆ ಮೂಲ ಸೌಲಭ್ಯ ಒದಗಿಸಲು ಈ ಬಾರಿ ಆದ್ಯತೆ ನೀಡಬೇಕು

ಮಂಜುಳ ಜಯಣ್ಣ ದೋಣಿಮಡಗು ಗ್ರಾಮ ಪಂಚಾಯಿತಿ ಅಧ್ಯಕ್ಷೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.