ADVERTISEMENT

ಕೋಲಾರ: ಭೂಗತ ಪಾತಕಿ ಕವಿರಾಜ್ ಬಂಧನ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 18:39 IST
Last Updated 2 ಆಗಸ್ಟ್ 2025, 18:39 IST
<div class="paragraphs"><p>ಕವಿರಾಜ್‌</p></div>

ಕವಿರಾಜ್‌

   

ಕೋಲಾರ: ಕೊಲೆ, ದರೋಡೆ ಸೇರಿದಂತೆ ದೇಶದ ವಿವಿಧೆಡೆ ಸುಮಾರು 14 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ ಭೂಗತ ಪಾತಕಿ ಕವಿರಾಜ್ ಅಲಿಯಾಸ್ ರಾಜ್‍ ಎಂಬಾತನನ್ನು ಕೋಲಾರ ಸೈಬರ್‌ ಅಪರಾಧ ಹಾಗೂ ಮಾದಕ ವಸ್ತುಗಳ ನಿಯಂತ್ರಣ ಠಾಣೆ (ಸೆನ್‌) ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಈತನ ಮೂಲ ಉತ್ತರಾಖಂಡ-ನೇಪಾಳ ಗಡಿಭಾಗ. ಪೋಷಕರೊಂದಿಗೆ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದ. ಭೂಗತ ಪಾತಕಿಗಳಾದ ರವಿ ಪೂಜಾರಿ, ಮುತ್ತಪ್ಪ ರೈ ಅವರ ಸಹವರ್ತಿಯಾಗಿದ್ದ ವಿಚಾರವೂ ತನಿಖೆಯಿಂದ ಬಯಲಾಗಿದೆ.

ADVERTISEMENT

ಆರೋಪಿ ಕವಿರಾಜ್ 2020ರಲ್ಲಿ ನಡೆದಿದ್ದ ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣ ಸೇರಿದಂತೆ ದೇಶದಾದ್ಯಂತ 14ಕ್ಕೂ ಹೆಚ್ಚು ವಿವಿಧ ಅಪರಾಧ ಪ್ರಕರಣಗಳಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ. 

ಕಾಮಾಕ್ಷಿಪಾಳ್ಯ, ತಿಲಕ್ ನಗರ, ತಮಿಳುನಾಡು ಥಳಿ, ಕೆಂಗೇರಿ, ಆಡುಗೋಡಿ, ತಿಲಕ್ ನಗರದಲ್ಲಿ 4 ಪ್ರಕರಣ, ಸರ್ಜಾಪುರ, ಕಾಡುಗೋಡಿ, ಇಂದಿರಾನಗರ, ಬೈಯಪ್ಪನಹಳ್ಳಿ, ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು.

ಈ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಕೊಲೆ, ದರೋಡೆ, ವಂಚನೆ, ಬೆದರಿಕೆ, ಕಳ್ಳತನ ಹಾಗೂ ಇತರೆ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ.

ಭೂಗತಿ ಪಾತಕಿ ಕವಿರಾಜ್ ಪತ್ತೆಗಾಗಿ ಕೋಲಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್ ಬಿ. ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಗಳಾದ ರವಿಶಂಕರ್, ಜಗದೀಶ್, ಸೆನ್‌ ಪೊಲೀಸ್ ಠಾಣೆಯ ಡಿವೈಎಸ್ಪಿ ಆರ್.ರಾಜೇಶ್ ಮಾರ್ಗದರ್ಶನದಲ್ಲಿ, ಇನ್‌ಸ್ಪೆಕ್ಟರ್‌ ಎಸ್.ಆರ್.ಜಗದೀಶ್ ಮತ್ತು ತಂಡದ ಅಂಬರೀಶ್, ಬಾಲಾಜಿ, ಸಂತೋಷ್, ಜಿಲ್ಲಾ ತಾಂತ್ರಿಕ ವಿಭಾಗದ ಮುರಳಿ, ಶ್ರೀನಾಥ್ ಆಧುನಿಕ ತಂತ್ರಜ್ಞಾನ ಬಳಸಿ ಆರೋಪಿಯ ಇರುವಿಕೆ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ್ದರು.

ಆರೋಪಿಯು ತಲೆ ಮರೆಸಿಕೊಂಡು ಓಡಾಡುತ್ತಿದ್ದ ದೆಹಲಿ, ಉತ್ತರಪ್ರದೇಶ, ಉತ್ತರಾಖಂಡ ರಾಜ್ಯಗಳಲ್ಲಿ ಹುಡುಕಾಟ ನಡೆಸಿ ಕೊನೆಗೆ ಜುಲೈ 31ರಂದು ಉತ್ತರಪ್ರದೇಶದ ನೋಯಿಡಾದಲ್ಲಿ ಈತನನ್ನು ವಶಕ್ಕೆ ಪಡೆದರು. ಕೋಲಾರದ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು ಸಿಬ್ಬಂದಿ ಕಾರ್ಯವನ್ನು ಎಸ್‌ಪಿ ನಿಖಿಲ್ ಶ್ಲಾಘಿಸಿದ್ದಾರೆ.

Highlights - 2020ರಲ್ಲಿ ನಡೆದಿದ್ದ ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣದ ರೂವಾರಿ ಆಧುನಿಕ ತಂತ್ರಜ್ಞಾನ ಬಳಸಿ ಆರೋಪಿಯ ಪತ್ತೆ ನೇಪಾಳ ಗಡಿಭಾಗ ಮೂಲ; ಬೆಂಗಳೂರಿನಲ್ಲಿ ನೆಲೆ

ಆರೋಪಿ ಮೊಬೈಲ್‌ ಬಳಸುತ್ತಿರಲಿಲ್ಲ

‘ಭೂಗತ ಪಾತಕಿ ಕವಿರಾಜ್‌ ಮೋಸ್ಟ್‌ ವಾಂಟೆಂಡ್ ಕ್ರಿಮಿನಲ್‌ ಆಗಿದ್ದ. ಕೊಲೆ ದರೋಡೆ ಅಪಹರಣ ಸೇರಿದಂತೆ ಹಲವಾರು ಕ್ರಿಮಿನಲ್‌ ಅಪರಾಧಗಳಲ್ಲಿ ಭಾಗಿಯಾಗಿದ್ದ. ಆದರೆ ಆತ ಮೊಬೈಲ್‌ ಬಳಸುತ್ತಿರಲಿಲ್ಲ. ಹೀಗಾಗಿ ಆತನ ಪತ್ತೆ ದೊಡ್ಡ ಸವಾಲಾಗಿತ್ತು. ಹಲವು ನಗರಗಳ ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದರು. ನಮ್ಮ ಕೋಲಾರ ಪೊಲೀಸರು ಸವಾಲಾಗಿ ಸ್ವೀಕರಿಸಿ ಹೆಡೆಮುರಿ ಕಟ್ಟಿ ತಂದಿದ್ದಾರೆ. ಸಿಬ್ಬಂದಿಗೆ ಎಲ್ಲಾ ಶ್ರೇಯಸ್ಸು ಸಲ್ಲಬೇಕು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ಆರೋಪಿಯ ಪತ್ತೆಯಾಗಿ ಹಲವು ದಿನಗಳಿಂದ ಶೋಧ ಕಾರ್ಯಾಚರಣೆ ನಡೆಸುತ್ತಿದ್ದೆವು. ನಮ್ಮ ಪೊಲೀಸರು ನೋಯಿಡಾದಲ್ಲಿ 10 ದಿನ ಇದ್ದು ತಂತ್ರಜ್ಞಾನ ನೆರವು ಪಡೆದು ಆರೋಪಿಯನ್ನು ಬಂಧಿಸಿದ್ದಾರೆ’ ಎಂದರು. ‘ನೇಪಾಳ ಗಡಿ ಭಾಗದಿಂದ ಬೆಂಗಳೂರಿಗೆ ಬಂದು ನೆಲೆಸಿದ್ದ ಆರೋಪಿಯು ಮಲೇಷ್ಯಾ ಥಾಯ್ಲೆಂಡ್ ಸೇರಿದಂತೆ ವಿವಿಧೆಡೆ ಸಂಪರ್ಕ ಹೊಂದಿದ್ದ. ಬಿಲ್ಡರ್‌ ಕೊಲೆ ಪ್ರಕರಣದಲ್ಲೂ ಭಾಗಿಯಾಗಿದ್ದ' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.