ADVERTISEMENT

ಕೋಲಾರ: ಅವೈಜ್ಞಾನಿಕ ಅಂಡರ್‌ಪಾಸ್‌, ನಗರವಾಸಿಗಳು ಹೈರಾಣ

ಮಳೆಗೆ ಕೆರೆಯಾಗುವ ರೈಲ್ವೆ ಕೆಳ ಸೇತುವೆಗಳು: ಶಾಶ್ವತ ಪರಿಹಾರದ ಕೂಗು ಅರಣ್ಯ ರೋದನ

ಜೆ.ಆರ್.ಗಿರೀಶ್
Published 4 ಜುಲೈ 2021, 19:30 IST
Last Updated 4 ಜುಲೈ 2021, 19:30 IST
ಕೋಲಾರದ ಸಂಗೊಂಡಹಳ್ಳಿ ಬಳಿಯ ರೈಲ್ವೆ ಕೆಳ ಸೇತುವೆಯಲ್ಲಿ ಮಳೆ ನೀರು ಕೆರೆಯಂತೆ ನಿಲ್ಲುವ ದೃಶ್ಯ
ಕೋಲಾರದ ಸಂಗೊಂಡಹಳ್ಳಿ ಬಳಿಯ ರೈಲ್ವೆ ಕೆಳ ಸೇತುವೆಯಲ್ಲಿ ಮಳೆ ನೀರು ಕೆರೆಯಂತೆ ನಿಲ್ಲುವ ದೃಶ್ಯ   

ಕೋಲಾರ: ಜಿಲ್ಲಾ ಕೇಂದ್ರದಲ್ಲಿನ ರೈಲ್ವೆ ಕೆಳ ಸೇತುವೆಗಳು (ಅಂಡರ್‌ಪಾಸ್‌) ನಗರವಾಸಿಗಳಿಗೆ ಶಾಪವಾಗಿ ಪರಿಣಮಿಸಿವೆ. ಜನರ ಅನುಕೂಲಕ್ಕಾಗಿ ನಿರ್ಮಿಸಿರುವ ಈ ಅಂಡರ್‌ಪಾಸ್‌ಗಳಲ್ಲಿ ಮಳೆ ನೀರು ತುಂಬಿಕೊಂಡು ಕೆರೆಯಂತಾಗುತ್ತಿವೆ.

ಸಂಸದ ಕೆ.ಎಚ್‌.ಮುನಿಯಪ್ಪ ಅವರು ರೈಲ್ವೆ ಸಚಿವರಾಗಿದ್ದಾಗ ಖಾದ್ರಿಪುರ, ಸಂಗೊಂಡಹಳ್ಳಿ, ಕೀಲುಕೋಟೆ ಸೇರಿದಂತೆ ಆರೇಳು ಕಡೆ ಅಂಡರ್‌ಪಾಸ್‌ ನಿರ್ಮಿಸಲಾಯಿತು. ನಗರವಾಸಿಗಳ ದಶಕದ ಹೋರಾಟದ ಫಲವಾಗಿ ಕೆಳ ಸೇತುವೆಗಳು ನಿರ್ಮಾಣವಾದವು. ಆದರೆ, ಈ ಕೆಳ ಸೇತುವೆಗಳಿಂದ ಅನುಕೂಲಕ್ಕಿಂತ ಸಮಸ್ಯೆಯೇ ಹೆಚ್ಚಿದೆ.

ಜಿಲ್ಲಾ ಕೇಂದ್ರದ ಪ್ರವೇಶ ಭಾಗದಲ್ಲಿರುವ ಹಲವು ಅಂಡರ್‌ಪಾಸ್‌ಗಳು ನಗರಕ್ಕೆ ಸಂಪರ್ಕ ಕೊಂಡಿಯಾಗಿವೆ. ನಗರದಿಂದ ಹೊರ ಹೋಗುವವರು ಹಾಗೂ ನಗರದೊಳಗೆ ಬರುವವರು ಈ ಅಂಡರ್‌ಪಾಸ್‌ಗಳ ಮೂಲಕವೇ ಸಂಚರಿಸಬೇಕು. ನಗರದೊಳಗಿನ ಕೀಲುಕೋಟೆ, ಖಾದ್ರಿಪುರ, ಹೊಸ ಬಡಾವಣೆ, ಕೇಶವನಗರ, ಸಂಗೊಂಡಹಳ್ಳಿ ಹಾಗೂ ಅಕ್ಕಪಕ್ಕದ ಬಡಾವಣೆಗಳ ಜನರು ಅಂಡರ್‌ಪಾಸ್‌ಗಳ ಮೂಲಕವೇ ನಗರಕ್ಕೆ ಹೋಗಿ ಬರಬೇಕು.

ADVERTISEMENT

ಬಹುಪಾಲು ರೈಲ್ವೆ ಕೆಳ ಸೇತುವೆಗಳ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಮಳೆ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ವ್ಯವಸ್ಥೆಯಿಲ್ಲ. ಹೀಗಾಗಿ ಪ್ರತಿ ಬಾರಿ ಮಳೆ ಬಂದಾಗಲೂ ಅಂಡರ್‌ಪಾಸ್‌ಗಳಲ್ಲಿ ಮಳೆ ನೀರು ಕೆರೆಯಂತೆ ನಿಲ್ಲುತ್ತದೆ. ತುಂತುರು ಮಳೆಗೂ ಕೆಳ ಸೇತುವೆಗಳು ಈಜು ಕೊಳದಂತಾಗಿ ನಗರಕ್ಕೆ ಹಾಗೂ ಅಕ್ಕಪಕ್ಕದ ಬಡಾವಣೆಗಳಿಗೆ ಸಂಪರ್ಕ ಕಡಿದು ಹೋಗುತ್ತದೆ.

ಮಳೆ ಪ್ರಮಾಣ ಹೆಚ್ಚಾದ ಸಂದರ್ಭದಲ್ಲಿ ಅಂಡರ್‌ಪಾಸ್‌ಗಳಲ್ಲಿ ಬಸ್‌ ಮುಳುಗುವಷ್ಟು ನೀರು ನಿಲ್ಲುತ್ತದೆ. ಅಂತರಗಂಗೆ ಬೆಟ್ಟದ ರಸ್ತೆಯ ಜಿಲ್ಲಾ ಕ್ರೀಡಾಂಗಣ, ಖಾದ್ರಿಪುರ ರಸ್ತೆ ಮತ್ತು ಸಂಗೊಂಡಹಳ್ಳಿ ಬಳಿಯ ರೈಲ್ವೆ ಕೆಳ ಸೇತುವೆಗಳಲ್ಲಿ ಸಾಕಷ್ಟು ಬಾರಿ ವಾಹನಗಳು ಮುಳುಗಿವೆ.

ಜಲಾವೃತ ಅಂಡರ್‌ಪಾಸ್‌ಗಳಲ್ಲಿ ವಾಹನಗಳು ಕೆಟ್ಟು ನಿಲ್ಲುವುದು ಸಾಮಾನ್ಯವಾಗಿದೆ. ಅಂಡರ್‌ಪಾಸ್‌ಗಳಲ್ಲಿ ಸಿಲುಕಿ ಪರದಾಡುವ ವಾಹನ ಸವಾರರ ಗೋಳು ಹೇಳತೀರದು. ವಾಹನ ಸವಾರರು ಮಳೆ ನೀರಿನಲ್ಲಿ ವಾಹನಗಳನ್ನು ತಳ್ಳಿಕೊಂಡು ಹೋಗುವ ದೃಶ್ಯ ಕಂಡುಬರುತ್ತದೆ.

ಹಳಿ ದಾಟುವ ಸಮಸ್ಯೆ: ಕೆಳ ಸೇತುವೆಗಳಲ್ಲಿ ಮಳೆ ನೀರು ನಿಂತ ಸಂದರ್ಭದಲ್ಲಿ ಜನರು ಅಂಡರ್‌ಪಾಸ್‌ಗಳ ಮೇಲೆ ಹಳಿ ದಾಟಿ ಹೋಗುತ್ತಿದ್ದು, ರೈಲು ಸಂಚಾರದ ವೇಳೆ ಸಮಸ್ಯೆಯಾಗುತ್ತಿದೆ. ಹಳಿ ದಾಟುವ ಯತ್ನದಲ್ಲಿ ಹಲವರು ರೈಲಿಗೆ ಸಿಲುಕಿ ಮೃತಪಟ್ಟಿದ್ದು, ಪದೇ ಪದೇ ಇಂತಹ ಅವಘಡ ಸಂಭವಿಸುತ್ತಿವೆ. ಸಾವು ಸಂಭವಿಸಿದಾಗ ಘಟನಾ ಸ್ಥಳಕ್ಕೆ ಬಂದು ಸಮಸ್ಯೆ ಪರಿಹರಿಸುವುದಾಗಿ ಹೇಳುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೊಟ್ಟ ಮಾತು ಮರೆತು ಬಿಡುತ್ತಾರೆ.

ಪರ್ಯಾಯ ರಸ್ತೆ: ಜಿಲ್ಲಾ ಕೇಂದ್ರದೊಳಗೆ ರೈಲು ಹಳಿಗೆ ಸಮನಾಂತರವಾಗಿರುವ ಬಹುತೇಕ ರಸ್ತೆಗಳು ಮಣ್ಣಿನ ರಸ್ತೆಗಳಾಗಿವೆ. ಅಂಡರ್‌ಪಾಸ್‌ಗಳಲ್ಲಿ ಮಳೆ ನೀರು ತುಂಬಿಕೊಂಡರೆ ವಾಹನ ಸವಾರರು ಹಾಗೂ ಪಾದಚಾರಿಗಳು ಪರ್ಯಾಯವಾಗಿ ಹಳಿಯ ಪಕ್ಕದ ಈ ಕಚ್ಚಾ ರಸ್ತೆಗಳಲ್ಲಿ ಸಂಚರಿಸುವ ಅನಿವಾರ್ಯತೆ ಎದುರಾಗುತ್ತದೆ.

ತುಂತುರು ಮಳೆಗೂ ಕೆಸರು ಗದ್ದೆಯಂತಾಗುವ ಈ ರಸ್ತೆಗಳಲ್ಲಿ ನಡೆದು ಹೋಗುವುದು ಸಹ ಕಷ್ಟ. ಕೆಸರಿನ ನಡುವೆ ವಾಹನಗಳು ನಿಧಾನ ಗತಿಯಲ್ಲಿ ಸಾಗುವ ದೃಶ್ಯ ಕಂಡುಬರುತ್ತದೆ. ವಾಹನ ಸವಾರರು ರಸ್ತೆಯಲ್ಲಿ ಬಿದ್ದು ಗಾಯಗೊಳ್ಳುವುದು ಸಾಮಾನ್ಯವಾಗಿದೆ.

ಹಳಿಯ ಪಕ್ಕದ ಕಚ್ಚಾ ರಸ್ತೆಗಳು ರೈಲ್ವೆ ಇಲಾಖೆ ವ್ಯಾಪ್ತಿಯ ಜಾಗದೊಳಗೆ ಬರುವುದರಿಂದ ಆ ರಸ್ತೆಗಳನ್ನು ಅಭಿವೃದ್ಧಿಪಡಿಸಲು ನಗರಸಭೆ, ಲೋಕೋಪಯೋಗಿ ಇಲಾಖೆಗೆ ಅವಕಾಶವಿಲ್ಲ. ಮತ್ತೊಂದೆಡೆ ರೈಲ್ವೆ ಇಲಾಖೆಯು ರಸ್ತೆಗಳನ್ನು ಅಭಿವೃದ್ಧಿಪಡಿಸುತ್ತಿಲ್ಲ.

ಸ್ಥಳ ಪರಿಶೀಲನೆ: ಅಂಡರ್‌ಪಾಸ್‌ಗಳ ಅವ್ಯವಸ್ಥೆ ಸಂಬಂಧ ನಗರವಾಸಿಗಳು ನಗರಸಭೆ, ರೈಲ್ವೆ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಹಲವು ಬಾರಿ ದೂರು ಕೊಟ್ಟಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ನಗರಸಭೆ, ಲೋಕೋಪಯೋಗಿ ಹಾಗೂ ರೈಲ್ವೆ ಸಚಿವಾಲಯದ ಅಧಿಕಾರಿಗಳು ಹಲವು ಬಾರಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ಆದರೆ, ಸಮಸ್ಯೆ ಮಾತ್ರ ಬಗೆಹರಿದಿಲ್ಲ.

ನಗರಸಭೆ ವತಿಯಿಂದ ಆಗೊಮ್ಮೆ ಈಗೊಮ್ಮೆ ನೀರಿನ ಪಂಪ್‌ ಮೂಲಕ ಕೆಳ ಸೇತುವೆಗಳಲ್ಲಿನ ಮಳೆ ನೀರನ್ನು ಹೊರ ತೆಗೆಸಲಾಗುತ್ತದೆ. ಆಗ ಮಾತ್ರ ಸಮಸ್ಯೆ ತಾತ್ಕಾಲಿಕವಾಗಿ ಪರಿಹಾರವಾಗುತ್ತದೆ. ಪುನಃ ಮಳೆ ಬಂದರೆ ಸಮಸ್ಯೆ ಮರುಕಳಿಸುತ್ತದೆ. ಅಂಡರ್‌ಪಾಸ್‌ಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ನಗರವಾಸಿಗಳ ಕೂಗು ಅರಣ್ಯ ರೋದನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.