ADVERTISEMENT

ದಾರ್ಶನಿಕರನ್ನು ವಿಶ್ವಮಾನವರಾಗಿ ನೋಡಿ

ವೇಮನ ಜಯಂತಿಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಮ್ಮ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 19 ಜನವರಿ 2019, 13:14 IST
Last Updated 19 ಜನವರಿ 2019, 13:14 IST
ಜಿಲ್ಲಾಡಳಿತವು ಕೋಲಾರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನ ಜಯಂತಿಯಲ್ಲಿ ಕಲಾವಿದರು ನೃತ್ಯ ಪ್ರದರ್ಶಿಸಿದರು.
ಜಿಲ್ಲಾಡಳಿತವು ಕೋಲಾರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನ ಜಯಂತಿಯಲ್ಲಿ ಕಲಾವಿದರು ನೃತ್ಯ ಪ್ರದರ್ಶಿಸಿದರು.   

ಕೋಲಾರ: ‘ಮನುಕುಲಕ್ಕೆ ದಾರಿ ತೋರಿದ ದಾರ್ಶನಿಕರನ್ನು ಜಾತಿಯ ಸಂಕೋಲೆಗೆ ಸೀಮಿತಗೊಳಿಸದೆ ವಿಶ್ವಮಾನವರಾಗಿ ನೋಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಮ್ಮ ಕಿವಿಮಾತು ಹೇಳಿದರು.

ಜಿಲ್ಲಾಡಳಿತವು ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನ ಜಯಂತಿ ಉದ್ಘಾಟಿಸಿ ಮಾತನಾಡಿ, ‘ಸಮಾಜದಲ್ಲಿ ಮಹಾ ಪುರುಷರಿಗೆ ಜಾತಿಯ ಪಟ್ಟ ಕಟ್ಟುವ ಪ್ರಯತ್ನ ನಡೆಯುತ್ತಿದೆ. ಜಾತಿ, ಧರ್ಮದ ನೆಲೆಗಟ್ಟಿನಲ್ಲಿ ಮಹನೀಯರನ್ನು ನೋಡಲಾಗುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ವಾಲ್ಮೀಕಿ, ತಾತಯ್ಯ, ಬಸವಣ್ಣ ಅವರು ವೇಮನರ ಆಶಯಗಳಿಂದ ಪ್ರಭಾವಿತರಾಗಿ ಸಮಾಜ ಸುಧಾರಣೆಯಲ್ಲಿ ತೊಡಗಿಸಿಕೊಂಡರು. ದೇಶದ ಸಂವಿಧಾನದಲ್ಲೂ ವೇಮನರ ಆಶಯಗಳು ಅಡಗಿವೆ. ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಮಾರ್ಗದರ್ಶನ ನೀಡಿರುವ ಮಹನಿಯರ ಜಯಂತಿ ಆಚರಿಸುವುದರ ಜತೆಗೆ ಅವರ ತತ್ವಾದರ್ಶದ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ವೇಮನ ಬದುಕಿನ ಅರಿವು ಪಡೆದು ಪಾರಮಾರ್ಥಿಕ ಹಾದಿಯಲ್ಲಿ ಸಾಗಿ ಮಹಾಯೋಗಿ ಎನಿಸಿಕೊಂಡವರು. ಇಂತಹ ಸಾಧಕರ ಕುರಿತು ವಿಚಾರ ಸಂಕಿರಣ ನಡೆಸುವ ಮೂಲಕ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಬೇಕು’ ಎಂದು ಹೇಳಿದರು.

ವಿಶ್ವಕ್ಕೆ ಮಾದರಿ: ‘ವೇಮನ ತೆಲುಗು ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ವಚನ, ಪದ್ಯಗಳು ಜಗತ್ತಿನ ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ವೇಮನ ಕರ್ನಾಟಕ ಮತ್ತು ಆಂಧ್ರಪ್ರದೇಶಕ್ಕಷ್ಟೇ ಸೀಮಿತವಾಗದೆ ಇಡೀ ವಿಶ್ವಕ್ಕೆ ಮಾದರಿಯಾಗುವ ರೀತಿಯಲ್ಲಿ ಸಮಾಜ ಸುಧಾರಣೆಯ ಮಾರ್ಗದರ್ಶನ ನೀಡಿದ್ದಾರೆ’ ಎಂದು ಸ್ಮರಿಸಿದರು.

‘ವೇಮನ ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ತತ್ವಜ್ಞಾನಿ, ದಾರ್ಶನಿಕರಾಗಿದ್ದರು. ಲೌಕಿಕ ಬದುಕಿನ ಅರಿವು ಆಗಿ ಭೋಗ ಜೀವನ ತ್ಯಜಿಸಿ ಸರಳ ಭಾಷೆಯಲ್ಲಿ ನುಡಿಗಟ್ಟು ರಚಿಸಿ ಮನೆ ಮಾತಾಗಿದ್ದಾರೆ. ಸಮಾಜ ಸುಧಾರಣೆಗೆ ಶ್ರಮಿಸಿದ ಅವರು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ’ ಎಂದು ಬಣ್ಣಿಸಿದರು.

ಆರೋಗ್ಯಕರ ಸಮಾಜ: ‘ವೇಮನರ ಸಂದೇಶವನ್ನು ಮನೆ ಮನೆಗೂ ತಲುಪಿಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು’ ಎಂದು ಜಿ.ಪಂ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಹೇಳಿದರು.

‘ಪ್ರತಿಯೊಂದು ಜಾತಿ ಮತ್ತು ಧರ್ಮಕ್ಕೂ ದಾರ್ಶನಿಕರಿದ್ದಾರೆ. ಆದರೆ, ಈ ದಾರ್ಶನಿಕರು ಜಾತಿ, ಧರ್ಮಗೋಸ್ಕರ ದುಡಿಯದೆ ಸಮಾಜದ ಒಳಿತಿಗೆ ಶ್ರಮಿಸಿದರು. ಈ ಸತ್ಯ ಸಂಗತಿ ಜನರಿಗೆ ತಿಳಿದಿಲ್ಲ’ ಎಂದು ತಾ.ಪಂ ಅಧ್ಯಕ್ಷ ಎಂ.ಆಂಜಿನಪ್ಪ ವಿಷಾದಿಸಿದರು.

ಹರಿಕಥೆ ವಿದ್ವಾನ್ ಎನ್.ಆರ್.ಜ್ಞಾನಮೂರ್ತಿ ಅವರು ವೇಮನ ಕುರಿತು ಉಪನ್ಯಾಸ ನೀಡಿದರು. ತಹಶೀಲ್ದಾರ್ ಗಾಯಿತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಬಂಗಾರಪೇಟೆ ತಾ.ಪಂ ಅಧ್ಯಕ್ಷೆ ಭಾಗ್ಯಮ್ಮ, ಜಿ.ಪಂ ಮಾಜಿ ಸದಸ್ಯ ನಾರಾಯಣರೆಡ್ಡಿ, ಜಾನಪದ ಅಕಾಡೆಮಿ ಸದಸ್ಯ ಡಿ.ಆರ್.ರಾಜಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.