ADVERTISEMENT

ಮಹಿಳೆಯರು ಡಿಸಿಸಿ ಬ್ಯಾಂಕ್‌ನ ಆಧಾರಸ್ತಂಭ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2019, 15:27 IST
Last Updated 5 ಸೆಪ್ಟೆಂಬರ್ 2019, 15:27 IST
ಕೋಲಾರ ತಾಲ್ಲೂಕಿನ ಮುದುವಾಡಿ ಗ್ರಾಮದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಮಹಿಳಾ ಸಂಘಗಳ ಸದಸ್ಯರಿಗೆ ಸಾಲದ ಚೆಕ್ ವಿತರಿಸಿದರು.
ಕೋಲಾರ ತಾಲ್ಲೂಕಿನ ಮುದುವಾಡಿ ಗ್ರಾಮದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಮಹಿಳಾ ಸಂಘಗಳ ಸದಸ್ಯರಿಗೆ ಸಾಲದ ಚೆಕ್ ವಿತರಿಸಿದರು.   

ಕೋಲಾರ: ‘ಬಡ ಮಹಿಳೆಯರು ಸಾಲ ಪಡೆಯುವುದರ ಜತೆಗೆ ಉಳಿತಾಯದ ದುಡ್ಡನ್ನು ಡಿಸಿಸಿ ಬ್ಯಾಂಕ್‌ನಲ್ಲಿ ಠೇವಣಿಯಿಟ್ಟು ಬ್ಯಾಂಕ್‌ ಸದೃಢತೆಗೆ ಬೆನ್ನೆಲುಬಾಗಿ ನಿಂತಿದ್ದಾರೆ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಹೇಳಿದರು.

ತಾಲ್ಲೂಕಿನ ಮುದುವಾಡಿ ಗ್ರಾಮದಲ್ಲಿ ಗುರುವಾರ ವಾನರಾಶಿ, ನಾಗನಾಳ ಹಾಗೂ ಮುದುವಾಡಿಯ ಮಹಿಳಾ ಸಂಘಗಳ ಸದಸ್ಯರಿಗೆ ಸಾಲ ವಿತರಿಸಿ ಮಾತನಾಡಿ, ‘ಡಿಸಿಸಿ ಬ್ಯಾಂಕ್‌ಗೆ ಮಹಿಳೆಯರೇ ಆಧಾರಸ್ತಂಭ. ಹಣವುಳ್ಳ ಶ್ರೀಮಂತರು ಸಾಲಕ್ಕಾಗಿ ಮಾತ್ರ ಬ್ಯಾಂಕ್‌ನತ್ತ ಬರುತ್ತಾರೆ. ಆದರೆ, ತಮ್ಮ ಠೇವಣಿ ಹಣವನ್ನು ವಾಣಿಜ್ಯ ಬ್ಯಾಂಕ್‌ಗಳಲ್ಲಿ ಇಡುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಬಡ ಮಹಿಳೆಯರು ಡಿಸಿಸಿ ಬ್ಯಾಂಕ್‌ನ ಮೇಲೆ ಇಟ್ಟಿರುವ ನಂಬಿಕೆಗೆ ಧಕ್ಕೆಯಾಗದಂತೆ ಕೆಲಸ ಮಾಡುತ್ತೇವೆ. ಪ್ರತಿ ಕುಟುಂಬಕ್ಕೂ ಶೂನ್ಯ ಬಡ್ಡಿ ಸಾಲ ಕೊಡುತ್ತೇವೆ. ಮಹಿಳೆಯರು ಸಾಲ ಸದ್ಬಳಕೆ ಮಾಡಿಕೊಂಡು ಸ್ವಾಭಿಮಾನಿಗಳಾಗಿ ಬದುಕಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಡಿಸಿಸಿ ಬ್ಯಾಂಕ್‌ ಯಾವುದೇ ಅಡಮಾನ, ಭದ್ರತೆಯಿಲ್ಲದೆ ಮಹಿಳೆಯರಿಗೆ ಶೂನ್ಯ ಬಡ್ಡಿ ಸಾಲ ನೀಡುತ್ತಿದೆ. ಬ್ಯಾಂಕ್‌ನ ನಂಬಿಕೆಗೆ ದ್ರೋಹ ಬಗೆಯದೆ ಸಕಾಲಕ್ಕೆ ಸಾಲ ಮರುಪಾವತಿಸಬೇಕು. ಬ್ಯಾಂಕ್‌ ಉಳಿಸುವುದು ಮಹಿಳೆಯರ ಜವಾಬ್ದಾರಿ’ ಎಂದು ಬ್ಯಾಂಕ್‌ನ ನಿರ್ದೇಶಕ ಸೋಮಣ್ಣ ತಿಳಿಸಿದರು.

ಬ್ಯಾಂಕ್‌ನ ನಿರ್ದೇಶಕ ಕೆ.ವಿ.ದಯಾನಂದ್, ನಿರ್ದೇಶಕ ಚನ್ನರಾಯಪ್ಪ, ಮುದುವಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರತ್ನಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.