ADVERTISEMENT

ವಿಶ್ವ ಜನಸಂಖ್ಯೆ ದಿನಾಚರಣೆ ಅಭಿಯಾನ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 11:41 IST
Last Updated 7 ಜುಲೈ 2021, 11:41 IST

ಕೋಲಾರ: ಪ್ರತಿ ವರ್ಷದಂತೆ ಈ ಬಾರಿಯೂ ಸಾಂಕ್ರಾಮಿಕ ರೋಗದ ವಿಪತ್ತಿನ ನಡುವೆಯೂ ಸಂತಾನೋತ್ಪತ್ತಿ ಆರೋಗ್ಯ ಸೇವೆಗಳನ್ನು ಅರ್ಹ ಫಲಾನುಭವಿಗಳಿಗೆ ನಿರಂತರವಾಗಿ ನೀಡುವುದು ಇಲಾಖೆಯ ಆದ್ಯ ಕರ್ತವ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೋವಿಡ್ ಸಂಕಷ್ಟದಲ್ಲೂ ಕುಟುಂಬ ಯೋಜನೆ ಸೇವೆ, ಸ್ವಾವಲಂಬಿ ರಾಷ್ಟ್ರ ಮತ್ತು ಕುಟುಂಬಕ್ಕೆ ನಾಂದಿ ಎಂಬ ಘೋಷ ವಾಕ್ಯದೊಂದಿಗೆ ವಿಶ್ವ ಜನಸಂಖ್ಯೆ ದಿನಾಚರಣೆ ಅಭಿಯಾನ ಆಚರಿಸಲಾಗುತ್ತಿದೆ. ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಜುಲೈ 10ರವರೆಗೆ ಸಮುದಾಯ ಜಾಗೃತಿಕರಣ ಪಾಕ್ಷಿಕದಲ್ಲಿ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ಮಾಡಿ ಅರ್ಹ ದಂಪತಿಗೆ ಕುಟುಂಬ ಯೋಜನೆ ಬಗ್ಗೆ ಮಾಹಿತಿ ನೀಡುತ್ತಾರೆ ಎಂದು ಹೇಳಿದ್ದಾರೆ.

ಜುಲೈ 11ರಿಂದ ಜುಲೈ 24ರವರೆಗೆ ಜನಸಂಖ್ಯಾ ಸ್ಥಿರೀಕರಣ ಪಾಕ್ಷಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಕುಟುಂಬ ಕಲ್ಯಾಣ ಸೇವೆಗಳ ಕೊರತೆಯಾದಲ್ಲಿ ಅನಗತ್ಯ ಗರ್ಭಧಾರಣೆ ಹಾಗೂ ಹದಿಹರೆಯದ ಹೆಣ್ಣು ಮಕ್ಕಳ ಗರ್ಭಿಣಿಯಾದಾಗ ಕಡಿಮೆ ತೂಕ, ಗರ್ಭಪಾತ, ರಕ್ತಹೀನತೆ, ಅಪೌಷ್ಟಿಕತೆಗೆ ತುತ್ತಾಗುತ್ತಾರೆ. ವಿದ್ಯಾಭ್ಯಾಸ ಕುಂಠಿತವಾಗುವುದರ ಜತೆಗೆ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುತ್ತದೆ. ತಾಯಿ ಮತ್ತು ಮಕ್ಕಳ ಮರಣ ಪ್ರಮಾಣ ಹೆಚ್ಚುತ್ತದೆ ಎಂದು ತಿಳಿಸಿದ್ದಾರೆ.

ADVERTISEMENT

ಒಂದು ಮಗುವಿಗೂ ಇನ್ನೊಂದು ಮಗುವಿಗೂ ಕನಿಷ್ಠ 3ರಿಂದ 5 ವರ್ಷ ಅಂತರವಿರಬೇಕು. ಇದರಿಂದ ಹೆಣ್ಣು ದೈಹಿಕವಾಗಿ, ಸಾಮಾಜಿಕವಾಗಿ ಆರೋಗ್ಯಕರ ಜೀವನ ನಡೆಸಬಲ್ಲಳು. ಉತ್ತಮ ತಾಯಿ ಮತ್ತು ಮಕ್ಕಳ ಆರೋಗ್ಯ ಕಾಪಾಡಲು ಕುಟುಂಬ ಯೋಜನೆಯ ವಿಧಾನಗಳಾದ ತಾತ್ಕಾಲಿಕ, ಆಧುನಿಕ ಅಲ್ಪಾವಧಿ ಮತ್ತು ಧೀರ್ಘಕಾಲಿನ ಗರ್ಭ ನಿರೋಧಕಗಳ ಮಾಹಿತಿ ಸಮಾಲೋಚನೆ ಸೇವೆಯನ್ನು ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ನೀಡಲಾಗುವುದು ಎಂದು ವಿವರಿಸಿದ್ದಾರೆ.

ಮಾಹಿತಿ ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳನ್ನು ಸಂಚಾರಿ ಐಇಸಿ ವಾಹನದಲ್ಲಿ ಕೋವಿಡ್- ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕುಟುಂಬ ಯೋಜನೆಗಳ ವಿಧಾನಗಳ ಬಗ್ಗೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ವ್ಯಾಪಕ ಪ್ರಚಾರ ನಡೆಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.