ADVERTISEMENT

ಕಾಂಗ್ರೆಸ್‌ನ ‘ಕೈ’ ಹಿಡಿದ ಕಮಲ ಪಡೆ

ಜಿ.ಪಂ ಅಧ್ಯಕ್ಷಗಾದಿ ಚುನಾವಣೆ: ಹೊಂದಾಣಿಕೆ ರಾಜಕೀಯ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 14:37 IST
Last Updated 28 ನವೆಂಬರ್ 2019, 14:37 IST

ಕೋಲಾರ: ಜಿಲ್ಲಾ ಪಂಚಾಯಿತಿ ಅಧ್ಯಕ್ಷಗಾದಿಗೆ ಇಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಸದಸ್ಯರು ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸಿ ರಾಜಕೀಯ ಲೆಕ್ಕಾಚಾರಗಳನ್ನೆಲ್ಲಾ ತಲೆಕೆಳಗು ಮಾಡಿದರು.

ರಾಜಕೀಯವಾಗಿ ಉತ್ತರ– ದಕ್ಷಿಣ ಧ್ರುವದಂತಿರುವ ಬಿಜೆಪಿ ಹಾಗೂ ಕಾಂಗ್ರೆಸ್‌ ಮುಖಂಡರ ನಡುವೆ ವಿಧಾನಸಭೆ ಉಪ ಚುನಾವಣೆ ಕದನದಲ್ಲಿ ವಾಕ್ಸಮರವೇ ನಡೆಯುತ್ತಿದೆ. ಆದರೆ, ಇಲ್ಲಿನ ಜಿ.ಪಂ ಚುನಾವಣೆಯಲ್ಲಿ ಕಮಲ ಪಾಳಯದ 4 ಸದಸ್ಯರು ಕಾಂಗ್ರೆಸ್‌ ಅಭ್ಯರ್ಥಿ ಸಿ.ಎಸ್‌.ವೆಂಕಟೇಶ್‌ ಪರ ಮತ ಚಲಾಯಿಸಿ ‘ಕೈ’ ಪಾಳಯಕ್ಕೆ ಗೆಲುವಿನ ಉಡುಗೊರೆ ನೀಡಿದರು.

ಮತ್ತೊಂದೆಡೆ ಜೆಡಿಎಸ್‌ ಸದಸ್ಯರು ಪಕ್ಷಭೇದ ಮರೆತು ಕಾಂಗ್ರೆಸ್‌ ಅಭ್ಯರ್ಥಿಯ ಬೆನ್ನಿಗೆ ನಿಂತು ಗೆಲುವಿನ ದಡ ಸೇರಿಸಿದರು. ಮಾಜಿ ಶಾಸಕ ವರ್ತೂರು ಪ್ರಕಾಶ್‌ ತಮ್ಮ ಪರಮಾಪ್ತ ವೆಂಕಟೇಶ್‌ರ ಗೆಲುವಿಗಾಗಿ ಕಾಂಗ್ರೆಸ್‌ನ ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ, ಬಿಜೆಪಿಯ ಹಾಲಿ ಸಂಸದ ಎಸ್‌.ಮುನಿಸ್ವಾಮಿ, ಜೆಡಿಎಸ್‌ನ ಮಾಜಿ ಶಾಸಕ ಕೆ.ಎಸ್‌.ಮಂಜುನಾಥ್‌ಗೌಡ ಸೇರಿದಂತೆ ಮೂರೂ ಪಕ್ಷಗಳ ಮುಖಂಡರ ಬೆಂಬಲ ಪಡೆದು ರೂಪಿಸಿದ ಹೊಂದಾಣಿಕೆ ರಾಜಕೀಯದ ತಂತ್ರಗಾರಿಕೆ ಫಲ ಕೊಟ್ಟಿತು.

ADVERTISEMENT

ಚುನಾವಣೆ ತಂತ್ರಗಾರಿಕೆ ಭಾಗವಾಗಿ ಮುನಿಯಪ್ಪ ಬಣವು ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ 17 ಮಂದಿ ಸದಸ್ಯರನ್ನು ವಾರದ ಹಿಂದೆಯೇ ದೆಹಲಿ ಹಾಗೂ ಸಿಂಗಪುರ ಪ್ರವಾಸಕ್ಕೆ ಕರೆದೊಯ್ದಿತ್ತು. ದೆಹಲಿಯಿಂದ ಬುಧವಾರ ರಾತ್ರಿ ಬೆಂಗಳೂರಿಗೆ ಬಂದಿಳಿದ 17 ಸದಸ್ಯರನ್ನು ಗುರುವಾರ ಚುನಾವಣೆ ವೇಳೆಗೆ ನೇರವಾಗಿ ಕೋಲಾರ ಜಿ.ಪಂಗೆ ಕರೆತಂದು ಮತ ಹಾಕಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.