ADVERTISEMENT

ಅಭಿವೃದ್ಧಿ ಮುಂದಿಟ್ಟುಕೊಂಡು ಮತ ಕೇಳುತ್ತೇವೆ

ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಹಿಟ್ನಾಳ್‌ ಪ್ರತಿಪಾದನೆ, ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ

ಶರತ್‌ ಹೆಗ್ಡೆ
Published 21 ಏಪ್ರಿಲ್ 2018, 10:07 IST
Last Updated 21 ಏಪ್ರಿಲ್ 2018, 10:07 IST
ಕೆ.ಬಸವರಾಜ ಹಿಟ್ನಾಳ್‌
ಕೆ.ಬಸವರಾಜ ಹಿಟ್ನಾಳ್‌   

ಕೊಪ್ಪಳ: ಇಂದು ಲಗ್ನ ಮಾಡಿಕೊಂಡು ನಾಳೇನೇ 20 ವರ್ಷದ ಮಗನನ್ನು ಹಡೆಯಬೇಕು ಅಂದ್ರೆ ಆಗುತ್ತಾ?. ಸರ್ಕಾರದ ಕೆಲಸ ಸ್ವಾಮಿ. ಅದು ಸಮಯ ತೆಗೆದುಕೊಳ್ಳುತ್ತೆ...- ಇದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಬಸವರಾಜ ಹಿಟ್ನಾಳ್‌ ಅವರು ತಮ್ಮ ಜವಾರಿ ಮಾತಿನಲ್ಲಿ ಪಕ್ಷದ ಪರಿಕಲ್ಪನೆಗಳನ್ನು ‘ಪ್ರಜಾವಾಣಿ’ ನೀಡಿದ ಸಂದರ್ಶನದಲ್ಲಿ ಮುಂದಿಟ್ಟರು.

ಈ ಚುನಾವಣೆಯಲ್ಲಿ ನಿಮ್ಮನ್ನೇ ಏಕೆ ಗೆಲ್ಲಿಸಬೇಕು?

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು, ನಾವೆಲ್ಲಾ ಈ ಮಟ್ಟಕ್ಕೆ ಬರಲು ಶ್ರಮಿಸಿದ ಪಕ್ಷ. ಅಭಿವೃದ್ಧಿ ಕಾರ್ಯಕ್ರಮಗಳನ್ನು ನೋಡಿದ್ದೀರಲ್ಲಾ. ಈ ದೃಷ್ಟಿಯಿಂದ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು.

ADVERTISEMENT

ಯಾವ ವಿಷಯಗಳನ್ನು ಇಟ್ಟುಕೊಂಡು ಮತದಾರರ ಬಳಿ ಹೋಗುತ್ತೀರಿ?

ಸಮಗ್ರ ಅಭಿವೃದ್ಧಿ ಕಾಂಗ್ರೆಸ್‌ನಿಂದ ಸಾಧ್ಯ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು ಕಾಂಗ್ರೆಸ್‌ನ ಉದ್ದೇಶ. ನೀವೇ ಹೇಳಿ ಬಿಜೆಪಿ ಎಷ್ಟು ಜನ ಮಹಿಳೆಯರು, ಮುಸ್ಲಿಮರನ್ನು ಅಭ್ಯರ್ಥಿಗಳನ್ನಾಗಿ ಮಾಡಿದೆ? ಈ ದೃಷ್ಟಿಯಲ್ಲಿ ನಮ್ಮ ಪಕ್ಷ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುತ್ತಿದೆ. ಅಭಿವೃದ್ಧಿ, ಸರ್ವರಿಗೂ ಸಮಪಾಲು, ಸಮಬಾಳು ಕಾಂಗ್ರೆಸ್‌ನ ಚುನಾವಣಾ ವಿಷಯ.

ವೀರಶೈವ– ಲಿಂಗಾಯತ ವಿವಾದ ನಿಮ್ಮ ಪಕ್ಷಕ್ಕೆ ಲಾಭ ತಂದುಕೊಡುತ್ತದೆಯೇ?
ಅವರವರ ಹಕ್ಕು ಕೇಳಿದ್ದಾರೆ. ಸರ್ಕಾರ ಸ್ಪಂದಿಸಿದೆ. ಲಿಂಗಾಯತ ಸಮುದಾಯ ಕಾಂಗ್ರೆಸ್‌ಗೆ ಮತ ಹಾಕುತ್ತದೆ ಎಂಬ ವಿಶ್ವಾಸ ಇದೆ.

ನಿಮ್ಮ ಪಕ್ಷ ಗೆಲ್ಲಲು ಇರುವ ಅವಕಾಶಗಳು ಯಾವವು?

ನಾವು ನೀಡಿದ ಜನಪರ ಕಾರ್ಯಕ್ರಮಗಳ ಯಶಸ್ಸೇ ನಮಗಿರುವ ಅವಕಾಶ. ಜಿಲ್ಲೆ ಅಥವಾ ನಾಡಿನ ಎಲ್ಲಿಯೂ ಕೂಡ ಪಕ್ಷ ವಿರೋಧಿ, ಸರ್ಕಾರ ವಿರೋಧಿ ಅಲೆ ಇಲ್ಲ. ನಾವು ಹೋದಲ್ಲೆಲ್ಲಾ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. 1972ರ ಅವಧಿಯಲ್ಲಿ ಹೇಗೆ ಇಂದಿರಾಗಾಂಧಿ ಅವರು ನೀಡಿದ ಕಾರ್ಯಕ್ರಮಗಳು, ಅವರ ಹೆಸರಿನ ಮೇಲೆ ಜನ ಮತ ಹಾಕಿದರೋ ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಯೋಜನೆಗಳ ಯಶಸ್ಸು ನೋಡಿ ಜನ ಬೆಂಬಲಿಸುತ್ತಾರೆ.

ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು, ಕೆರೆ ತುಂಬಿಸುವ ಯೋಜನೆ ಜಾರಿಯಾಗಿರುವುದು, ರೈಸ್‌ ಟೆಕ್ನಾಲಜಿ ಪಾರ್ಕ್‌, ಶಿಕ್ಷಣ ಸಂಸ್ಥೆಗಳನ್ನು ತೆರೆದಿರುವುದು ಹೀಗೆ ಐದು ವರ್ಷಗಳಲ್ಲಾದ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಜನರು ನೋಡಿದ್ದಾರೆ. ಇದಲ್ಲವೇ ಅಭಿವೃದ್ಧಿ?

ನಿಮ್ಮ ಪಕ್ಷದ ಘೋಷಿತ ಅಭ್ಯರ್ಥಿಗಳು ಬದಲಾಗುವ ಸಾಧ್ಯತೆ ಇದೆಯೇ?

ಅಭ್ಯರ್ಥಿ ಬದಲಾವಣೆ ಇಲ್ಲ

ನಿಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಜಿಲ್ಲೆಯ ಅಭಿವೃದ್ಧಿಗೆ ನಿಮ್ಮ ಆದ್ಯತೆ ಏನು?

ನೀರಾವರಿಯೇ ನಮ್ಮ ಆದ್ಯತೆ. ಕೆರೆ ತುಂಬಿಸುವ, ಅಂತರ್ಜಲ ವೃದ್ಧಿಸುವ ಕಾರ್ಯಕ್ಕೆ ಮೊದಲ ಆದ್ಯತೆ. ದುಡಿಯುವ ಕೈಗಳಿಗೆ ಕೆಲಸ ಕೊಡಬೇಕು. ವಲಸೆ ಹೋಗುವುದನ್ನು ತಪ್ಪಿಸಬೇಕು. ಹೀಗೆ ಹಲವಾರು ಪರಿಕಲ್ಪನೆಗಳಿವೆ. ನೋಡಿ ಬಹದ್ದೂರ್ ಬಂಡಿ ಏತ ನೀರಾವರಿ ಯೋಜನೆಗೆ ನಮ್ಮ ಶಾಸಕರು ಸಾಕಷ್ಟು ಅಲೆದಾಡಿದ್ದಾರೆ.

₹ 188 ಕೋಟಿ ಮೊತ್ತದ ಯೋಜನೆ ಸುಮ್ಮನೆ ಬರುತ್ತದೆಯೇ? ಈ ವರ್ಷ ಅನುಮೋದನೆಗೊಂಡಿದೆ. ಸರ್ಕಾರದ ಕಾರ್ಯಕ್ರಮಗಳೆಂದರೆ ಹಾಗೆಯೇ. ಸ್ವಲ್ಪ ವಿಳಂಬವಾಗುತ್ತದೆ. ಅದಕ್ಕೇ ನಾನು ಹೇಳಿದ್ದು ಇಂದು ಲಗ್ನ ಮಾಡಿಕೊಂಡು ನಾಳೆಯೇ 20 ವರ್ಷದ ಮಗನನ್ನು ಹಡೆಯಲಾಗದು ಅಂತ. ಯೋಜನೆಗಳ ಅನುಷ್ಠಾನ ವಿಳಂಬವಾಗಿದೆ ಎಂದ ಮಾತ್ರಕ್ಕೆ ಕಾಲಹರಣ ಎಂದು ಭಾವಿಸಬಾರದು.

ಪಕ್ಷಾಂತರಿಗಳಿಗೆ ಮಣೆ, ನಿಷ್ಠರ ಕಡೆಗಣನೆ ಎಂಬ ಆರೋಪ ಇದೆಯಲ್ಲ?

ಕೆಲವರು ಪಕ್ಷದ ತತ್ವ, ಸಿದ್ಧಾಂತ ಒಪ್ಪಿ ನಮ್ಮತ್ತ ಬರುತ್ತಾರೆ. ಅವರನ್ನು ಕರೆದುಕೊಳ್ಳಲೇಬೇಕು. ಅದು ಅನಿವಾರ್ಯ. ಹಾಗೆಂದು ಇಲ್ಲಿ ಉಳಿದವರ ಕಡೆಗಣನೆ ಇಲ್ಲ. ಪಕ್ಷ ಅಧಿಕಾರಕ್ಕೆ ಬಂದಾಗ ಅವರಿಗೆ ಬೇರೆ ಬೇರೆ ಜವಾಬ್ದಾರಿ ಕೊಡುತ್ತೇವೆ. ಎಲ್ಲರೂ ಶಾಸಕರೇ ಆದರೆ ಮುಗಿಯಿತೇ?

ಕೆಲವರು ಬೇಸರಿಸಿಕೊಂಡಿರಬಹುದು. ವಿರೋಧ ಪಕ್ಷಗಳು ಟೀಕೆಯನ್ನೂ ಮಾಡಬಹುದು. ಇದೆಲ್ಲಾ ಸಹಜ. ಮೂಲ ಕಾಂಗ್ರೆಸ್ಸಿಗರು, ಪಕ್ಷಾಂತರಿಗಳು ಎಂದೆಲ್ಲಾ ಪ್ರತ್ಯೇಕವಾಗಿ ಭಾವಿಸಲಾಗದು.

ಅಭಿವೃದ್ಧಿಪರ ವಿಚಾರಗಳನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ.  ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಗೆಲುವೂ ಕಾಂಗ್ರೆಸ್‌ನದ್ದೇ. ಅದರಲ್ಲಿ ಸಂದೇಹ ಬೇಡ ಎಂಬ ವಿಶ್ವಾಸವೂ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.