ADVERTISEMENT

ಏಕಪಕ್ಷೀಯ ನಿರ್ಧಾರದ ಆರೋಪ

ಗಂಗಾವತಿ ತಾಲ್ಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 9 ಜನವರಿ 2014, 6:40 IST
Last Updated 9 ಜನವರಿ 2014, 6:40 IST

ಗಂಗಾವತಿ: ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ನೇತೃತ್ವದಲ್ಲಿ ನಗರದ ಸರ್ಕಾರಿ ಜೂನಿಯರ್‌ ಕಾಲೇಜು ಮೈದಾನದಲ್ಲಿ ಫೆ. 1 ಮತ್ತು 2ರಂದು 3ನೇ ತಾಲ್ಲೂಕು ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಇದರ ಯಶಸ್ಸಿಗೆ ರಚಿಸಿದ ಸಮಿತಿಗಳ ಬಗ್ಗೆ ಕನ್ನಡಪರ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ.

ಪ್ರಜಾಸತ್ತಾತ್ಮಕವಾಗಿ ಸಮಿತಿ ಪದಾಧಿಕಾರಿಗಳ ಆಯ್ಕೆ ನಡೆದಿಲ್ಲ. ಅಧ್ಯಕ್ಷ ಅಜಮೀರ ನಂದಾಪುರ ಏಕಪಕ್ಷೀಯ ನಿರ್ಣಯ ಕೈಗೊಂಡಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ.

‘ಸಮ್ಮೇಳನದ ಯಶಸ್ಸಿಗೆ ರಚಿಸಲಾದ ಸಮಿತಿ ಹಾಗೂ ಪದಾಧಿಕಾರಿಗಳ ಆಯ್ಕೆ ಗೌಪ್ಯವಾಗಿ ಮಾಡಲಾಗಿದೆ’ ಎಂದು ಕಸಾಪ ಸದಸ್ಯರಾದ ಜೆ. ಅಮರೇಶ, ಸುರೇಶ ಹಿಟ್ಟಿನ, ಸಾಧಿಕ್‌ ಇಸ್ಲಾಂಪುರ ದೂರಿದ್ದಾರೆ. 

‘ನಗರದಲ್ಲಿ ಆರಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳಿದ್ದರೂ, ಸಮಿತಿಯಲ್ಲಿ ಆವಕಾಶ ನೀಡಿಲ್ಲ’ ಎಂದು ಕರವೇ ಅಧ್ಯಕ್ಷ ಪಂಪಣ್ಣ ನಾಯಕ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಸಾಹಿತ್ಯ ಪರಿಷತ್ತಿನ ತಾಲ್ಲೂಕು ಪದಾಧಿಕಾರಿ ಯೊಬ್ಬರನ್ನು ವಿಚಾರಿಸಿದರೆ, ರಚಿಸಲಾಗಿದೆ. ಆಸಕ್ತಿ ಇದ್ದರೆ ಸಮ್ಮೇಳನಕ್ಕೆ ಬನ್ನಿ, ಇಲ್ಲವಾದೆ ಬೇಡ ಎಂಬ ಉಡಾಫೆ ಉತ್ತರ ನೀಡಿದ್ದಾರೆ. ಈ ಬಗ್ಗೆ ಶಾಸಕರ ಪೂರ್ವಭಾವಿ ಸಭೆಯಲ್ಲಿ ಪ್ರಶ್ನಿಸುತ್ತೇನೆ’ ಎಂದು ಪಂಪಣ್ಣ ಹೇಳಿದ್ದಾರೆ.

‘ಕಸಾಪ ಜಿಲ್ಲಾ ಘಟಕವನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಸಮ್ಮೇಳನಕ್ಕೆ ದಿನಾಂಕ ನಿಗದಿ ಮಾಡಿದೆ. ಇದೇ ಕಾರಣಕ್ಕೆ ಜಿಲ್ಲಾ ಘಟಕವೂ ತಾಲ್ಲೂಕಿನಲ್ಲಿ ಜಿಲ್ಲಾ ಸಮ್ಮೇಳನ ಹಮ್ಮಿಕೊಂಡಿದೆ’ ಎಂದು ಆಚಾರ ನರಸಾಪುರ ವಿಜಯಕುಮಾರ ದೂರಿದರು.

‘ಜಿಲ್ಲಾ ಘಟಕವು ಬಹಿರಂಗ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಸಿದೆ. ಆದರೆ ತಾಲ್ಲೂಕು ಘಟಕ ಮಾತ್ರ ಏಕೆ ಗೌಪ್ಯ ಸಭೆ ನಡೆಸಿ ಸಮಿತಿ ಆಯ್ಕೆ ಮಾಡಿದೆ’ ಎಂದು ಕನ್ನಡ ಸೇನೆಯ ಸದಸ್ಯ ಶರಶ್ಚಂದ್ರ ಕಾಳೆ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.